ಸೋಮಾಲಿಯಾ ಜೆಟ್ ವೇವ್ಸ್ ಮೂಲಕ ಕರಾವಳಿಗೆ ಮುಂಗಾರು ಮಳೆ ಎಂಟ್ರಿ, ಸಮುದ್ರ ಅಬ್ಬರದ ಆತಂಕ ಜಲಕ್ರೀಡೆ ಸ್ಥಗಿತ!

Published : May 19, 2026, 04:24 PM IST

ಹವಾಮಾನ ಇಲಾಖೆಯ ಚಂಡಮಾರುತ ಹಾಗೂ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಲಸಾಹಸ ಕ್ರೀಡೆ ಮತ್ತು ಪ್ರವಾಸಿ ಬೋಟಿಂಗ್ ಅನ್ನು ನಿಷೇಧಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗೋಕರ್ಣ, ಮುರುಡೇಶ್ವರ, ಮತ್ತು ನೇತ್ರಾಣಿ ದ್ವೀಪದಂತಹ ಪ್ರಮುಖ ತಾಣಗಳಲ್ಲಿ ನಿರ್ಬಂಧ.

PREV
16
ಹವಾಮಾನ ವೈಪರೀತ್ಯದ ಪ್ರಭಾವ ತೀವ್ರ

ಕಾರವಾರ: ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದ ಪ್ರಭಾವ ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದು, ಭಾರೀ ಮಳೆ ಹಾಗೂ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡದಾದ್ಯಂತ ಜಲಸಾಹಸ ಕ್ರೀಡೆ ಹಾಗೂ ಪ್ರವಾಸಿ ಬೋಟಿಂಗ್ ಚಟುವಟಿಕೆಗಳಿಗೆ ಕಟ್ಟುನಿಟ್ಟಿನ ಬ್ರೇಕ್ ಹಾಕಲಾಗಿದೆ. ಭಾರತೀಯ ಹವಾಮಾನ ಇಲಾಖೆಯು (IMD) ಚಂಡಮಾರುತದ ಮುನ್ನೆಚ್ಚರಿಕೆ ನೀಡಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಮುಂಬರುವ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರ ಸುರಕ್ಷತೆಗಾಗಿ ಈ ಕಠಿಣ ಕ್ರಮಗಳನ್ನು ಕೈಗೊಂಡಿದೆ.

26
ಕಡಲತೀರಗಳಲ್ಲಿ ಬೋಟಿಂಗ್ ಬಂದ್

ಜಿಲ್ಲಾಡಳಿತದ ಆದೇಶದನ್ವಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಕಾರವಾರ ಬೀಚ್‌ಗಳಲ್ಲಿ ಸದ್ಯಕ್ಕೆ ಪ್ರವಾಸಿ ಬೋಟಿಂಗ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಗೋಕರ್ಣದ ಪ್ರಮುಖ ಕಡಲತೀರಗಳಾದ ಓಂ ಬೀಚ್, ಕೂಡ್ಲೆ, ಹಾಫ್‌ಮೂನ್ ಹಾಗೂ ಪ್ಯಾರಡೈಸ್ ಬೀಚ್‌ಗಳಲ್ಲಿ ನಡೆಯುತ್ತಿದ್ದ ಎಲ್ಲಾ ರೀತಿಯ ಜಲಸಾಹಸ (Water Sports) ಚಟುವಟಿಕೆಗಳನ್ನು ಬಂದ್ ಮಾಡಲಾಗಿದೆ.

36
ಸ್ಕೂಬಾ ಡೈವಿಂಗ್‌ಗೆ ನಿಷೇಧ!

ಅಷ್ಟೇ ಅಲ್ಲದೆ, ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸ್ಕೂಬಾ ಡೈವಿಂಗ್ (Scuba Diving) ಪ್ರಕ್ರಿಯೆಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಸಮುದ್ರದ ಅಲೆಗಳು ಮಾತ್ರವಲ್ಲದೆ ನದಿಗಳಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಶರಾವತಿ ಹಿನ್ನೀರು ಹಾಗೂ ಅಘನಾಶಿನಿ ನದಿಯಲ್ಲಿ ಕಾರ್ಯಾಚರಿಸುತ್ತಿದ್ದ ಪ್ರವಾಸಿ ಬೋಟಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ನೈಸರ್ಗಿಕ ಸೌಂದರ್ಯದ ತಾಣವಾದ ಹೊನ್ನಾವರದ ಅಪ್ಸರಕೊಂಡ ಬೀಚ್‌ನಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ (Pre-wedding shoot) ಸೆಟ್‌ಗಳನ್ನು ಅಳವಡಿಸುವುದಕ್ಕೂ ಸಹ ನಿರ್ಬಂಧ ವಿಧಿಸಲಾಗಿದೆ. ಈ ಮೂಲಕ ಪ್ರವಾಸಿಗರು ಹಾಗೂ ಮೀನುಗಾರರು ಕಡಲತೀರ ಮತ್ತು ನದಿತೀರ ಪ್ರದೇಶಗಳಿಗೆ ತೆರಳದಂತೆ ಆಡಳಿತ ಮಂಡಳಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

