ತಾಯಿ ಸಾವಿನ ನೋವಿನಲ್ಲೂ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ! ಅಬ್ದುಲ್ ಅಫಾನ್‌ಗೆ ಡಿಡಿಪಿಐ ಮೆಚ್ಚುಗೆ

Published : Mar 18, 2026, 02:51 PM IST

ಚಾಮರಾಜನಗರದ ವಿದ್ಯಾರ್ಥಿ ಅಬ್ದುಲ್ ಅಫಾನ್, ತಾಯಿ ನಿಧನದ ಅತೀವ ದುಃಖದ ನಡುವೆಯೂ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ. ಶಿಕ್ಷಣದ ಮೇಲಿನ ಈತನ ಬದ್ಧತೆ ಮತ್ತು ಧೈರ್ಯವು ಎಲ್ಲರಿಗೂ ಮಾದರಿಯಾಗಿದ್ದು, ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

PREV
16
ತಾಯಿ ಸತ್ತರೂ ಕಣ್ಣೀರಿಡುತ್ತಲೇ ಪರೀಕ್ಷೆಗೆ ಬಂದ ವಿದ್ಯಾರ್ಥಿ

ಚಾಮರಾಜನಗರ: ಹೆತ್ತ ತಾಯಿಯ ಅಗಲಿಕೆಯ ಅತೀವ ದುಃಖ ಒಂದು ಕಡೆ, ಭವಿಷ್ಯ ರೂಪಿಸುವ ಪರೀಕ್ಷೆಯ ಜವಾಬ್ದಾರಿ ಇನ್ನೊಂದು ಕಡೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಚಾಮರಾಜನಗರದ ವಿದ್ಯಾರ್ಥಿಯೊಬ್ಬ ತೋರಿದ ಧೈರ್ಯ ಮತ್ತು ಶಿಕ್ಷಣದ ಮೇಲಿರುವ ಬದ್ಧತೆ ಈಗ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುವಂತೆ ಮಾಡಿದೆ. ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳಲ್ಲಿ ಈ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ.

26
ಕ್ಯಾನ್ಸರ್‌ನಿಂದ ಮೃತಪಟ್ಟಿದ್ದ ತಾಯಿ

ಚಾಮರಾಜನಗರದ ಕ್ರೆಸೆಂಟಾ ಅಕಾಡೆಮಿ ಶಾಲೆಯ ವಿದ್ಯಾರ್ಥಿಯಾಗಿರುವ ಅಬ್ದುಲ್ ಅಫಾನ್ ಈ ಸಾಹಸ ತೋರಿದ ಬಾಲಕ. ಅಫಾನ್ ತಾಯಿ ನೂರ್ ಜಹರಾ ಅವರು ಕಳೆದ ಕೆಲವು ಸಮಯದಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ (ಮಂಗಳವಾರ) ರಾತ್ರಿ ನಿಧನರಾದರು. ಪರೀಕ್ಷೆಯ ತಯಾರಿಯಲ್ಲಿದ್ದ ಮಗನಿಗೆ ತಾಯಿಯ ಸಾವು ಅತಿದೊಡ್ಡ ಆಘಾತ ನೀಡಿತು.

36
ಅಂತ್ಯಕ್ರಿಯೆ ಮುಗಿಸಿ ನೇರ ಪರೀಕ್ಷೆಗೆ

ತಾಯಿಯ ಅಗಲಿಕೆಯಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ಇಂದು ಬೆಳ್ಳಂಬೆಳಗ್ಗೆ ತಾಯಿ ನೂರ್ ಜಹರಾ ಅವರ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತಾಯಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರು ಸುರಿಸುತ್ತಿದ್ದ ಅಫಾನ್, ಆ ದುಃಖದ ನಡುವೆಯೂ ತನ್ನ ಶಿಕ್ಷಣ ಕುಂಠಿತವಾಗಬಾರದು ಎಂದು ನಿರ್ಧರಿಸಿದನು. ಅಂತ್ಯಕ್ರಿಯೆ ಮುಗಿದ ತಕ್ಷಣವೇ ಮನಸ್ಸನ್ನು ಗಟ್ಟಿ ಮಾಡಿಕೊಂಡು ಚಾಮರಾಜನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಹಾಜರಾದನು.

46
ಕಣ್ಣೀರಿನ ನಡುವೆಯೇ ಪರೀಕ್ಷೆ

ಪರೀಕ್ಷಾ ಕೊಠಡಿಯೊಳಗೆ ಕುಳಿತಿದ್ದ ಅಫಾನ್ ಕಣ್ಣುಗಳಲ್ಲಿ ಕಣ್ಣೀರು ಜಿನುಗುತ್ತಿದ್ದರೂ, ಕೈಗಳು ಮಾತ್ರ ಪರೀಕ್ಷೆ ಬರೆಯುವುದರಲ್ಲಿ ಮಗ್ನವಾಗಿದ್ದವು. ತಾಯಿಯ ಆಸೆಯಂತೆ ತಾನು ಓದಿ ದೊಡ್ಡವನಾಗಬೇಕು ಎಂಬ ಹಂಬಲ ಆತನಲ್ಲಿ ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಯ ಈ ಸ್ಥಿತಿಯನ್ನು ಕಂಡು ಸಹಪಾಠಿಗಳು ಹಾಗೂ ಪರೀಕ್ಷಾ ಮೇಲ್ವಿಚಾರಕರು ಕೂಡ ಭಾವುಕರಾದರು.

56
ಶಿಕ್ಷಣ ಇಲಾಖೆ ಮೆಚ್ಚುಗೆ:

ಅಬ್ದುಲ್ ಅಫಾನ್ ತೋರಿದ ಈ ಅಸಾಧಾರಣ ಬದ್ಧತೆಗೆ ಶಾಲಾ ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ಹಾಗೂ ಶಿಕ್ಷಣಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಾಯಿಯನ್ನು ಕಳೆದುಕೊಂಡ ಆಘಾತದಲ್ಲೂ ಪರೀಕ್ಷೆಗೆ ಹಾಜರಾಗಿರುವುದು ಆತನ ಧೈರ್ಯವನ್ನು ತೋರಿಸುತ್ತದೆ. ಇತರ ವಿದ್ಯಾರ್ಥಿಗಳಿಗೆ ಈತ ಮಾದರಿಯಾಗಿದ್ದಾನೆ' ಎಂದು ಡಿಡಿಪಿಐ ಹರ್ಷ ವ್ಯಕ್ತಪಡಿಸಿದ್ದಾರೆ.

66
ಅಫಾನ್‌ಗೆ ಹಾರೈಕೆಗಳ ಮಹಾಪೂರ

ಪರೀಕ್ಷೆಯ ಒತ್ತಡದ ನಡುವೆ ಇಂತಹ ವೈಯಕ್ತಿಕ ದುರಂತ ಸಂಭವಿಸಿದರೂ ಎದೆಗುಂದದೆ ಪರೀಕ್ಷೆ ಎದುರಿಸಿದ ಅಬ್ದುಲ್ ಅಫಾನ್ ಈಗ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದಾನೆ. ಆತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

Read more Photos on
click me!

Recommended Stories