ಮೊಸಳೆಗೆ ಊಟ ಹಾಕಬೇಡಿ ಎಂದಿದ್ದ ಎಸಿಎಫ್ ಮದನ್ ನಾಯ್ಕ ಕೊಂದ ಪ್ರವಾಸಿಗರು, 14 ವರ್ಷಗಳ ಬಳಿಕ ಆರೋಪಿಗಳಿಗೆ ಶಿಕ್ಷೆ ಪ್ರಕಟ

Published : Jan 09, 2026, 05:08 PM IST

ದಾಂಡೇಲಿ ಎಸಿಎಫ್ ಮದನ್ ನಾಯ್ಕ ಅವರ ಸಾವಿಗೆ ಸಂಬಂಧಿಸಿದ 14 ವರ್ಷಗಳ ಹಳೆಯ ಪ್ರಕರಣದಲ್ಲಿ ಯಲ್ಲಾಪುರ ಸಂಚಾರಿ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. 12 ಆರೋಪಿಗಳ ಪೈಕಿ 8 ಮಂದಿಯನ್ನು ದೋಷಿಗಳೆಂದು ಘೋಷಿಸಿದ್ದು, ಮುಖ್ಯ ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.  

PREV
15
ಯಲ್ಲಾಪುರ ಸಂಚಾರಿ ನ್ಯಾಯಾಲಯದಿಂದ ಶಿಕ್ಷೆ ಘೋಷಣೆ

ಕಾರವಾರ / ಉತ್ತರ ಕನ್ನಡ: ಬರೋಬ್ಬರಿ 14 ವರ್ಷಗಳ ಕಾನೂನು ಹೋರಾಟದ ಬಳಿಕ ದಾಂಡೇಲಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮದನ್ ನಾಯ್ಕ ಅವರ ಹತ್ಯೆ ಪ್ರಕರಣ ಸುಖಾಂತ್ಯ ಕಂಡಿದೆ. ದೀರ್ಘ ಕಾಲದ ನ್ಯಾಯಾಂಗ ಪ್ರಕ್ರಿಯೆಯ ಬಳಿಕ ಯಲ್ಲಾಪುರ ಸಂಚಾರಿ ನ್ಯಾಯಾಲಯವು ತೀರ್ಪು ಪ್ರಕಟಿಸಿದ್ದು, ಪ್ರಕರಣದ ಒಟ್ಟು 12 ಆರೋಪಿಗಳ ಪೈಕಿ 8 ಜನರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ.

25
ಮೂರನೇ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ಪ್ರಕರಣದ ಮೂರನೇ ಆರೋಪಿ ಪ್ರಶಾಂತ್ ರಾಮು ಲಂಬಾಣಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹11,000 ದಂಡ ವಿಧಿಸಲಾಗಿದೆ. ಜೊತೆಗೆ, ಮೃತ ಮದನ್ ನಾಯ್ಕ ಅವರ ಅವಲಂಭಿತರಿಗೆ ₹50,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಮೂರನೇ ಆರೋಪಿ ಹೊರತುಪಡಿಸಿ, ಆರೋಪಿತರಾದ 1 ರಿಂದ 4, 6, 8 ಮತ್ತು 10ನೇ ಆರೋಪಿಗಳಿಗೆ ತಲಾ ₹1,000 ದಂಡ ವಿಧಿಸಲಾಗಿದೆ. ಈ ಮೂಲಕ, ಪ್ರಕರಣದಲ್ಲಿ ಮಹಿಳೆಯರು ಸೇರಿದಂತೆ ಒಟ್ಟು ಎಂಟು ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ.

35
ಕೊಲೆ ಸಾಬೀತು ಮಾಡಲು ವಿಫಲ, ಆದರೆ ಹಲ್ಲೆ ಸಾಬೀತು

ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಆರೋಪಿಗಳು ಮದನ್ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿರುವುದು ಪ್ರತ್ಯಕ್ಷದರ್ಶಿ ಸಾಕ್ಷಿಗಳಿಂದ ಸ್ಪಷ್ಟವಾಗಿ ಸಾಬೀತಾಗಿದೆ. ಆದರೆ, ಕೊಲೆ ಎಂಬುದನ್ನು ಕಾನೂನುಬದ್ಧವಾಗಿ ಸಾಬೀತುಪಡಿಸಲು ಅಭಿಯೋಗ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