46
ಕರಾವಳಿಯಲ್ಲಿ ಇಂದಿನಿಂದ ಗುಡುಗು ಸಹಿತ ಮಳೆ ಸಾಧ್ಯತೆ

ಮಂಗಳವಾರದ (ಇಂದು) ವೇಳೆಗೆ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡದ ಸಾಂದ್ರತೆ ಗಣನೀಯವಾಗಿ ಹೆಚ್ಚಾಗಲಿದೆ. ಆರಂಭದಲ್ಲಿ ಸಣ್ಣ ಹನಿಗಳ ಮಳೆಯಾಗಲಿದ್ದು, ಮಧ್ಯಾಹ್ನದ ನಂತರ, ಸಂಜೆ ಹಾಗೂ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರಸ್ತುತ ಹವಾಮಾನ ವರದಿಯ ಪ್ರಕಾರ, ಮೇ 20ರಿಂದಲೂ ಕರಾವಳಿಯಾದ್ಯಂತ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಆದರೆ, ಮೇ 26ರ ನಂತರ ಕರಾವಳಿ ತೀರದಲ್ಲಿ ಮಳೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

56
ಮುಂಗಾರಿಗೆ ವೇಗ ನೀಡಲಿರುವ 'ಸೋಮಾಲಿಯಾ ಜೆಟ್ ವೇವ್ಸ್'

ಹಿಂದೂ ಮಹಾಸಾಗರದ ಮೂಲಕ ಸಾಗಿ ಬರುವ ಮುಂಗಾರು ಮಾರುತಗಳು ಸದ್ಯಕ್ಕೆ ಕೆಲವೆಡೆ ದುರ್ಬಲಗೊಂಡಂತೆ ಕಂಡುಬರುತ್ತಿದ್ದರೂ, ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಹೊಸ ವಾಯು ಪರಿಚಲನೆಯು ಮುಂಗಾರಿಗೆ ಹೊಸ ಚೇತರಿಕೆ ನೀಡಲಿದೆ. ಪ್ರಮುಖವಾಗಿ ‘ಸೋಮಾಲಿಯಾ ಜೆಟ್ ವೇವ್ಸ್’ (ಸೋಮಾಲಿ ಕಡಿಮೆ ಮಟ್ಟದ ಗಾಳಿಯ ಪ್ರವಾಹ) ಮೂಲಕ ಮೇ 26ರಿಂದ ಅರಬ್ಬಿ ಸಮುದ್ರದಲ್ಲಿ ತೇವಾಂಶಭರಿತ ಮಾರುತಗಳು ತೀವ್ರವಾಗಿ ಚುರುಕಾಗಲಿವೆ. ಈ ಪ್ರಬಲ ಗಾಳಿಯ ಪರಿಚಲನೆಯು ಸಮುದ್ರದ ಮೇಲ್ಮೈಯಲ್ಲಿ ಹೆಚ್ಚಿನ ಮೋಡಗಳು ಸೃಷ್ಟಿಯಾಗಲು ಕಾರಣವಾಗಲಿದ್ದು, ಇಡೀ ಕರಾವಳಿ ಭಾಗದಲ್ಲಿ ಮುಂಗಾರು ಸಕ್ರಿಯಗೊಳ್ಳಲು ಪೂರಕ ವಾತಾವರಣವನ್ನು ನಿರ್ಮಿಸಲಿದೆ.

66
ಆಳ ಸಮುದ್ರದ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ!

ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಪರಿಚಲನೆ ಹೆಚ್ಚಾಗುತ್ತಿರುವುದರಿಂದ ಸಮುದ್ರದ ಅಲೆಗಳ ತೀವ್ರತೆ ರೌದ್ರರೂಪ ಪಡೆಯುವ ಸಾಧ್ಯತೆಯಿದೆ. ಮೇ 26ರಿಂದ ಮಾರುತಗಳು ಭಾರೀ ಚುರುಕಾಗಲಿರುವುದರಿಂದ, ತೀರ ಪ್ರದೇಶಗಳಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋಮೀಟರ್ ದಾಟುವ ನಿರೀಕ್ಷೆಯಿದೆ. ಈ ಆತಂಕಕಾರಿ ಹಿನ್ನೆಲೆಯಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಹೆಚ್ಚಿನ ಜಾಗ್ರತೆ ವಹಿಸಬೇಕು ಹಾಗೂ ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರದ ಹವಾಮಾನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿಕೊಂಡೇ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಬೇಕು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Read more Photos on
click me!

Recommended Stories