ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಪತಿಯ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವಾದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಪತಿಯ ಮನೆಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಹಣಮಂತ ಮಾರಾಪೂರ ಮತ್ತು ಹಸೀನಾ ನದಾಫ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
24
ಮದುವೆ ನಂತರವೂ ಪ್ರಿಯಕರನೊಂದಿಗೆ ಸಂಪರ್ಕ
ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ ನದಾಫ್ ಅವರು ಕಳೆದೆರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರವೂ ಹಣಮಂತ ಮಾರಾಪೂರ ಅವರೊಂದಿಗೆ ಸಂಪರ್ಕದಲ್ಲಿದ್ದ ಹಸೀನಾ, ಆತನೊಂದಿಗೆ ಸೇರಿ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ.
34
ದೂರು ದಾಖಲಿಸಿದ್ದ ಪತಿ
ಹೊಸಕೋಟಿ ಗ್ರಾಮದ ಶರೀಫ್ ಎಂಬುವರ ಮನೆಯಲ್ಲಿ 154.6 ಗ್ರಾಂ ತೂಕದ, ₹21 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 45 ಗ್ರಾಂ ತೂಕದ, ₹11 ಸಾವಿರ ಮೌಲ್ಯದ ಬೆಳ್ಳಿ ಆಭರಣ ಕಳುವಾಗಿತ್ತು. ಈ ಸಂಬಂಧ ದಿಲಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸೈ ಬಸವರಾಜ್ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ 48 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಕಳವಾದ ಎಲ್ಲ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ರಾಮದುರ್ಗ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.