Shivamogga: ಅಧಿಕಾರಿಗಳ ಎಡವಟ್ಟು: ರಾಜ್ಯಪಾಲರಿಗೆ ಸಿಗದ ‘ಜೋಗ್‌ಫಾಲ್ಸ್‌’ ವೈಭವ

First Published Nov 27, 2021, 2:21 PM IST

ಶಿವಮೊಗ್ಗ(ನ.27): ಅಧಿಕಾರಿಗಳ ಎಡವಟ್ಟು ಮತ್ತು ಲೆಕ್ಕಾಚಾರದ ವ್ಯತ್ಯಾಸದಿಂದಾಗಿ ಜೋಗ ಜಲಪಾತದ ನಿಜವೈಭವವನ್ನು ರಾಜ್ಯಪಾಲ(Governor) ಥಾವರ್‌ಚಂದ್‌ ಗೆಹ್ಲೋಟ್‌(Thaawarchand Gehlot) ವೀಕ್ಷಿಸಲು ಸಾಧ್ಯವಾಗಲಿಲ್ಲ. ಹಾಗೆಂದು, ಫಾಲ್ಸ್‌ ರುದ್ರರಮಣೀಯತೆಯ ದರ್ಶನ ರಾಜ್ಯಪಾಲರಿಗೆ ತೋರಲಿಕ್ಕಾಗಿ ಲಿಂಗನಮಕ್ಕಿಯಿಂದ ಬಿಟ್ಟನೀರು ಉಪಯೋಗವಾಗಲೂ ಇಲ್ಲ. ರಾಜ್ಯಪಾಲರು ಅಲ್ಲಿಂದ ತೆರಳಿದ ಬಳಿಕ ಜೋಗದಲ್ಲಿ ಈ ನೀರು ಧುಮ್ಮಿಕ್ಕಿ ಹರಿದು ವ್ಯರ್ಥವಾಯಿತು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಘಟಿಕೋತ್ಸವಕ್ಕೆಂದು(Agricultural and Horticultural University Convention) ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಆಗಮಿಸಿದ್ದರು. ಹಿಂದಿನ ದಿನ ರಾತ್ರಿ ಜೋಗದಲ್ಲಿ ತಂಗಿದ್ದ ರಾಜ್ಯಪಾಲರು ಬೆಳಗ್ಗೆ ಎಂದು ಜೋಗ ಜಲಪಾತ(Jog Falls) ಮತ್ತು ಸುತ್ತಲಿನ ಪರಿಸರವನ್ನು ವೀಕ್ಷಿಸಿದರು.

ರಾಜ್ಯಪಾಲರಿಗೆ ಜೋಗದ ಜಲಪಾತದ ನಿಜವೈಭವವನ್ನು ಸ್ವಲ್ಪಮಟ್ಟಿಗಾದರೂ ತೋರಿಸಬೇಕೆಂದು ಯೋಜಿಸಿದ ಅಧಿಕಾರಿಗಳು ಲಿಂಗನಮಕ್ಕಿ ಜಲಾಶಯದಿಂದ(Linganamakki Dam) ಗೇಟು ತೆಗೆದು 200 ಕ್ಯುಸೆಕ್‌ ನೀರು(Water) ಬಿಟ್ಟರು. ಈ ನೀರು ಶರಾವತಿ ನದಿ(Sharavati River) ಮೂಲಕ ಜೋಗ ಜಲಪಾತಕ್ಕೆ ಬಂದು ಧುಮ್ಮಿಕ್ಕಬೇಕು. ರಾಜ್ಯಪಾಲರು ಈ ಜಲಧಾರೆ ವೈಭವ ನೋಡಿ ಆನಂದಿಸಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಆದರೆ, ಯೋಜನೆ ರೂಪಿಸಿದ ಅಧಿಕಾರಿಗೂ, ಅದನ್ನು ಕಾರ್ಯಗತಗೊಳಿಸಿದ ಅಧಿಕಾರಿಗಳ ಲೆಕ್ಕಾಚಾರಕ್ಕೂ ತಾಳಮೇಳವೇ ಇರಲಿಲ್ಲ.