2012ರ ಮೇ 6ರಂದು ನಡೆದಿದ್ದ ದುರ್ಘಟನೆ

ಈ ಪ್ರಕರಣವು 2012ರ ಮೇ 6ರಂದು ದಾಂಡೇಲಿಯ ಖಾಸಗಿ ಮೊಸಳೆ ಉದ್ಯಾನವನ (ಮೊಸಳೆ ಪಾರ್ಕ್) ನಲ್ಲಿ ನಡೆದ ಘಟನೆಯಾಗಿದ್ದು, ಆ ಸಮಯದಲ್ಲಿ ಮದನ್ ನಾಯ್ಕ ಅವರು ದಾಂಡೇಲಿ ಅರಣ್ಯ ಇಲಾಖೆಯ ಎಸಿಎಫ್ ಆಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಘಟನೆ ದಿನ, ಮದ್ಯಪಾನದಲ್ಲಿದ್ದ ಪ್ರವಾಸಿಗರ ಗುಂಪೊಂದು ಮೊಸಳೆಗಳಿಗೆ ಮಾಂಸ ಎಸೆಯುತ್ತಿದ್ದುದನ್ನು ಮದನ್ ನಾಯ್ಕ ತಡೆಯಲು ಯತ್ನಿಸಿದ್ದರು. ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಈ ಕೃತ್ಯ ನಡೆಯುತ್ತಿದ್ದುದನ್ನು ಪ್ರಶ್ನಿಸಿದ್ದ ಮದನ್ ನಾಯ್ಕ ಅವರೊಂದಿಗೆ ಪ್ರವಾಸಿಗರ ಗುಂಪು ವಾಗ್ವಾದ ನಡೆಸಿತ್ತು.

45
ಪ್ರವಾಸಿಗರು ಹಾಗೂ ಮಹಿಳೆಯರಿಂದ ಮಾರಣಾಂತಿಕ ಹಲ್ಲೆ

ವಾಗ್ವಾದ ತೀವ್ರಗೊಂಡು, ಪ್ರವಾಸಿಗರು ಮತ್ತು ಅವರೊಂದಿಗೆ ಇದ್ದ ಮಹಿಳೆಯರೂ ಸೇರಿ ಮದನ್ ನಾಯ್ಕ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಮದನ್ ನಾಯ್ಕ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಧಾರವಾಡ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 8ರಂದು ಮದನ್ ನಾಯ್ಕ ಅವರು ಮೃತಪಟ್ಟಿದ್ದರು.

ಸಿಐಡಿಗೆ ತನಿಖೆ ವಹಿಸಿದ್ದ ಸರ್ಕಾರ

ಈ ಘಟನೆಯ ಬಳಿಕ ಸ್ಥಳೀಯ ಪೊಲೀಸರ ನಿಷ್ಕ್ರಿಯತೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಅಂದಿನ ರಾಜ್ಯ ಸರ್ಕಾರವು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಮೃತ ಎಸಿಎಫ್ ಮದನ್ ನಾಯ್ಕ ಅವರ ಪತ್ನಿ ಸುಮತಿ ನಾಯ್ಕ ಅವರು ನೀಡಿದ ದೂರಿನ ಆಧಾರದಲ್ಲಿ ಸಿಐಡಿ ತನಿಖೆ ಆರಂಭಿಸಿತು. ತನಿಖೆಯ ವೇಳೆ, ಅರಣ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ ಮೊಸಳೆ ಪಾರ್ಕ್ ನಡೆಸುತ್ತಿದ್ದ ಮಾಲೀಕ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು.

55
ಕೇಸ್ ಗೆದ್ದ ಪಬ್ಲಿಕ್ ಪ್ರಾಸಿಕ್ಯೂಟಗೆ ಸನ್ಮಾನ

ಈ ಪ್ರಕರಣದ ತೀರ್ಪನ್ನು ಶಿರಸಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಕಿಣಿ ಅವರು ಪ್ರಕಟಿಸಿದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಾಳಗೇಕರ್ ಅವರು ವಾದ ಮಂಡಿಸಿದ್ದರು. ಪ್ರಕರಣದ ಶಿಕ್ಷೆ ಘೋಷಣೆಯ ಬಳಿಕ, ಅರಣ್ಯ ಇಲಾಖೆ ಹಾಗೂ ವಕೀಲರ ಸಂಘದಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಮಾಳಗೇಕರ್ ಅವರಿಗೆ ಅಭಿನಂದನೆ ಹಾಗೂ ಸನ್ಮಾನ ಸಲ್ಲಿಸಲಾಯಿತು. ಅರಣ್ಯಾಧಿಕಾರಿಗಳ ಕರ್ತವ್ಯ ನಿರ್ವಹಣೆಯ ವೇಳೆ ನಡೆದ ದೌರ್ಜನ್ಯಕ್ಕೆ ನ್ಯಾಯಾಂಗ ಸ್ಪಂದನೆ ದೊರೆತಿದೆ ಎಂದು ಅರಣ್ಯ ಇಲಾಖೆ ಸಂತಸ ವ್ಯಕ್ತಪಡಿಸಿದೆ.

Read more Photos on
click me!

Recommended Stories