ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜೂ.08): ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರದೇಶ್ ಕಾಂಗ್ರೆಸ್ ಕಿಸಾನ್ ಘಟಕದ ಸಂಚಾಲಕ ಸಿ ಎನ್ . ಅಕ್ಮಲ್ ನೇತೃತ್ವದಲ್ಲಿ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಇನ್ನು ಎರಡು ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ ಎಂದು ಮುಸ್ಲಿಂ ಮುಖಂಡರು ಪ್ರಾರ್ಥನೆ ಸಲ್ಲಿಸಿದರು.
23
ರಾಜೀನಾಮೆ ಚರ್ಚೆಗಳ ನಡುವೆ ಪ್ರಾರ್ಥನೆ
ಪ್ರಾರ್ಥನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೇಶ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಸಂಚಾಲಕ ಅಕ್ಮಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ನಿರ್ವಹಿಸುವ ಅವಧಿಯಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾಗದಂತೆ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನಡೆಯುವಂತೆ ಪ್ರಾರ್ಥಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ. ರಾಜ್ಯದ ಜನತೆಗೆ ಕಲ್ಯಾಣವಾಗಲಿ. ಅವರು ಸಂಪೂರ್ಣ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ನಡೆಸುವಂತಾಗಲಿ ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಚರ್ಚೆಗಳು ಮತ್ತು ಊಹಾಪೋಹಗಳು ಕೇಳಿಬರುತ್ತಿವೆ. ಈ ಹಿನ್ನೆಲೆದಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿ ಜನಪರ ಆಡಳಿತ ನೀಡಬೇಕು ಎಂಬ ಆಶಯವನ್ನು ಪ್ರಾರ್ಥನೆಯ ಮೂಲಕ ವ್ಯಕ್ತಪಡಿಸಲಾಗಿದೆ ಎಂದು ಅಕ್ಮಲ್ ಹೇಳಿದರು.
33
ಕಾಂಗ್ರೆಸ್ ಪಕ್ಷ ಮುಸ್ಲಿಂ ನಾಯಕರನ್ನು ಕಡೆಗಣಿಸಿಲ್ಲ
ಈ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಅಕ್ಮಲ್, ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ನಾಯಕರನ್ನು ಎಂದಿಗೂ ಮೂಲೆಗುಂಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಜಮೀರ್ ಅಹಮದ್ ಖಾನ್ ಅವರಿಗೂ ಪಕ್ಷವು ಅನೇಕ ಜವಾಬ್ದಾರಿಗಳನ್ನು ಮತ್ತು ಸ್ಥಾನಮಾನಗಳನ್ನು ನೀಡಿದೆ. ಆದ್ದರಿಂದ ಪಕ್ಷದ ಬಗ್ಗೆ ಅವರಿಗೆ ಕೃತಜ್ಞತೆ ಇರಬೇಕು” ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಹೋರಾಟ ನಡೆಸುವುದು ಸರಿಯಲ್ಲ ಎಂದು ಅಕ್ಮಲ್ ಅಭಿಪ್ರಾಯಪಟ್ಟರು. ರಾಜಕಾರಣದಲ್ಲಿ ಧರ್ಮವನ್ನು ತರುವುದು ನಾಚಿಕೆಗೇಡಿನ ಸಂಗತಿ. ಯಾವುದೇ ಹೋರಾಟ ಅಥವಾ ಪ್ರತಿಭಟನೆ ಧರ್ಮದ ಆಧಾರದ ಮೇಲೆ ನಡೆಯಬಾರದು. ಅದು ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಜಮೀರ್ ಪರವಾಗಿ ನಡೆಯುತ್ತಿರುವ ಕೆಲವು ಪ್ರತಿಭಟನೆಗಳ ಕುರಿತು ಪರೋಕ್ಷವಾಗಿ ಟೀಕಿಸಿದ ಅವರು, ಮುಸ್ಲಿಂ ಸಮುದಾಯದ ಅನೇಕ ಸಮಸ್ಯೆಗಳ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಆರೋಪವನ್ನೂ ಮಾಡಿದರು.ಈ ವೇಳೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಕಾಂಗ್ರೆಸ್ ಮುಸ್ಲಿಂ ಮುಖಂಡರನ್ನು ಸ್ಮರಿಸಿದರು.