ಹೀಗಾಗಿ, ರಾಜ್ಯಪಾಲರು ಜೋಗ ಜಲಪಾತ ವೀಕ್ಷಣೆಗೆ ನಿಂತಾಗ ಜಲಪಾತದಲ್ಲಿ ತೆಳ್ಳಗಿನ ನಾಲ್ಕು ಗೆರೆಗಳು ಮಾತ್ರವೇ ಕಂಡಂತಾಗುತ್ತಿತ್ತು. ಈ ವೇಳೆಗೆ ನೀರು ಧುಮ್ಮಿಕ್ಕಬೇಕಾಗಿತ್ತು. ಆದರೆ, ಗೇಟು ತೆಗೆಯುವುದು ತಡವಾಗಿದ್ದರಿಂದ ಜಲಾಶಯದಿಂದ ಜಲಪಾತಕ್ಕೆ 12 ಕಿ.ಮೀ. ದೂರ ಹರಿದು ಬರುವ ನೀರು ನಿಗದಿತ ವೇಳೆಗೆ ಬರಲಿಲ್ಲ. ಜಲಾಶಯದಿಂದ ಜಲಪಾತಕ್ಕೆ ನೀರುಹರಿದು ಬರಲು ಸುಮಾರು 2 ಗಂಟೆ ತೆಗೆದುಕೊಳ್ಳುತ್ತದೆ. ಲೆಕ್ಕಾಚಾರ ತಪ್ಪಿದ್ದರಿಂದ ರಾಜ್ಯಪಾಲರು ವೀಕ್ಷಿಸುವ ವೇಳೆಗೆ ನೀರು ಬರಲಿಲ್ಲ. ರಾಜ್ಯಪಾಲರು ‘ಬರಡು ಜೋಗ’ವನ್ನು ನೋಡಿ ವಾಪಸಾದರು.

ಇತ್ತ ರಾಜ್ಯಪಾಲರು ಜೋಗದಿಂದ ಹೊರಡುತ್ತಿದ್ದಂತೆ ಜೋಗ ಜಲಪಾತದಲ್ಲಿ ಅಬ್ಬರದ ಸದ್ದಾಯಿತು. ಜನ ಏನೆಂದು ನೋಡಿದಾಗಲೇ ಗೊತ್ತಾಗಿದ್ದು ಅಧಿಕಾರಿಗಳ ಎಡವಟ್ಟು. ಯಾರೂ ವೀಕ್ಷಣೆಗೆ ಇಲ್ಲದ ವೇಳೆ ಜೋಗ ಜಲಪಾತ ವೈಭವದಿಂದ ಧುಮ್ಮಿಕ್ಕುತ್ತಿತ್ತು.

ಒಂದೆಡೆ ಈ ಎಡವಟ್ಟು ನಡೆದರೆ, ಇನ್ನೊಂದೆಡೆ ರಾಜ್ಯಪಾಲರಿಗಾಗಿ ಇಷ್ಟೊಂದು ನೀರನ್ನು ವ್ಯರ್ಥ ಮಾಡಬೇಕಿತ್ತೇ ಎಂಬ ಪ್ರಶ್ನೆಯನ್ನು ಕೂಡ ಸಾರ್ವಜನಿಕರು ಮುಂದಿಟ್ಟಿದ್ದಾರೆ. ಬೇಸಿಗೆಯಲ್ಲಿ(Summer) ಇಡೀ ರಾಜ್ಯದ(Karnataka) ವಿದ್ಯುತ್‌(Electricity) ಸಮಸ್ಯೆ ನೀಗಿಸಬೇಕಾಗಿರುವ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು(Water) ಈ ರೀತಿ ಬಿಡಬಾರದಿತ್ತು. ಈ ಬಾರಿ ಜಲಾಶಯ ಕೂಡ ತುಂಬಿಲ್ಲ. ಅಧಿಕಾರಿಗಳ ನಿರ್ಧಾರ ಸರಿಯಲ್ಲ ಎಂಬ ಮಾತನ್ನು ಸಾರ್ವಜನಿಕರು ಆಡುತ್ತಿದ್ದಾರೆ.

click me!