ರೈಲಿನಲ್ಲಿ ಪ್ರಯಾಣಿಸುವ ಜನರನ್ನು 'ಸೆಕೆಂಡ್ ಕ್ಲಾಸ್ ಪ್ಯಾಸೆಂಜರ್ಸ್' ಎಂದು ಕರೆಯುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪರಿಹಾರ ಪ್ರಕರಣದ ವಿಚಾರಣೆ ವೇಳೆ, ಈ ಅಭಿಪ್ರಾಯಪಟ್ಟಿದೆ.
ರೈಲಿನಲ್ಲಿ ಪ್ರಯಾಣಿಸುವ ಜನರನ್ನು 'ಸೆಕೆಂಡ್ ಕ್ಲಾಸ್ ಪ್ಯಾಸೆಂಜರ್ಸ್' (ದ್ವಿತೀಯ ದರ್ಜೆ ಪ್ರಯಾಣಿಕರು) ಎಂದು ಸಂಬೋಧಿಸುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ಮಹತ್ವದ ಸಲಹೆ ನೀಡಿದೆ. ಪ್ರಯಾಣದ ದರ್ಜೆಯು ರೈಲಿನ ಕೋಚ್‌ಗಳಿಗೆ (ಡಬ್ಬಿಗಳಿಗೆ) ಸೀಮಿತವಾಗಿರಬೇಕೇ ಹೊರತು, ಅದನ್ನು ಪ್ರಯಾಣಿಸುವ ಮನುಷ್ಯರನ್ನು ವರ್ಗೀಕರಿಸಲು ಬಳಸಬಾರದು. ಇಂತಹ ಪದಬಳಕೆಯು ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧ ಎಂದಿದೆ.ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ವಿಧವೆ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಜುಲೈ 17 ರಂದು ನೀಡಿರುವ 19 ಪುಟಗಳ ಸುದೀರ್ಘ ತೀರ್ಪಿನಲ್ಲಿ ಈ ಮಹತ್ವದ ಆದೇಶ ಹೊರಬಿದ್ದಿದೆ.
26
ತೀರ್ಪಿನ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಅವಲೋಕನ
ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ನೊಂಗ್ಮೈಕಾಪಮ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಕ್ಲಾಸ್ ಅಥವಾ ದರ್ಜೆಯ ಪದಬಳಕೆಯನ್ನು ಕೋಚ್‌ಗಳಿಗೆ ಮಾತ್ರ ಸೀಮಿತಗೊಳಿಸಬೇಕು ಮತ್ತು ಪ್ರಯಾಣಿಕರಿಗಲ್ಲ ಎಂದು ನಾವು ಸಲಹೆ ನೀಡುತ್ತೇವೆ ಎಂದು ಪೀಠ ಹೇಳಿದೆ. 2015 ರ ನವೆಂಬರ್ 28 ರಂದು ರಾಯ್‌ಪುರದಿಂದ ಅಹಮದಾಬಾದ್‌ಗೆ ಹೌರಾ ಮೇಲ್ (ರೈಲು ಸಂಖ್ಯೆ: 12834) ಮೂಲಕ ಪ್ರಯಾಣಿಸುತ್ತಿದ್ದ ಚಂದ್ರಕಾಂತ್ ಠಕ್ಕರ್ ಎಂಬುವರು ಖಾಂಡ್ಬಾಡ ಮತ್ತು ಖಾತ್‌ಗಾಂವ್ ನಡುವೆ ಚಲಿಸುವ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು.
36
ಟ್ರಿಬ್ಯುನಲ್ ಮತ್ತು ಹೈಕೋರ್ಟ್ ಆದೇಶ ರದ್ದು; ಟಿಕೆಟ್ ಸಿಗದಿದ್ದರೆ ಹಕ್ಕು ನಿರಾಕರಿಸುವಂತಿಲ್ಲ
ಮೃತರ ಪತ್ನಿ ಲತಾ ಅವರು ತಮಗೆ 4 ಲಕ್ಷ ರೂಪಾಯಿ ಪರಿಹಾರ ಹಾಗೂ ಶೇಕಡಾ 18 ರಷ್ಟು ಬಡ್ಡಿ ನೀಡುವಂತೆ ಕೋರಿ ಭೋಪಾಲ್‌ನ ರೈಲ್ವೆ ಕ್ಲೈಮ್ಸ್ ಟ್ರಿಬ್ಯುನಲ್ ಮೆಟ್ಟಿಲೇರಿದ್ದರು. ಅಪಘಾತದ ನಂತರ ಪತಿಯ ಟ್ರಾವೆಲ್ ಬ್ಯಾಗ್ ನಾಪತ್ತೆಯಾಗಿದ್ದು, ಪೊಲೀಸರ ಪ್ರಯತ್ನದ ಹೊರತಾಗಿಯೂ ಅದರಲ್ಲಿದ್ದ ರೈಲು ಟಿಕೆಟ್ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದರು. ಈ ಘಟನೆಯು ರೈಲ್ವೆ ಕಾಯ್ದೆ 1989 ರ ಸೆಕ್ಷನ್ 123(ಸಿ)(2) ಅಡಿಯಲ್ಲಿ 'ಅನಿರೀಕ್ಷಿತ ಘಟನೆ' ಎಂದು ಒಪ್ಪಿಕೊಂಡಿದ್ದ ಟ್ರಿಬ್ಯುನಲ್, ಆದರೆ ಟಿಕೆಟ್ ಪತ್ತೆಯಾಗದ ಕಾರಣ ಮೃತರನ್ನು ಅಧಿಕೃತ ಪ್ರಯಾಣಿಕ (Bona fide passenger) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿತ್ತು.
