ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದ 28 ವರ್ಷದ ಮಿಚೆಲ್ ಮಾರ್ಷ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿದಿದ್ದರು. ಆರ್‌ಸಿಬಿ ಆರಂಭಿಕ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್‌ಗೆ ಬೌಲಿಂಗ್ ಮಾಡುವ ವೇಳೆ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದರು.
RCB ವಿರುದ್ಧ 5ನೇ ಓವರ್‌ನಲ್ಲಿ ಬೌಲಿಂಗ್ ಮಾಡಲಿಳಿದ ಮಾರ್ಷ್ ಕೇವಲ 4 ಎಸೆತ ಹಾಕುವಷ್ಟರಲ್ಲೇ ಜಾರಿ ಬಿದ್ದು ಪಾದದ ನೋವಿಗೆ ತುತ್ತಾದರು. ಆ ಬಳಿಕ ಪೆವಿಲಿಯನ್ನಿಗೆ ಸೇರಿದವರು ಮತ್ತೆ ಬೌಲಿಂಗ್ ಮಾಡಲು ಇಳಿಯಲಿಲ್ಲ. ಇನ್ನು ತಂಡ ಸಂಕಷ್ಟದಲ್ಲಿದ್ದಾಗ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಬಂದರಾದರೂ ಕೇವಲ ಒಂದೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಅವರ ಪರಿಸ್ಥಿತಿ ಸದ್ಯ ಅಷ್ಟೇನು ಉತ್ತಮವಾಗಿಲ್ಲ. ನೋವಿಗೆ ತುತ್ತಾದರೂ ಬ್ಯಾಟಿಂಗ್ ಮಾಡಲಿಳಿದು ತಂಡಕ್ಕೆ ಸಾದ್ಯವಾದಷ್ಟು ನೆರಲು ನೀಡಲು ಬಯಸಿದ್ದನ್ನು ನಿಜಕ್ಕೂ ಮೆಚ್ಚಬೇಕು. ಅವರು ಎಕ್ಸ್ ರೇ ಮಾಡಿಸಿಕೊಳ್ಳಲಿದ್ದು, ಹೆಚ್ಚು ತೊಂದರೆಗೆ ಒಳಗಾಗದಿರಲಿ ಎಂದು ಹಾರೈಸುತ್ತೇನೆ. ಅವರು ಸಾಕಷ್ಟು ನೋವಿನಿಂದ ಬಳಲಿದ್ದು ಕಂಡು ಬಂದಿದೆ ಎಂದು ಪಂದ್ಯ ಮುಕ್ತಾಯದ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೇಳಿದ್ದರು.
ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಿಚೆಲ್ ಮಾರ್ಷ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವುದಾಗಿ ಖಚಿತ ಪಡಿಸಿದೆ.
ಗಾಯದ ಸಮಸ್ಯೆಯಿಂದಾಗಿ ಮಿಚೆಲ್ ಮಾರ್ಷ್ ನಮ್ಮ ತಂಡದಿಂದ ಹೊರಬಿದ್ದಿದ್ದಾರೆ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಇದೀಗ ಅವರ ಸ್ಥಾನಕ್ಕೆ ಜೇಸನ್ ಹೋಲ್ಡರ್ ಅವರನ್ನು ಸ್ವಾಗತಿಸುತ್ತಿದ್ದೇವೆ ಎಂದು ಹೈದರಾಬಾದ್ ಫ್ರಾಂಚೈಸಿ ಟ್ವೀಟ್ ಮಾಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋಲ್ಕತದಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮಿಚೆಲ್ ಮಾರ್ಷ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.
ವೆಸ್ಟ್ ಇಂಡೀಸ್ ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್ ಈ ಹಿಂದೆ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ಇಲ್ಲಿಯವರೆಗೂ ಜೇಸನ್ ಹೋಲ್ಡರ್ 11 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಕಳೆದ ವರ್ಷ ನಡೆದ ಐಪಿಎಲ್ ಆಟಗಾರ ಹರಾಜಿನಲ್ಲಿ 75 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಜೇಸನ್ ಹೋಲ್ಡರ್ ಅವರನ್ನು ಯಾವೊಬ್ಬ ಫ್ರಾಂಚೈಸಿಯೂ ಖರೀದಿಸುವ ಮನಸು ಮಾಡಿರಲಿಲ್ಲ.