ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡಾಟ: ಖಾಸಗಿ ಜೀಪಿನಲ್ಲಿ ಅಕ್ರಮ ಪ್ರವೇಶ, ಕಾಡಾನೆಗಳನ್ನು ಕೆಣಕಿದ ಯುವಕರು!

Published : Jun 02, 2026, 07:49 PM IST

ಚಿಕ್ಕಮಗಳೂರಿನ ಭದ್ರಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಯುವಕರ ತಂಡವೊಂದು ಖಾಸಗಿ ಜೀಪಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡಾನೆಗಳಿಗೆ ಕಿರುಕುಳ ನೀಡಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

PREV
16

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ವಲಯ ವ್ಯಾಪ್ತಿಯ ಭದ್ರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಯುವಕರ ತಂಡವೊಂದು ಖಾಸಗಿ ಓಪನ್ ಜೀಪಿನಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಡಾನೆಗಳನ್ನು ಕಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ವನ್ಯಜೀವಿ ಸಂರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

26

ಅರಣ್ಯದಲ್ಲಿ ತೆರೆದ ಜೀಪಿನಲ್ಲಿ ಸಂಚಾರ :

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕರ ಗುಂಪೊಂದು ತೆರೆದ ಜೀಪಿನಲ್ಲಿ ಅರಣ್ಯದೊಳಗೆ ತೆರಳಿ ಸಫಾರಿ ಮಾದರಿಯಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಡಾನೆಗಳ ಸಮೀಪಕ್ಕೆ ಜೀಪ್ ತೆಗೆದುಕೊಂಡು ಹೋಗಿ, ಕೂಗಾಟ-ಕಿರುಚಾಟ ನಡೆಸಿರುವ ದೃಶ್ಯಗಳು ದಾಖಲಾಗಿವೆ. ಯುವಕರ ವರ್ತನೆಯಿಂದ ಉದ್ರಿಕ್ತಗೊಂಡ ಕಾಡಾನೆಯೊಂದು ಜೀಪಿನತ್ತ ವೇಗವಾಗಿ ಅಟ್ಟಿಸಿಕೊಂಡು ಬಂದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.

36

ಸ್ಥಳೀಯರ ಮಾಹಿತಿ ಪ್ರಕಾರ, ಘಟನೆ ತರೀಕೆರೆ ತಾಲೂಕಿನ ಹೆಬ್ಬೆ ವಲಯ ವ್ಯಾಪ್ತಿಯಲ್ಲಿ ನಡೆದಿರಬಹುದೆಂದು ಹೇಳಲಾಗುತ್ತಿದೆ. ಅಲ್ಲದೆ, ಈ ಪ್ರದೇಶವು ಹುಲಿ ಸಂರಕ್ಷಿತ ಅರಣ್ಯದ ಸೂಕ್ಷ್ಮ ವಲಯಕ್ಕೆ ಸಮೀಪದಲ್ಲಿರುವ ಕಾರಣ, ಖಾಸಗಿ ವಾಹನಗಳಿಗೆ ಪ್ರವೇಶ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯವಾಗಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಅನುಮೋದಿತ ವಾಹನಗಳು ಮತ್ತು ನಿಗದಿತ ಮಾರ್ಗಗಳಲ್ಲಿ ಮಾತ್ರ ಸಫಾರಿಗೆ ಅವಕಾಶ ಇರುತ್ತದೆ. ಆದರೆ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವುದು ಖಾಸಗಿ ಓಪನ್ ಜೀಪ್ ಆಗಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿವೆ.

46

ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆ ?

ವನ್ಯಜೀವಿಗಳ ಸಮೀಪ ತೆರಳಿ ಅವುಗಳನ್ನು ಕೆಣಕುವುದು, ಜೋರಾಗಿ ಶಬ್ದ ಮಾಡುವುದು, ಅವುಗಳ ಚಲನವಲನಕ್ಕೆ ಅಡ್ಡಿಪಡಿಸುವುದು ವನ್ಯಜೀವಿ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗಬಹುದು ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಕಾಡಾನೆಗಳಂತಹ ಸೂಕ್ಷ್ಮ ಹಾಗೂ ಶಕ್ತಿಶಾಲಿ ಪ್ರಾಣಿಗಳನ್ನು ಪ್ರಚೋದಿಸುವುದು ಮಾನವ ಜೀವಕ್ಕೂ ಅಪಾಯಕಾರಿಯಾಗಿದೆ.