ಕೋರ್ಟ್ ತನ್ನ ಹಳೆಯ ತೀರ್ಪುಗಳಾದ 'ಯೂನಿಯನ್ ಆಫ್ ಇಂಡಿಯಾ ವಿರುದ್ಧ ರೀನಾ ದೇವಿ', 'ಕಾಮುಕಾಯಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ' ಮತ್ತು 'ಡೋಲಿ ರಾಣಿ ಸಹಾ ವಿರುದ್ಧ ಯೂನಿಯನ್ ಆಫ್ ಇಂಡಿಯಾ' ಪ್ರಕರಣಗಳನ್ನು ಉಲ್ಲೇಖಿಸಿ, ಟಿಕೆಟ್ ಇತ್ತು ಎಂಬುದಕ್ಕೆ ಅರ್ಜಿದಾರರು ಆರಂಭಿಕ ಹಂತದಲ್ಲಿ ಪ್ರಮಾಣಪತ್ರ (Affidavit) ಸಲ್ಲಿಸಿದರೆ ಸಾಕಾಗುತ್ತದೆ, ನಂತರ ಅದನ್ನು ಸುಳ್ಳು ಎಂದು ಸಾಬೀತುಪಡಿಸುವ ಜವಾಬ್ದಾರಿ ರೈಲ್ವೆಯ ಮೇಲಿರುತ್ತದೆ ಎಂದು ನೆನಪಿಸಿತು.
56
ಭದ್ರತಾ ನಿಯಮಗಳ ಅನುಷ್ಠಾನದಲ್ಲಿ ಲೋಪ
ಭಾರತೀಯ ರೈಲ್ವೆಯ ಕಮರ್ಷಿಯಲ್ ಮ್ಯಾನುಯಲ್ ಮತ್ತು ಆಪರೇಟಿಂಗ್ ಮ್ಯಾನುಯಲ್ ನಿಬಂಧನೆಗಳನ್ನು ಪರಿಶೀಲಿಸಿದ ನ್ಯಾಯಪೀಠವು, ಟಿಕೆಟ್ ಪರಿಶೀಲನೆ, ಅತಿಯಾದ ಜನದಟ್ಟಣೆ ತಡೆಗಟ್ಟುವುದು, ಫುಟ್‌ಬೋರ್ಡ್ ಪ್ರಯಾಣವನ್ನು ನಿಯಂತ್ರಿಸುವುದು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಸ್ಟೇಷನ್ ಮಾಸ್ಟರ್‌ಗಳು, ಗಾರ್ಡ್‌ಗಳು, ಕಂಡಕ್ಟರ್‌ಗಳು ಮತ್ತು ಟಿಟಿಇ (TTE) ಗಳ ಜವಾಬ್ದಾರಿಯನ್ನು ನೆನಪಿಸಿತು.
66
ಉದ್ಯೋಗಾವಕಾಶ ಹೆಚ್ಚಳಕ್ಕೆ ಸಲಹೆ ಹಾಗೂ ₹8 ಲಕ್ಷ ಭಾರಿ ಪರಿಹಾರದ ಆದೇಶ
ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಗಳನ್ನು ಹೆಚ್ಚಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಅಂತಿಮವಾಗಿ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಮೃತ ಚಂದ್ರಕಾಂತ್ ಅವರ ಪತ್ನಿ ಲತಾ ಅವರಿಗೆ ಮುಂದಿನ ನಾಲ್ಕು ವಾರಗಳ ಒಳಗಾಗಿ ಬರೋಬ್ಬರಿ ₹8 ಲಕ್ಷ ರೂಪಾಯಿ ಪರಿಹಾರ ಪಾವತಿಸುವಂತೆ ರೈಲ್ವೆ ಇಲಾಖೆಗೆ ಆದೇಶಿಸಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸದಿದ್ದರೆ, ಕ್ಲೈಮ್ ಅರ್ಜಿ ಸಲ್ಲಿಕೆಯಾದ ದಿನಾಂಕದಿಂದ ಜಾರಿಗೆ ಬರುವಂತೆ ವಾರ್ಷಿಕ ಶೇಕಡಾ 8 ರಷ್ಟು ಬಡ್ಡಿಯೊಂದಿಗೆ ಹಣ ನೀಡಬೇಕಾಗುತ್ತದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