ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್: ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೂ ಜಲಕಂಟಕ, ಆತ್ಮಲಿಂಗ ಸ್ಪರ್ಶ ದರ್ಶನ ಸ್ಥಗಿತ

Published : Jun 08, 2026, 04:19 PM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ, ಗೋಕರ್ಣದ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ನೀರು ನುಗ್ಗುವ ಸಾಧ್ಯತೆಯಿಂದ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

PREV
15

ಕಾರವಾರ (ಜೂ.08): ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಜಾನೆಯಿಂದಲೇ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ನದಿಗಳು ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಹವಾಮಾನ ಇಲಾಖೆ ಇಂದು ಮತ್ತು ನಾಳೆ ಉತ್ತರ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

25

ಆತ್ಮಲಿಂಗ ದರ್ಶನ ಸ್ಥಗಿತ

ಭಾರೀ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯಕ್ಕೂ ಜಲಕಂಟಕ ಎದುರಾಗಿದೆ. ನಿರಂತರ ಮಳೆಯಿಂದ ದೇವಾಲಯದ ಗರ್ಭಗುಡಿಗೆ ನೀರು ನುಗ್ಗುವ ಸಾಧ್ಯತೆ ಕಂಡುಬಂದಿರುವುದರಿಂದ ದೇವಾಲಯ ಆಡಳಿತ ಉಸ್ತುವಾರಿ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಕ್ತರು ನೇರವಾಗಿ ಆತ್ಮಲಿಂಗವನ್ನು ಸ್ಪರ್ಶಿಸಿ ದರ್ಶನ ಪಡೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

35

ದೇವಾಲಯದ ಆಡಳಿತದ ಆದೇಶದಂತೆ, ಮುಂದಿನ ಸೂಚನೆ ಬರುವವರೆಗೆ ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬದಲಾಗಿ ಭಕ್ತರು ದೇವಾಲಯದ ನಂದಿ ಮಂಟಪದಿಂದಲೇ ಆತ್ಮಲಿಂಗದ ದರ್ಶನ ಪಡೆಯಬಹುದಾಗಿದೆ. ಭಕ್ತರ ಸುರಕ್ಷತೆ ಹಾಗೂ ದೇವಾಲಯದ ಒಳಭಾಗದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೇವಾಲಯ ಮೂಲಗಳು ತಿಳಿಸಿವೆ.

45

ಅನಗತ್ಯ ಪ್ರಯಾಣ ಮುಂದೂಡಿ

ಗೋಕರ್ಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮುಂಗಾರು ಮಳೆಯ ತೀವ್ರತೆಯಿಂದಾಗಿ ದೇವಾಲಯ ಆಡಳಿತ ಭಕ್ತರಿಗೆ ಎಚ್ಚರಿಕೆ ನೀಡಿದ್ದು, ಅನಗತ್ಯ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡಲು ಸೂಚಿಸಿದೆ. ಸಮುದ್ರ ತೀರ ಪ್ರದೇಶಗಳಲ್ಲೂ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಪ್ರವಾಸಿಗರು ಹಾಗೂ ಸ್ಥಳೀಯರು ಜಾಗರೂಕರಾಗಿರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

55

ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ತಗ್ಗು ಪ್ರದೇಶದ ನಿವಾಸಿಗಳು, ಮೀನುಗಾರರು ಹಾಗೂ ಪ್ರವಾಸಿಗರು ವಿಶೇಷ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಮುಂಗಾರು ಅಬ್ಬರದ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡಳಿತ ಯಂತ್ರ ಸಂಪೂರ್ಣ ಎಚ್ಚರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Read more Photos on
click me!

Recommended Stories