Bengaluru ಟೋಲ್ ಮುಕ್ತ ಹೆದ್ದಾರಿ: 631ಕೋಟಿ ವೆಚ್ಚ, 100ಮೀ ಅಗಲ, 10ಲೇನ್‌ಗಳ SM Krishna Road ಜೂ.27ಕ್ಕೆ ಲೋಕಾರ್ಪಣೆ

Published : Jun 25, 2026, 04:27 PM IST

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ  ನಿರ್ಮಿಸಿರುವ 'ಮೇಜರ್‌ ಆರ್ಟೀರಿಯಲ್‌ ರಸ್ತೆ' ಜೂನ್ 27ರಂದು ಲೋಕಾರ್ಪಣೆಗೊಳ್ಳಲಿದೆ. 'ಎಸ್‌.ಎಂ.ಕೃಷ್ಣ ರಸ್ತೆ' ಎಂದು ನಾಮಕರಣಗೊಂಡಿರುವ ಈ ಟೋಲ್-ಮುಕ್ತ ಹೆದ್ದಾರಿಯು, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸಿ, ಸಂಚಾರ ದಟ್ಟಣೆ ಕಡಿಮೆಗೊಳಿಸುತ್ತದೆ

PREV
16
ಮೇಜರ್‌ ಆರ್ಟೀರಿಯಲ್‌ ರಸ್ತೆ

ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಉಪನಗರಗಳ ಆರ್ಥಿಕತೆಗೆ ಹೊಸ ಚೈತನ್ಯ ತುಂಬಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಂಡಿರುವ ಅತ್ಯಂತ ಮಹತ್ವಾಕಾಂಕ್ಷಿ ‘ಮೇಜರ್‌ ಆರ್ಟೀರಿಯಲ್‌ ರಸ್ತೆ (ಎಂಎಆರ್)’ ಲೋಕಾರ್ಪಣೆಗೆ ಸಿದ್ಧವಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ಈ ವಿಶಾಲ ರಸ್ತೆಗೆ ಮಾಜಿ ಎಸ್‌.ಎಂ.ಕೃಷ್ಣ ರಸ್ತೆ’ ಎಂದು ನಾಮಕರಣ ಮಾಡಲಾಗಿದ್ದು, ನಾಡಪ್ರಭು ಕೆಂಪೇಗೌಡ ಜಯಂತಿಯ ದಿನವಾದ ಜೂನ್ 27ರಂದು ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಯಾವುದೇ ಸಿಗ್ನಲ್ ಮತ್ತು ಟೋಲ್ ಇಲ್ಲದೆ ಅತಿ ಕಡಿಮೆ ಸಮಯದಲ್ಲಿ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯು, ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ನಡುವೆ ಪ್ರಗತಿಯ ಹೊಸ ಕಾರಿಡಾರ್ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ.

26
ಭವಿಷ್ಯ ಗಮನದಲ್ಲಿ ಹೈಟೆಕ್‌ ರೋಡ್

ಸ್ಟಾರ್ ಇನ್ಫೋಟೆಕ್ ಕಂಪನಿಯು ಅತ್ಯಂತ ದಕ್ಷತೆಯಿಂದ ನಿರ್ಮಿಸಿರುವ ಈ ರಸ್ತೆಯು ತಾಂತ್ರಿಕ ನಾವೀನ್ಯತೆಗೆ ಸಾಕ್ಷಿಯಾಗಿದೆ. ಒಟ್ಟು ವೆಚ್ಚ ₹631 ಕೋಟಿಯಾಗಿದೆ. 10.7 ಕಿ.ಮೀ ಉದ್ದ, 100 ಮೀಟರ್ (330 ಅಡಿ) ಅಗಲ ಇದೆ. 10 ಲೇನ್‌ಗಳ ವಿಶಾಲ ರಸ್ತೆ (ಆಧುನಿಕ ಸರ್ವಿಸ್ ರಸ್ತೆಗಳು ಸೇರಿ) ಪ್ರಯಾಣದ ಅವಧಿ 60 ನಿಮಿಷದಿಂದ 20 ನಿಮಿಷಕ್ಕೆ ಇಳಿಕೆ (40 ನಿಮಿಷ ಉಳಿತಾಯ). 13 ಪ್ರಮುಖ ಅಂಡರ್‌ಪಾಸ್‌ಗಳು, 11 ಸೇತುವೆಗಳು, 270 ಮೀಟರ್ ಉದ್ದದ ಸುರಂಗ ಮಾರ್ಗ ಈ ರಸ್ತೆಯಲ್ಲಿ ಸಿಗಲಿದೆ. 13 ಮೀಟರ್ ಅಗಲದ ರಸ್ತೆ ವಿಭಜಕ, ಸೈಕಲ್ ಟ್ರ್ಯಾಕ್, ಮತ್ತು ಎರಡೂ ಬದಿಗಳಲ್ಲಿ 27 ಮೀಟರ್ ಅಗಲದ ಹಸಿರು ವಲಯ (ಮರದ ತೋಪು)ಇರಲಿದೆ. ಇದು ಭವಿಷ್ಯದಲ್ಲಿ ಬೆಂಗಳೂರು ಮೆಟ್ರೊ ಜಾಲವನ್ನು ವಿಸ್ತರಿಸಲು ವಿಶೇಷ ಅವಕಾಶ.