ತಜ್ಞರ ಪ್ರಕಾರ, ಕಾಡಿನಲ್ಲಿ ಸಂಚರಿಸುವಾಗ ಪ್ರಾಣಿಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ. ಆದರೆ ವೈರಲ್ ವಿಡಿಯೋದಲ್ಲಿ ಯುವಕರು ಆನೆಗಳ ಅತಿ ಸಮೀಪಕ್ಕೆ ತೆರಳಿರುವುದು ಕಂಡುಬಂದಿದ್ದು, ಇದು ಅರಣ್ಯ ಪ್ರದೇಶಗಳಲ್ಲಿ ಪಾಲಿಸಬೇಕಾದ ಮೂಲಭೂತ ಸುರಕ್ಷತಾ ನಿಯಮಗಳನ್ನೇ ಉಲ್ಲಂಘಿಸಿದಂತಾಗಿದೆ.

56

ಅರಣ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪ

ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ. ಸಂರಕ್ಷಿತ ಅರಣ್ಯ ಪ್ರದೇಶದೊಳಗೆ ಖಾಸಗಿ ವಾಹನ ಪ್ರವೇಶಿಸಿದ್ದರೆ ಅದನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಮತ್ತೊಂದೆಡೆ, ಸಂಬಂಧಿತ ವಾಹನ ಮತ್ತು ಯುವಕರ ಚಟುವಟಿಕೆಗಳ ಬಗ್ಗೆ ಇಲಾಖೆಗೆ ಮಾಹಿತಿ ಇತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.ಪರಿಸರವಾದಿಗಳು, ವನ್ಯಜೀವಿ ಹೋರಾಟಗಾರರು ಹಾಗೂ ಸ್ಥಳೀಯ ಸಂಘಟನೆಗಳು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ. ಜೀಪ್ ಅನ್ನು ವಶಕ್ಕೆ ಪಡೆದು, ಸಂಬಂಧಿತ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

66

ರಾಜಕೀಯ ಪ್ರಭಾವ ಬಳಕೆಯ ಅನುಮಾನ

ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಪ್ರಶ್ನೆಯೂ ಉದ್ಭವಿಸಿದೆ. ಅರಣ್ಯದ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶ ಪಡೆಯಲು ಕೆಲವರು ರಾಜಕೀಯ ಅಥವಾ ಇತರೆ ಪ್ರಭಾವ ಬಳಸಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ನಿಜಾಂಶ ಹೊರಬರಲು ತನಿಖೆಯ ಅಗತ್ಯವಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕಾಡಾನೆಗಳು ಸಾಮಾನ್ಯವಾಗಿ ತಮ್ಮ ವ್ಯಾಪ್ತಿಯಲ್ಲಿ ಅಪಾಯ ಕಂಡುಬಂದರೆ ಅಥವಾ ಪ್ರಚೋದನೆಗೆ ಒಳಗಾದರೆ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. 

ಈ ಘಟನೆಯಲ್ಲಿ ಕಾಡಾನೆಯೊಂದು ಜೀಪಿನತ್ತ ಅಟ್ಟಿಸಿಕೊಂಡು ಬಂದಿರುವುದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇಂತಹ ಘಟನೆಗಳು ಕೇವಲ ಮಾನವರ ಜೀವಕ್ಕೆ ಮಾತ್ರವಲ್ಲ, ವನ್ಯಜೀವಿಗಳಿಗೂ ತೊಂದರೆ ಉಂಟುಮಾಡುತ್ತವೆ. ನಿರಂತರ ಕಾಟ, ಶಬ್ದ ಮತ್ತು ಕಿರುಕುಳದಿಂದ ಪ್ರಾಣಿಗಳ ಸಹಜ ವರ್ತನೆ ಬದಲಾಗುವ ಸಾಧ್ಯತೆ ಇದ್ದು, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುವ ಅಪಾಯವೂ ಇದೆ.

ಈ ಘಟನೆಯ ಬಳಿಕ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಭದ್ರತಾ ವ್ಯವಸ್ಥೆ, ಗಸ್ತು ಕಾರ್ಯಾಚರಣೆ, ಪ್ರವೇಶ ನಿಯಂತ್ರಣ ಹಾಗೂ ನಿಗಾವ್ಯವಸ್ಥೆ ಕುರಿತು ಮತ್ತೆ ಪ್ರಶ್ನೆಗಳು ಕೇಳಿಬರುತ್ತಿವೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

Read more Photos on
click me!

Recommended Stories