ದಾಂಡೇಲಿಯ ಹಿರಿಯ ವಕೀಲ ಅಜಿತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಯಲ್ಲಾಪುರ ನ್ಯಾಯಾಲಯವು ತೀರ್ಪು ನೀಡಿದೆ. ಪ್ರಮುಖ ಆರೋಪಿ ಪಾಂಡುರಂಗ ಕಾಂಬಳೆಯನ್ನು ದೋಷಿ ಎಂದು ಘೋಷಿಸಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಉಳಿದ ನಾಲ್ವರನ್ನು ಖುಲಾಸೆಗೊಳಿಸಲಾಗಿದ್ದು, ದೋಷಿಗೆ ಶಿಕ್ಷೆಯ ಪ್ರಮಾಣ ಜ.13ರಂದು ಪ್ರಕಟವಾಗಲಿದೆ.
ರಾಜ್ಯದ ಗಮನ ಸೆಳೆದಿದ್ದ ಹಿರಿಯ ವಕೀಲ ಅಜಿತ್ ನಾಯ್ಕ ಹತ್ಯೆ ಪ್ರಕರಣ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಹಿರಿಯ ವಕೀಲ ಹಾಗೂ ಹೋರಾಟಗಾರ ಅಜಿತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಎಂಟು ವರ್ಷಗಳ ಬಳಿಕ ಮಹತ್ವದ ತೀರ್ಪು ಹೊರಬಿದ್ದಿದೆ. ಯಲ್ಲಾಪುರ ಸಂಚಾರಿ ನ್ಯಾಯಾಲಯವು ಪ್ರಕರಣದ ಮೊದಲ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆಯನ್ನು ದೋಷಿಯೆಂದು ಘೋಷಿಸಿದ್ದು, ಪ್ರಕರಣದಲ್ಲಿ ಆರೋಪಿತರಾಗಿದ್ದ ಉಳಿದ ನಾಲ್ವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದೆ. ನ್ಯಾಯಾಧೀಶ ಕಿರಣ್ ಕಿಣಿ ಅವರು ತೀರ್ಪು ಪ್ರಕಟಿಸಿದ್ದು, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಮೊದಲ ಆರೋಪಿ ದೋಷಿ ಎಂದು ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ, ದೋಷಿ ಪಾಂಡುರಂಗನಿಗೆ ವಿಧಿಸಲಾಗುವ ಅಂತಿಮ ಶಿಕ್ಷೆಯ ಪ್ರಮಾಣವನ್ನು ಜನವರಿ 13ರಂದು ಶಿರಸಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕಟಿಸಲಾಗುವುದು. ಆ ದಿನ ಜೀವಾವಧಿ ಶಿಕ್ಷೆಯೋ ಅಥವಾ ಮರಣ ದಂಡನೆಯೋ ಎಂಬ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.
27
2018 ಜುಲೈ 26ರಂದು ನಡೆದಿದ್ದ ಭೀಕರ ಹತ್ಯೆ
ಈ ಪ್ರಕರಣವು 2018ರ ಜುಲೈ 26ರಂದು ದಾಂಡೇಲಿ ನಗರದಲ್ಲಿ ನಡೆದಿದ್ದ ಭೀಕರ ಹತ್ಯೆಗೆ ಸಂಬಂಧಿಸಿದೆ. ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ, ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಅಜಿತ್ ನಾಯ್ಕ ಅವರನ್ನು ಜಮೀನು ವಿವಾದಕ್ಕೆ ಸಂಬಂಧಿಸಿದ ವೈಷಮ್ಯದ ಹಿನ್ನೆಲೆ ಕತ್ತಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೃತ್ಯ ದಾಂಡೇಲಿ ನಗರದ ಇತಿಹಾಸದಲ್ಲೇ ಕಂಡುಬರದಷ್ಟು ಹಿಂಸಾತ್ಮಕವಾಗಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು.
37
ತನಿಖೆ ಮತ್ತು ವಾದ ಮಂಡನೆ
ಪ್ರಕರಣದ ತನಿಖೆಯನ್ನು ಸಿಪಿಐ ಅನೀಸ್ ಮುಜಾವರ್ ಅವರು ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪಿ.ಸಿ. ಮಂಜುನಾಥ ಎಚ್. ಶೆಟ್ಟಿ ಅವರು ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಾಳಗೇಕರ್ ಅವರು ಸಮರ್ಥವಾಗಿ ವಾದ ಮಂಡಿಸಿ, ದೃಢ ಸಾಕ್ಷ್ಯಾಧಾರಗಳ ಮೂಲಕ ಪ್ರಮುಖ ಆರೋಪಿಗೆ ದೋಷಾರೋಪಣೆ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯ ವೇಳೆ, ಈ ಹತ್ಯೆಯ ಹಿಂದೆ ಭೂ ಮಾಫಿಯಾಗಳ ಸಂಚು ಇದ್ದುದು ಬಹಿರಂಗವಾಗಿದೆ. ತಮ್ಮ ಕಕ್ಷಿದಾರ ಮತ್ತು ಜಮೀನಿನ ನಿಜವಾದ ಮಾಲೀಕರ ಪರವಾಗಿ ಹಿರಿಯ ವಕೀಲ ಅಜಿತ್ ನಾಯ್ಕ ಅವರು ಕಾನೂನು ಹೋರಾಟದಲ್ಲಿ ಗಟ್ಟಿಯಾಗಿ ನಿಂತಿದ್ದರಿಂದ, ಅವರು ಬದುಕಿದ್ದರೆ ಜಮೀನು ಕೈಗೆ ಸಿಗುವುದಿಲ್ಲ ಎಂಬ ಭಯದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತನಿಖೆಯಿಂದ ಬಹಿರಂಗವಾಗಿದೆ.