36
ನೈಸ್ ರಸ್ತೆಗೆ ಪರ್ಯಾಯ: ಉದ್ಯಮ ಹಾಗೂ ವಾಣಿಜ್ಯ ವಲಯಕ್ಕೆ ವರದಾನ

ಈ ರಸ್ತೆಯು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‌ನಿಂದ ಮೈಸೂರು ರಸ್ತೆಯ ಚಲ್ಲಘಟ್ಟ ಮೆಟ್ರೊ ನಿಲ್ದಾಣದವರೆಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಇದು ಕೇವಲ ವಾಹನ ಸಂಚಾರಕ್ಕೆ ಸೀಮಿತವಾಗದೆ, ಬೆಂಗಳೂರಿನ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬಲಿದೆ.

ಟೋಲ್ ಮುಕ್ತ ಪ್ರಯಾಣ: ಸರಕು ಸಾಗಣೆ ವಾಹನಗಳು ಯಾವುದೇ ಟೋಲ್ ಶುಲ್ಕವಿಲ್ಲದೆ, 'ನೈಸ್ ರಸ್ತೆ'ಗೆ ಪರ್ಯಾಯವಾಗಿ ನಗರದ ಹೃದಯಭಾಗವನ್ನು ಪ್ರವೇಶಿಸದೆಯೇ ಸಾಗಬಹುದು. ಇದರಿಂದ ಇಂಧನ, ಸಮಯ ಮತ್ತು ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗಲಿದೆ.

ಕೈಗಾರಿಕೆಗಳಿಗೆ ವೇಗದ ಕೊಂಡಿ: ಪೀಣ್ಯ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕೆಂಗೇರಿ, ಬಿಡದಿ, ರಾಮನಗರ ಹಾಗೂ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ತೆರಳುವ ಕಾರ್ಮಿಕ ವರ್ಗ, ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ಇದು ವರದಾನವಾಗಲಿದೆ.

ಹೊಸ ಉದ್ಯೋಗ ಸೃಷ್ಟಿ: ಮಾಗಡಿ ಮತ್ತು ಮೈಸೂರು ರಸ್ತೆ ಭಾಗದಲ್ಲಿ ಉತ್ತಮ ಸಂಪರ್ಕ ಏರ್ಪಡುವುದರಿಂದ ಹೊಸ ಹೂಡಿಕೆಗಳು ಆಕರ್ಷಿತವಾಗಲಿವೆ. ಗುಡಿ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದ್ದು, ಸ್ಥಳೀಯವಾಗಿ ಅಪಾರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಗ್ರಾಮೀಣ ಭಾಗದ ಪ್ರಗತಿ: ಈ ರಸ್ತೆಯು ಮಾಚೋಹಳ್ಳಿ, ಕೊಡಿಗೆಹಳ್ಳಿ, ಕನ್ನಳ್ಳಿ, ಕೆಂಚನಪುರ, ಸೂಲಿಕೆರೆ, ಕೊಮ್ಮಘಟ್ಟ ಹಾಗೂ ಚಲ್ಲಘಟ್ಟ ಗ್ರಾಮಗಳಿಗೆ ಹೊಂದಿಕೊಂಡಿರುವುದರಿಂದ ಈ ಭಾಗದ ಗ್ರಾಮೀಣ ಪ್ರದೇಶಗಳೂ ವೇಗವಾಗಿ ಅಭಿವೃದ್ಧಿ ಹೊಂದಲಿವೆ.

46
ತಾಂತ್ರಿಕ ಸವಾಲುಗಳು ಮತ್ತು ಇಂಜಿನಿಯರಿಂಗ್ ಚಮತ್ಕಾರ

ಯೋಜನೆಯ ಅನುಷ್ಠಾನದ ಹಂತದಲ್ಲಿ ಹಲವು ತಾಂತ್ರಿಕ ಮತ್ತು ಪರಿಸರ ಸಂಬಂಧಿ ಸವಾಲುಗಳು ಎದುರಾಗಿದ್ದವು. ಆದರೆ ಬಿಡಿಎ ಮತ್ತು ನಿರ್ಮಾಣ ಸಂಸ್ಥೆ ಅವುಗಳನ್ನು ಸಮರ್ಥವಾಗಿ ಎದುರಿಸಿವೆ:

'ಬಾಕ್ಸ್ ಪುಷಿಂಗ್' ತಂತ್ರಜ್ಞಾನ: ಬೆಂಗಳೂರು-ಮೈಸೂರು ಜೋಡಿ ಮಾರ್ಗದ ರೈಲ್ವೆ ಹಳಿಗಳಿಗೆ ಅಡ್ಡಲಾಗಿ ಈ ರಸ್ತೆ ಹಾದುಹೋಗುತ್ತದೆ. ರೈಲು ಸಂಚಾರಕ್ಕೆ ಯಾವುದೇ ತಡೆಯಾಗದಂತೆ 'ಬಾಕ್ಸ್ ಪುಷಿಂಗ್' ತಂತ್ರಜ್ಞಾನ ಬಳಸಿ, ರೈಲ್ವೆ ಒಡೆತನದ 40 ಮೀಟರ್ ಉದ್ದ ಹಾಗೂ 14 ಮೀಟರ್ ಅಗಲದ ಎರಡು ಕೆಳಸೇತುವೆಗಳನ್ನು ಸ್ಟಾರ್ ಇನ್ಫೋಟೆಕ್ ಕಂಪನಿ ಕೇವಲ ಮೂರು ತಿಂಗಳಲ್ಲಿ ನಿರ್ಮಿಸಿ ಸೈ ಎನಿಸಿಕೊಂಡಿದೆ.

