ಬೆಂಗಳೂರಿನಲ್ಲಿರುವ ಜಪಾನ್ ಮತ್ತು ಡಚ್ ರಾಯಭಾರ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು (ಫೆ.09): ರಾಜಧಾನಿ ಬೆಂಗಳೂರಿನಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಿಗೆ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೇವಲ 10 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಇಂತಹ ಬೆದರಿಕೆ ಮೇಲ್ ಬಂದಿರುವುದು ಪೊಲೀಸರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ.
ಸೋಮವಾರ (ಇಂದು) ಬೆಳಿಗ್ಗೆ 8:40ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದ್ದು, ಇದರಲ್ಲಿ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
25
ಬೆದರಿಕೆ ಮೇಲ್‌ನಲ್ಲೇನಿದೆ?
ನಗರದಲ್ಲಿರುವ ಜಪಾನ್ ಹಾಗೂ ಡಚ್ (ನೆದರ್ಲ್ಯಾಂಡ್ಸ್) ರಾಯಭಾರ ಕಚೇರಿಗಳಿಗೆ ಈ ಬೆದರಿಕೆ ಮೇಲ್ ಬಂದಿದೆ. ಮೇಲ್ ಕಳುಹಿಸಿರುವ ಕಿಡಿಗೇಡಿಗಳು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಅತ್ಯಂತ ಗಂಭೀರ ಹಾಗೂ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. 'ಕೋರಮಂಡಲ್ ಹೋಟೆಲ್‌ನ (Coromandel Hotel) ರೂಮ್ ನಂಬರ್ 536ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾ*ಚಾರ ನಡೆಸಲಾಗಿದೆ.
ಅರ್ಜುನ್ ದೊರೆ ರಾಜಶೇಖರ್ ಎಂಬ ವ್ಯಕ್ತಿ, ವಿಐಪಿಯೊಬ್ಬರನ್ನು ಪರಿಚಯಿಸುವುದಾಗಿ ನಂಬಿಸಿ ಮಹಿಳೆಯನ್ನು ಕರೆದೊಯ್ದಿದ್ದ. ಅಲ್ಲಿ ಉದಯನಿಧಿ ಸ್ಟಾಲಿನ್ ಅರೆಬೆತ್ತಲೆಯಾಗಿ ಕುಳಿತಿದ್ದರು ಮತ್ತು ಅವರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ' ಎಂದು ಮೇಲ್‌ನಲ್ಲಿ ಆರೋಪಿಸಲಾಗಿದೆ.
35
ಪೊಲೀಸರ ವಿರುದ್ಧ ಆಕ್ರೋಶ, ಬಾಂಬ್ ಬೆದರಿಕೆ:
ಮೇಲ್‌ನಲ್ಲಿ ಮುಂದುವರಿದು, 'ಈ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಪೊಲೀಸ್ ದೂರು ನೀಡಲು ಹೋದರೆ, ಅಲ್ಲಿನ ಪೊಲೀಸರು ಪ್ರಭಾವಕ್ಕೆ ಮಣಿದು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲ. ಈ ಕಾರಣಕ್ಕಾಗಿ ನಾವು ಜಪಾನ್ ರಾಯಭಾರ ಕಚೇರಿಯ ವಾಶ್ ರೂಮ್ ಸೇರಿದಂತೆ ಕಚೇರಿಯ ಆವರಣದಲ್ಲಿ 4 ಆರ್‌ಡಿಎಕ್ಸ್ (RDX) ಹಾಗೂ ಐಇಡಿ (IED) ಬಾಂಬ್‌ಗಳನ್ನು ಇರಿಸಿದ್ದೇವೆ' ಎಂದು ಬೆದರಿಕೆ ಹಾಕಲಾಗಿದೆ. ಈ ಸಂದೇಶವು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.
ಬೆದರಿಕೆ ಮೇಲ್ ಬಂದ ತಕ್ಷಣ ಎಚ್ಚೆತ್ತುಕೊಂಡ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡಲೇ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಸಂಬಂಧಪಟ್ಟ ಠಾಣಾ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ (Bomb Squad) ಮತ್ತು ಶ್ವಾನ ದಳದೊಂದಿಗೆ (Dog Squad) ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಇಡೀ ಕಚೇರಿಯನ್ನು ಜಾಲಾಡಲಾಗಿದೆ. ವಾಶ್ ರೂಮ್ ಸೇರಿದಂತೆ ಕಚೇರಿಯ ಮೂಲೆ ಮೂಲೆಯನ್ನೂ ತಪಾಸಣೆ ನಡೆಸಲಾಗುತ್ತಿದೆ.
55
10 ದಿನದಲ್ಲಿ 2ನೇ ಬಾರಿ
ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಇದೇ ರೀತಿ ಬೆಂಗಳೂರಿನ ಹಲವು ಕಡೆಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಈಗ ಮತ್ತೆ ವಿದೇಶಿ ರಾಯಭಾರ ಕಚೇರಿಗಳನ್ನೇ ಗುರಿಯಾಗಿಸಿಕೊಂಡು, ರಾಜಕೀಯ ನಾಯಕರ ಹೆಸರನ್ನು ಬಳಸಿಕೊಂಡು ಬೆದರಿಕೆ ಹಾಕಿರುವುದು ಇದೊಂದು ಹುಸಿ ಬೆದರಿಕೆ ಅಥವಾ ಕಿಡಿಗೇಡಿಗಳ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ, ಭದ್ರತೆಯ ದೃಷ್ಟಿಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸೈಬರ್ ಕ್ರೈಮ್ ಪೊಲೀಸರು ಮೇಲ್ ಬಂದ ಐಪಿ ಅಡ್ರೆಸ್ (IP Address) ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.