ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ 3.6 ಕೋ ಕಳಕೊಂಡ ಪುಣೆ ಮಹಿಳೆ, ಆಸ್ಟ್ರೇಲಿಯಾ ವ್ಯಕ್ತಿ ಬಂಧನ

Published : Jun 27, 2025, 11:43 AM IST

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್ ಬಳಸಿ 3.6 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ ಬಂಧನ. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿತನಾದ ಆರೋಪಿ 3,194 ಮಹಿಳೆಯರನ್ನು ಸಂಪರ್ಕಿಸಿದ್ದ. 

PREV
17

ಪುಣೆ ಸೈಬರ್ ಪೊಲೀಸ್ ಇಲಾಖೆ 2023-24ರ ವೈವಾಹಿಕ ವಂಚನೆ ಪ್ರಕರಣದಲ್ಲಿ ಆಸ್ಟ್ರೇಲಿಯಾದ ಪೌರತ್ವ ಹೊಂದಿರುವ ಭಾರತೀಯ ಮೂಲದ ಅಭಿಷೇಕ್ ಶುಕ್ಲಾ (42) ಅವರನ್ನು ಬುಧವಾರ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. 40 ವರ್ಷದ ವಿಚ್ಛೇದಿತ ಮಹಿಳೆಯೊಬ್ಬರಿಗೆ 3.6 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಈ ಬಂಧನವಾಗಿದೆ. ಶುಕ್ಲಾ ಖರಾಡಿ ಪ್ರದೇಶದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸಮಾಡುತ್ತಿದ್ದರು. ಪೊಲೀಸರ ಪ್ರಕಾರ, ದೆಹಲಿ ಮೂಲದ ಇಬ್ಬರು ಮಕ್ಕಳ ತಾಯಿಯಾದ ವಿಚ್ಚೇದಿತ ಮಹಿಳೆ 2023ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ತನ್ನ ಪ್ರೊಫೈಲ್ ಅಪ್‌ಲೋಡ್ ಮಾಡಿದ ನಂತರ, ಇಬ್ಬರು ಪರಸ್ಪರ ಸಂಪರ್ಕಕ್ಕೆ ಬಂದರು. ವಿಚ್ಚೇದಿತ ಮಹಿಳೆಗೆ ಮಾಜಿ ಗಂಡನಿಂದ 5 ಕೋಟಿ ಸಿಕ್ಕ ಪರಿಹಾರದ ಬಗ್ಗೆ ಅರಿತು ಶುಕ್ಲಾ ಮೋಸದಿಂದ ಬಿಸಿನೆಸ್‌ ಗೆ ದುಡ್ಡು ಹಾಕುತ್ತೇನೆಂದು 3.6 ಹಣವನ್ನು ಮಹಿಳೆಯಿಂದ ಪೀಕಿಸಿದ್ದಾರೆ. ನವೆಂಬರ್‌ನಲ್ಲಿ ಪ್ರಕರಣ ಸಂಬಂಧ ಮಹಿಳೆ ಪೊಲೀಸ್ ದೂರು ನೀಡಿದಳು.

27

ಭಾರತದಲ್ಲಿ ಬಂಧನವಾದ ಶುಕ್ಲಾ

ಬುಧವಾರ ಮುಂಜಾನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ನಮ್ಮ ತಂಡ ಶುಕ್ಲಾ ಅವರನ್ನು ಬಂಧಿಸಿತು. ಈ ಹಿಂದೆ ನಾವು ಅವರ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ (LOC) ಹೊರಡಿಸಿದ್ದೆವು. ಅವರು ಸಿಂಗಾಪುರದಿಂದ ಮುಂಬೈಗೆ ಆಗಮಿಸುತ್ತಿದ್ದ ವೇಳೆ ಬಂಧನ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಪಂಕಜ್ ದೇಶಮುಖ್ ತಿಳಿಸಿದ್ದಾರೆ.

37

3,194 ಮಹಿಳೆಯರನ್ನು ಸಂಪರ್ಕಿಸಿರುವ ಶುಕ್ಲಾ

ಅಭಿಷೇಕ್ ಶುಕ್ಲಾ ಆಸ್ಟ್ರೇಲಿಯಾದ ಪೌರತ್ವ ಹೊಂದಿದ್ದು, ವ್ಯವಹಾರ ನಿರ್ವಹಣೆಯಲ್ಲಿ ಪಿಎಚ್‌ಡಿ ಮಾಡಿದ್ದಾರೆ ಹಾಗೂ ಆಸ್ಟ್ರೇಲಿಯಾದ ಮಹಿಳೆಯನ್ನು ವಿವಾಹವಾಗಿದ್ದಾರೆ. ವಿಚಾರಣೆಯಲ್ಲಿ, ಅವರು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್ ಬಳಸಿ ಸುಮಾರು 3,194 ಮಹಿಳೆಯರನ್ನು ಸಂಪರ್ಕಿಸಿರುವ ವಿಷಯ ಬೆಳಕಿಗೆ ಬಂದಿದೆ. ಇವರಿಂದ ವಂಚನೆಗೊಳಗಾದ ಮಹಿಳೆಯರ ಸಂಖ್ಯೆ ಇನ್ನಷ್ಟೇ ಹೆಚ್ಚುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ತನಿಖೆ ಮುಂದುವರಿದಂತೆ ಹೆಚ್ಚಿನ ವಂಚನೆಗೊಳಗಾದ ಮಹಿಳೆಯರು ಮುಂಬರುವ ದಿನಗಳಲ್ಲಿ ದೂರು ನೀಡಬಹುದು ಎಂದು ದೇಶಮುಖ್ ಹೇಳಿದರು.