57
ದಾಂಡೇಲಿಯ ಜನನಾಯಕ ಅಜಿತ್ ನಾಯ್ಕ
ಅಜಿತ್ ನಾಯ್ಕ ಅವರು ಕೇವಲ ವಕೀಲರಷ್ಟೇ ಅಲ್ಲ, ಕ್ರಿಯಾಶೀಲ ಹೋರಾಟಗಾರ, ಚಿಂತಕ, ರಾಜಕಾರಣಿ ಹಾಗೂ ಸಾಮಾಜಿಕ ನಾಯಕರಾಗಿದ್ದರು. ವಿದ್ಯಾರ್ಥಿ ದಿನಗಳಿಂದಲೇ ಚುರುಕು ಸ್ವಭಾವದವರಾಗಿದ್ದ ಅವರು, ಸುಮಾರು 4 ದಶಕಗಳ ಹಿಂದೆ ಆರಂಭಿಸಿದ್ದ ದಾಂಡೇಲಿಯನ್ನು ತಾಲೂಕು ಮಾಡುವ ಹೋರಾಟ ರಾಜ್ಯಮಟ್ಟದಲ್ಲಿ ಗಮನ ಸೆಳೆದಿತ್ತು. ದಾಂಡೇಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಅವರು, ದಾಂಡೇಲಿ ನ್ಯಾಯಾಲಯ ಸ್ಥಾಪನೆಗಾಗಿ 45 ದಿನಗಳ ಧರಣಿ ಸತ್ಯಾಗ್ರಹದ ಮೂಲಕ ‘ದಾಂಡೇಲಿ ಬಚಾವೋ ಆಂದೋಲನ’ ನಡೆಸಿ ರಾಜ್ಯದಾದ್ಯಂತ ಹೆಸರು ಮಾಡಿದ್ದರು.
67
ರಾಜಕೀಯ ಮತ್ತು ಸಾರ್ವಜನಿಕ ಸೇವೆ
ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದ ಅಜಿತ್ ನಾಯ್ಕ ಅವರು ದಾಂಡೇಲಿ ನಗರಸಭೆಯ ಅಧ್ಯಕ್ಷರಾಗಿಯೂ ಹಾಗೂ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಮಾರ್ಗರೇಟ್ ಆಳ್ವ ಹಾಗೂ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ರಾಜಕೀಯವಾಗಿ ಬೆಳೆದಿದ್ದ ಅವರು, ಹಲವು ವರ್ಷಗಳ ಕಾಲ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಅವರು ಗುರುತಿಸಿಕೊಂಡಿದ್ದರು.
77
ದಾಂಡೇಲಿಯನ್ನು ಬೆಚ್ಚಿಬೀಳಿಸಿದ ಹತ್ಯೆ
ದಾಂಡೇಲಿ ತಾಲೂಕು ರಚನೆಗೆ ಪ್ರಮುಖ ಕಾರಣಕರ್ತರಾಗಿದ್ದ ಅಜಿತ್ ನಾಯ್ಕ ಅವರನ್ನು, ತಮ್ಮ ಕಚೇರಿಯ ಎದುರೇ ನಿಂತಿದ್ದ ಸಂದರ್ಭದಲ್ಲೇ ಪ್ರಮುಖ ಆರೋಪಿ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಈ ಹತ್ಯೆ ದಾಂಡೇಲಿ ಜನರಲ್ಲಿ ಆಕ್ರೋಶ, ಭೀತಿ ಮತ್ತು ದುಃಖವನ್ನುಂಟುಮಾಡಿತ್ತು. ಎಂಟು ವರ್ಷಗಳ ನ್ಯಾಯಾಂಗ ಹೋರಾಟದ ಬಳಿಕ ಇದೀಗ ಪ್ರಮುಖ ಆರೋಪಿಗೆ ದೋಷಾರೋಪಣೆ ಸಾಬೀತಾಗಿರುವುದು, ನ್ಯಾಯಕ್ಕೆ ಜಯ ದೊರೆತಂತಾಗಿದೆ ಎಂಬ ಅಭಿಪ್ರಾಯವನ್ನು ಸಾರ್ವಜನಿಕ ವಲಯ ವ್ಯಕ್ತಪಡಿಸಿದೆ. ಜನವರಿ 13ರಂದು ಪ್ರಕಟವಾಗುವ ಅಂತಿಮ ಶಿಕ್ಷೆಯತ್ತ ಇದೀಗ ಇಡೀ ಉತ್ತರ ಕನ್ನಡ ಜಿಲ್ಲೆಯ ಕಣ್ಣು ನೆಟ್ಟಿದೆ.