ಪರಿಸರ ಮತ್ತು ಪ್ರಾಣಿ ಸಂಕುಲದ ರಕ್ಷಣೆ: ಈ ರಸ್ತೆಯು ಸೂಲಿಕೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದುಹೋಗುವುದರಿಂದ ಸುಮಾರು 2.5 ಎಕರೆ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಆದರೆ, ಪ್ರಾಣಿಗಳ ಮುಕ್ತ ಚಲನೆಗೆ ಧಕ್ಕೆ ಬರದಂತೆ ಅರಣ್ಯ ಇಲಾಖೆಯ ಅನುಮೋದನೆ ಪಡೆದು, ವನ್ಯಜೀವಿಗಳಿಗಾಗಿಯೇ ಎರಡು ವಿಶೇಷ ಕೆಳಸೇತುವೆಗಳನ್ನು (Underpasses) ನಿರ್ಮಿಸಲಾಗಿದೆ.

56
ಬಿಡಿಎ ಅಧಿಕಾರಿಗಳ ಶ್ರಮ ಮತ್ತು ಕಾನೂನು ಹೋರಾಟದ ಯಶಸ್ಸು

ಒಟ್ಟು 321 ಎಕರೆ ವಿಶಾಲ ಪ್ರದೇಶದಲ್ಲಿ ಈ ರಸ್ತೆಯನ್ನು ರೂಪಿಸುವಾಗ ಬಿಡಿಎಗೆ ಸಾಲು ಸಾಲು ಸವಾಲುಗಳು ಎದುರಾಗಿದ್ದವು. ಭೂಸ್ವಾಧೀನ ಪ್ರಕ್ರಿಯೆ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ, ಭೂಸ್ವಾಧೀನ ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 100ಕ್ಕೂ ಹೆಚ್ಚು ದಾವೆಗಳು ದಾಖಲಾಗಿದ್ದವು.

ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಹಾಗೂ ಆಯುಕ್ತರಾದ ಮಣಿವಣ್ಣನ್‌ ನೇತೃತ್ವದ ಅಧಿಕಾರಿಗಳ ತಂಡವು ಸಮರ್ಥ ವಕೀಲರ ಮೂಲಕ ಈ ಎಲ್ಲಾ ಕಾನೂನು ಆತಂಕಗಳನ್ನು ನಿವಾರಿಸಿತು. ಕೇವಲ ಕಾನೂನು ಹೋರಾಟ ಮಾತ್ರವಲ್ಲದೆ, ಅಧಿಕಾರಿಗಳು ಸ್ಥಳೀಯ ನಿವಾಸಿಗಳೊಂದಿಗೆ ನಿರಂತರ ಸಂವಾದ ನಡೆಸಿ, ಯೋಜನೆಯ ಮಹತ್ವ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮನವರಿಕೆ ಮಾಡಿಕೊಟ್ಟು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

66
ಬಿಡಿಎ ಸಾಮಾಜಿಕ ಜವಾಬ್ದಾರಿ

ಜೊತೆಗೆ, ಕೆಂಪೇಗೌಡ ಬಡಾವಣೆಯ ಸುತ್ತಮುತ್ತಲಿನ 11 ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡುವ ಸಲುವಾಗಿ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಬಿಡಿಎ ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದಿದೆ.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕನಸು ಕಂಡಿದ್ದ ಆಧುನಿಕ, ಜಾಗತಿಕ ಮಟ್ಟದ ಹಾಗೂ ಹೂಡಿಕೆ ಸ್ನೇಹಿ ಬೆಂಗಳೂರಿನ ಪರಿಕಲ್ಪನೆಗೆ ಈ ರಸ್ತೆ ಅತ್ಯುತ್ತಮ ಉದಾಹರಣೆಯಾಗಿದೆ. ನಗರಾಭಿವೃದ್ಧಿಯ ಜೊತೆಗೆ ಕೈಗಾರಿಕಾ ಪ್ರಗತಿಗೂ ಹೊಸ ದಿಕ್ಸೂಚಿಯಾಗಲಿರುವ ಈ ಹೆದ್ದಾರಿ, ಜೂನ್ 27ರಿಂದ ರಾಜಧಾನಿಯ ಹೆಮ್ಮೆಯ ಕಿರೀಟಕ್ಕೆ ಮತ್ತೊಂದು ಗರಿಯಾಗಿದೆ.

Read more Photos on
click me!

Recommended Stories