BREAKING: ಕೊನೆಗೂ ಮುಗಿದ ಅನಿಶ್ಚಿತತೆ: ತಮಿಳುನಾಡಿನ ಇತಿಹಾಸದಲ್ಲೇ ಮೊದಲು ಮೈತ್ರಿ ಸರ್ಕಾರ; ವಿಜಯ್ ಕೈಹಿಡಿದ ತಿರುಮಾವಳವನ್!

Published : May 09, 2026, 05:12 PM IST

ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ವಿಸಿಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ತಲುಪಿದೆ. ಈ ಮೂಲಕ ತಮಿಳುನಾಡಿನಲ್ಲಿ 62 ವರ್ಷಗಳ ದ್ರಾವಿಡ ಪಕ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಮೊದಲ ಬಾರಿಗೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

PREV
17
ಕೊನೆಗೂ ಮುಗಿದ ಅನಿಶ್ಚಿತತೆ

ಸತತ ಮೂರು ದಿನಗಳಿಂದ ತಮಿಳುನಾಡು ರಾಜಕೀಯದಲ್ಲಿ ಮನೆಮಾಡಿದ್ದ ಅನಿಶ್ಚಿತತೆ ಕೊನೆಗೂ ಅಂತ್ಯವಾಗಿದೆ. ಸೂಪರ್‌ಸ್ಟಾರ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ವಿಸಿಕೆ (VCK) ಪಕ್ಷವು ವಿಜಯ್‌ಗೆ ಬೇಷರತ್ ಬೆಂಬಲ ಘೋಷಿಸುವುದರೊಂದಿಗೆ, ತಮಿಳುನಾಡಿನಲ್ಲಿ ಮೊದಲ ಬಾರಿಗೆ 'ಮೈತ್ರಿ ಸರ್ಕಾರ' ಅಸ್ತಿತ್ವಕ್ಕೆ ಬರಲಿರುವುದು ದೃಢಪಟ್ಟಿದೆ.

27
ಮೈತ್ರಿ ಲೆಕ್ಕಾಚಾರ

ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ವಿಜಯ್ ಮೈತ್ರಿಕೂಟವು ಈ ಮೊದಲು 116 ಶಾಸಕರ (ಟಿವಿಕೆ 107, ಕಾಂಗ್ರೆಸ್ 5, ಎಡಪಕ್ಷಗಳು 4) ಬಲ ಹೊಂದಿತ್ತು. ಈಗ ವಿಸಿಕೆಯ ಇಬ್ಬರು ಶಾಸಕರು ಬೆಂಬಲ ಸೂಚಿಸಿರುವುದರಿಂದ ಮೈತ್ರಿಕೂಟದ ಸಂಖ್ಯಾಬಲ 118ಕ್ಕೆ ಏರಿಕೆಯಾಗಿದ್ದು, ಬಹುಮತದ ಗಡಿಯನ್ನು ತಲುಪಿದೆ.

37
ರಾಜ್ಯಪಾಲ ಅರ್ಲೇಕರ್‌ಗೆ ಪತ್ರ

ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದು, "ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಖಚಿತಪಡಿಸುವ ಹಿತದೃಷ್ಟಿಯಿಂದ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆಗೆ ನಮ್ಮ ಇಬ್ಬರು ಶಾಸಕರು ಬೇಷರತ್ ಬೆಂಬಲ ನೀಡುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

47
ರಾಜಭವನದಲ್ಲಿದ್ದ ಅಡಚಣೆ ನಿವಾರಣೆ

ಬುಧವಾರದಿಂದಲೇ ವಿಜಯ್ ಹಲವು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರೂ, ಸಂಖ್ಯಾಬಲದ ಲಿಖಿತ ದಾಖಲೆ ನೀಡದ ಕಾರಣ ಸರ್ಕಾರ ರಚಿಸಲು ಆಹ್ವಾನ ಸಿಕ್ಕಿರಲಿಲ್ಲ. ವಿಸಿಕೆ ನೀಡುತ್ತಿದ್ದ ಪರಸ್ಪರ ವಿರೋಧಿ ಹೇಳಿಕೆಗಳಿಂದಾಗಿ ವಿಜಯ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗಿತ್ತು. ಆದರೆ ಶನಿವಾರ ಮಧ್ಯಾಹ್ನ ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರು ಬೆಂಬಲ ಪತ್ರವನ್ನು ಹಸ್ತಾಂತರಿಸುವುದರೊಂದಿಗೆ ಎಲ್ಲಾ ಗೊಂದಲಗಳು ಬಗೆಹರಿದಿವೆ.

57
ದ್ರಾವಿಡ ಪಕ್ಷಗಳ 62 ವರ್ಷಗಳ ಪಾರುಪತ್ಯಕ್ಕೆ ಬ್ರೇಕ್

ಕೇವಲ ಎರಡು ವರ್ಷಗಳ ಹಿಂದೆ ಪಕ್ಷ ಸ್ಥಾಪಿಸಿದ್ದ ವಿಜಯ್, ಈ ಚುನಾವಣೆಯಲ್ಲಿ 108 ಸ್ಥಾನಗಳನ್ನು (ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಪ್ರಸ್ತುತ 107 ಶಾಸಕರು) ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ 62 ವರ್ಷಗಳ ಸುದೀರ್ಘ ಆಡಳಿತದ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.

67
59 ಸ್ಥಾನ ಗೆದ್ದಿದ್ದ ಡಿಎಂಕೆ

ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4 ಸ್ಥಾನಗಳನ್ನು ಗೆದ್ದಿವೆ. ವಿಸಿಕೆ, ಎಡಪಕ್ಷಗಳು ಮತ್ತು ಐಯುಎಂಎಲ್ ತಲಾ 2 ಸ್ಥಾನಗಳನ್ನು ಪಡೆದಿದ್ದರೆ, ಬಿಜೆಪಿ, ಡಿಎಂಡಿಕೆ ಮತ್ತು ಎಎಮ್‌ಎಂಕೆ ತಲಾ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.

77
ಸಚಿವ ಸಂಪುಟದ ಸವಾಲು

ಎಡಪಕ್ಷಗಳು ವಿಜಯ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದು, ಸಂಪುಟ ಸೇರದಿರಲು ತೀರ್ಮಾನಿಸಿವೆ. ಆದರೆ, ಬೆಂಬಲ ನೀಡಿರುವ ಕಾಂಗ್ರೆಸ್ ಎರಡು ಸಚಿವ ಸ್ಥಾನಗಳ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ. ಇದೇ ವೇಳೆ ಎಐಎಡಿಎಂಕೆಯ ಮೂವರು ಶಾಸಕರು ಬಂಡಾಯವೆದ್ದು ಟಿವಿಕೆ ಸೇರುವ ಸಾಧ್ಯತೆ ಇರುವುದು ದ್ರಾವಿಡ ಪಕ್ಷಗಳಿಗೆ ಮತ್ತೊಂದು ಆಘಾತ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories