ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದ ವೇಳೆ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವನಿಗೆ 'ಗೋ ಬ್ಯಾಕ್' ಹೇಳ್ತಿದ್ದೆ ನನಗೆ ಸಿಗಲಿಲ್ಲ
ಮಾಧ್ಯಮಗಳೊಂದಿಗೆ ಮಾತನಾಡಿದ ಬಾಣೂರು ಚನ್ನಪ್ಪ, ಅವನಿಗೆ ಗೋ ಬ್ಯಾಕ್ ಅಂತ ಹೇಳಿದ್ದೆ. ಆದರೆ ಆತ ನನಗೆ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಸವಣ್ಣನ ಅನುಯಾಯಿಗಳ ನಡುವೆ ಬರಲು ಅವನಿಗೆ ಅಧಿಕಾರವಿಲ್ಲ ಎಂದು ಕಿಡಿಕಾರಿದ ಅವರು, 'ವಿಶ್ವಗುರು ಬಸವಣ್ಣನ ಅನುಯಾಯಿಗಳು ಇರುವ ಈ ನೆಲಕ್ಕೆ ಬಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡುವ ಹಕ್ಕು ಯಾರಿಗೂ ಇಲ್ಲ. ಲಿಂಗಧಾರಿಗಳನ್ನು ದಾರಿ ತಪ್ಪಿಸಲು ಆತ ಇಲ್ಲಿಗೆ ಬಂದಿದ್ದಾನೆ' ಎಂದು ಆರೋಪಿಸಿದರು.
23
ಕೋಟಿ ಕೋಟಿ ಕೊಟ್ಟು ಬುಕ್ ಮಾಡಿದ್ದಾರೆ
ಕನ್ನೇರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ ಚನ್ನಪ್ಪ, 'ಯಾವುದೋ ಸಂಘಟನೆಗೆ ಆತ ಗುಲಾಮನಾಗಿದ್ದಾನೆ. ಕೋಟಿ ಕೋಟಿ ರೂಪಾಯಿ ನೀಡಿ ಅವನನ್ನು ಬುಕ್ ಮಾಡಿದ್ದಾರೆ. ನಮ್ಮ ಗುರುಗಳನ್ನು ಅವಮಾನಿಸಲು ಇವನ್ಯಾರು? ಬಸವ ಅನುಯಾಯಿಗಳನ್ನ ತಾಲಿಬಾನ್‌ಗಳೆನ್ನುವ ಮೂಲಕ ಬಸವಣ್ಣ ಹಾಗೂ ಅವರ ಅನುಯಾಯಿಗಳಿಗೆ ಅವಮಾನ ಮಾಡಿದ್ದಾನೆ. ವಿಶ್ವಗುರು ಬಸವಣ್ಣನ ತತ್ವಗಳನ್ನು ಅನುಸರಿಸುವವರನ್ನು ತಾಲಿಬಾನ್ ಎಂದು ಕರೆಯುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾವಿ ತೊಟ್ಟ ಬಾಯಲ್ಲಿ ಇಂತಹ ಮಾತು ಬರಬಾರದು
ಖಾವಿ ಧರಿಸಿದವರ ಬಾಯಿಂದ ಇಂತಹ ಕೆಟ್ಟ ಪದಗಳು ಬರಬಾರದು. ಸಮಾಜವನ್ನು ಒಡೆಯುವ ಬದಲು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು. ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದ ಹಿನ್ನೆಲೆ ಕುವೆಂಪು ಕಲಾಮಂದಿರದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
33
ಬೆಳಗಾವಿಯಲ್ಲೂ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಒತ್ತಾಯ
ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಜೂನ್ 28ರಂದು ಆಯೋಜಿಸಲು ಉದ್ದೇಶಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟಿಸಿ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಉತ್ತರ ಕರ್ನಾಟಕದ ವಿವಿಧೆಡೆ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಿ, ಲಿಂಗಾಯತ ಮಠಾಧೀಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಸಾಂವಿಧಾನಿಕ ಪದ ಬಳಸಿ ತೇಜೋವಧೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ, ಬಾಯಿ ಚಪಲತೆಯಿಂದ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದರಿಂದ ಬಸವ ಭಕ್ತರಿಗೆ ನೋವಾಗಿದೆ. ಈಗ ಮತ್ತೆ ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಅನುಮತಿ ನೀಡಬಾರದು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ.