ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿ ಆಯ್ಕೆಯು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಸ್ಪರ್ಧೆ ಹಾಗೂ ಸುಮಲತಾ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.
ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಹೈಕಮಾಂಡ್ ಮಟ್ಟದಲ್ಲೇ ನಡೆದಿದೆ
ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಹೈಕಮಾಂಡ್ ಮಟ್ಟದಲ್ಲೇ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಕುರಿತು ಅಥವಾ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ರಾಜ್ಯ ಮಟ್ಟದಲ್ಲಿ ನಡೆದ ಚರ್ಚೆಗಳು ಹಾಗೂ ಹೈಕಮಾಂಡ್ ತಗೆದುಕೊಂಡ ಅಂತಿಮ ತೀರ್ಮಾನಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
24
ದೇವೇಗೌಡರ ಬಗ್ಗೆ ಗೌರವವಿದೆ, ಆದರೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿರಲಿಲ್ಲ!
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಎನ್‌ಡಿಎ (NDA) ಜಂಟಿ ಅಭ್ಯರ್ಥಿಯಾಗಿ ರಾಜ್ಯಸಭೆ ಕಣಕ್ಕಿಳಿಯದ ವಿಚಾರವಾಗಿ ಉದ್ಭವಿಸಿರುವ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯೇಂದ್ರ, ಈ ವಿಷಯದಲ್ಲಿ ಹೈಕಮಾಂಡ್ ನೇರ ನಿರ್ಧಾರ ಕೈಗೊಂಡಿದೆ ಎಂದರು. ಎಚ್.ಡಿ. ದೇವೇಗೌಡರು ದೇಶದ ಅತ್ಯಂತ ಹಿರಿಯ ನಾಯಕರು ಹಾಗೂ ಮಾಜಿ ಪ್ರಧಾನಿಗಳು. ಅವರ ಬಗ್ಗೆ ನಮಗೆ ಮತ್ತು ಇಡೀ ರಾಜ್ಯಕ್ಕೆ ಅಪಾರ ಗೌರವವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸವನ್ನು ಅವರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುವ ಕುರಿತು ರಾಜ್ಯ ಮಟ್ಟದ ಕೋರ್ ಕಮಿಟಿಯಲ್ಲಾಗಲಿ ಅಥವಾ ಸ್ಥಳೀಯ ನಾಯಕರ ಮಟ್ಟದಲ್ಲಾಗಲಿ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ವರಿಷ್ಠರೇ ಈ ಬಗ್ಗೆ ನೇರ ತೀರ್ಮಾನ ಕೈಗೊಂಡಿದ್ದಾರೆ.
34
ಟಿಕೆಟ್ ವಂಚಿತ ಸುಮಲತಾ ಅಂಬರೀಶ್ ಬಗ್ಗೆ ಏನಂದ್ರು
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಬಿಟ್ಟುಕೊಟ್ಟಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ಸಿಗಬಹುದು ಎಂಬ ಬಲವಾದ ನಿರೀಕ್ಷೆಯಿತ್ತು. ಆದರೆ ಈ ಬಾರಿಯೂ ನಿರೀಕ್ಷೆ ಹುಸಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸುಮಲತಾ ಅವರ ತ್ಯಾಗವನ್ನು ಪಕ್ಷ ಮರೆತಿಲ್ಲ ಎಂಬ ಭರವಸೆ ನೀಡಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದಾಗ ಬಿಜೆಪಿ ಅವರಿಗೆ ಸಂಪೂರ್ಣ ಬೆಂಬಲ ನೀಡಿತ್ತು. ತದನಂತರ ಅವರು ಬಿಜೆಪಿಯನ್ನು ಅಧಿಕೃತವಾಗಿ ಬೆಂಬಲಿಸಿದರು. ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿ ಧರ್ಮಕ್ಕಾಗಿ ಬಿಟ್ಟುಕೊಟ್ಟಿದ್ದೂ ಕೂಡ ಪಕ್ಷದ ಗಮನದಲ್ಲಿದೆ. ಸುಮಲತಾ ಅವರ ಹೆಸರು ಕೂಡಾ ಪ್ರಸ್ತಾಪ ಅಗಿತ್ತು. ಆದರೆ ಇಂದಿನ ರಾಜಕೀಯ ಸ್ಥಿತಿ ಗಮನದಲ್ಲಿಟ್ಟುಕೊಂಡು ವರಿಷ್ಠರು ತೀರ್ಮಾನ ಮಾಡಿದ್ದಾರೆ ಆದರೆ ಇಲ್ಲಿಗೇ ಎಲ್ಲವೂ ಮುಗಿದಿಲ್ಲ. ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಪಕ್ಷದಲ್ಲಿ ಅತ್ಯಂತ ಸೂಕ್ತ ಹಾಗೂ ಗೌರವಯುತ ಸ್ಥಾನಮಾನ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ವಿಜಯೇಂದ್ರ ತಿಳಿಸಿದರು.
ಸಾಮಾಜಿಕ ನ್ಯಾಯದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ: ಎಲ್ಲರಿಗೂ ಸಂತೋಷ ತಂದಿದೆ
ಇದೇ ಸಂದರ್ಭದಲ್ಲಿ ಹೈಕಮಾಂಡ್ ಪ್ರಕಟಿಸಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿ.ವೈ. ವಿಜಯೇಂದ್ರ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ವರಿಷ್ಠರು ಹೆಸರು ಘೋಷಣೆ ಮಾಡಿದ್ದಾರೆ. ರಾಜ್ಯಸಭೆಗೆ ಕುರುಬ ಸಮುದಾಯದ ನಾಗರಾಜ್ ಅವರನ್ನು ಅಯ್ಕೆ ಮಾಡಲಾಗಿದೆ. ವಿಧಾನ ಪರಿಷತ್ ಗೆ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮಡಿವಾಳ ಸಮುದಾಯದ ರಘು ಕೌಟಿಲ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಎಲ್ಲರಿಗೂ ಸಂತೋಷ ತಂದಿದೆ ವರಿಷ್ಠರ ಈ ನಡೆ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಸಂತಸ ಮೂಡಿಸಿದೆ ಎಂದು ಅವರು ಹೇಳಿದರು.
ವಿಶೇಷವಾಗಿ ಹಿಂದುಳಿದ ಮಡಿವಾಳ ಸಮುದಾಯದ ಅತ್ಯಂತ ಸಕ್ರಿಯ ನಾಯಕರಾದ ರಘು ಕೌಟಿಲ್ಯ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿರುವುದು ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತೋರಿಸುತ್ತದೆ. ಒಟ್ಟಾರೆಯಾಗಿ, ವರಿಷ್ಠರು ಇಂದಿನ ರಾಜಕೀಯ ಸ್ಥಿತ್ಯಂತರಗಳು ಹಾಗೂ ಸಮುದಾಯಗಳ ಸಮತೋಲನವನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿ ಈ ತೀರ್ಮಾನ ಪ್ರಕಟಿಸಿದ್ದಾರೆ ಎಂದು ವಿಜಯೇಂದ್ರ ಸಮರ್ಥಿಸಿಕೊಂಡರು.