47

ನಕಲಿ ಹೆಸರಿನಲ್ಲಿ ವಂಚನೆ

ಸಂತ್ರಸ್ತೆ ತನ್ನ ದೂರಿನಲ್ಲಿ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ “ಡಾ. ರೋಹಿತ್ ಒಬೆರಾಯ್” ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಮದುವೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿ ಸಂಪರ್ಕಿಸಿದ್ದಾಗಿ ತಿಳಿಸಿದ್ದಾರೆ. ಇಬ್ಬರೂ ಚಾಟ್ ಮಾಡುತ್ತಾ, ನಂತರ ಆ ವ್ಯಕ್ತಿ ಆಸ್ಟ್ರೇಲಿಯಾದ ಪರ್ಥ್‌ನಲ್ಲಿರುವ ವೈದ್ಯನಾಗಿದ್ದೇನೆ ಎಂದು ಹೇಳಿ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಅವರಿಬ್ಬರೂ ಮದುವೆ ವಿಚಾರ ಚರ್ಚಿಸುತ್ತಿದ್ದಂತೆ, ಮಹಿಳೆಯ ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

57

ಹೂಡಿಕೆಯಲ್ಲಿ ಲಾಭ ಎಂದು ವಂಚನೆ

ರೋಹಿತ್ ಎಂಬ ಹೆಸರಿನಲ್ಲಿ ಅಭಿಷೇಕ್ ಶುಕ್ಲಾ ಆಕೆಯ ಹಣವನ್ನು ಸ್ಟಾರ್ಟಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ಲಾಭ ತರುವುದಾಗಿ ಭರವಸೆ ನೀಡಿದ. ಹೂಡಿಕೆದಾರರೆಂದು ಹೇಳಿಕೊಂಡಿದ್ದ ಐವೊನ್ ಹಂದಯಾನಿ ಮತ್ತು ವಿನ್ಸೆಂಟ್ ಕುವಾನ್ ಸಿಂಗಾಪುರದಲ್ಲಿ ನೆಲೆಸಿದ್ದಾರೆ ಎಂದು ಕಥೆ ಕಟ್ಟಿದ. ಆದರೆ ಇವೆಲ್ಲವೂ ನಕಲಿ ಯೋಜನೆಯ ಭಾಗವಾಗಿತ್ತು ಎಂದು ದೇಶಮುಖ್ ಹೇಳಿದರು. ಸಂತ್ರಸ್ಥೆ ಅಭಿಷೇಕ್ ಒದಗಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದಳು. ಆ ಖಾತೆಗಳು ಮ್ಯೂಲ್ ಅಕೌಂಟ್‌ಗಳಾಗಿ ವಂಚನೆಗೆ ಬಳಸಲ್ಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

67

ಸಂತ್ರಸ್ತೆಗೆ ವಿಚ್ಚೇದನದಿಂದ ಬಂದಿದ್ದ 5 ಕೋಟಿ ರೂ

ಸಂತ್ರಸ್ತೆ ತನ್ನ ಮೊದಲ ಪತಿಯವರಿಂದ ಜೀವನಾಂಶವಾಗಿ 5 ಕೋಟಿ ರೂಪಾಯಿ ಪಡೆದಿದ್ದರು. “ಈ ಹಣದಿಂದಲೇ ಅವರು 3.6 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ ಎಂದು ದೇಶಮುಖ್ ಹೇಳಿದರು. ಹಣ ಪಡೆದ ನಂತರ, ನಕಲಿ ಹೆಸರಿನ ರೋಹಿತ್ ಓಬೆರಾಯ್ ತನಗೆ ಬಾಯಿಯ ಕ್ಯಾನ್ಸರ್‌ನ ಸಮಸ್ಯೆ ಇದ್ದುದಾಗಿ ಹೇಳಿ ಸಂಪರ್ಕ ಕಟ್‌ ಮಾಡಿದ್ದಾರೆ. ಇದಾಗಿ ಕೆಲವೇ ದಿನಗಳಲ್ಲಿ ಹಂದಯಾನಿ ಮತ್ತು ಕುವಾನ್ ಎಂಬವರಿಂದ ಇಮೇಲ್‌ಗಳು ಬಂದು ರೋಹಿತ್ ಓಬೆರಾಯ್ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು. ನಂತರ, ಸಂತ್ರಸ್ತೆ ತನ್ನ ಹೂಡಿಕೆ ಹಾಗೂ ವಂಚನೆಯ ವಿಷಯವನ್ನು ಸ್ನೇಹಿತನಿಗೆ ಹೇಳಿದಾಗ, ಸ್ನೇಹಿತನು ಅನುಮಾನ ವ್ಯಕ್ತಪಡಿಸಿ ಪೊಲೀಸರನ್ನು ಸಂಪರ್ಕಿಸಲು ಸಲಹೆ ನೀಡಿದರು.

77

ಸಿನಿಯರ್ ಇನ್ಸ್‌ಪೆಕ್ಟರ್ ಸ್ವಪ್ನಾಲಿ ಶಿಂಧೆ, ಸಬ್-ಇನ್ಸ್‌ಪೆಕ್ಟರ್ ಸುಶೀಲ್ ದಾಮರೆ ಮತ್ತು ಅವರ ತಂಡವು ಶಂಕಿತನ ಆನ್‌ಲೈನ್ ಪ್ರೊಫೈಲ್‌ನ್ನು ಅಧ್ಯಯನ ಮಾಡಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗೆ ಇಮೇಲ್‌ಗಳನ್ನು ಕಳುಹಿಸಿದರು. ಕಂಪನಿಯು ನೋಂದಾಯಿತ ಇಮೇಲ್ ಐಡಿ ಮತ್ತು ಶಂಕಿತನು ಬಳಸಿದ ಮೊಬೈಲ್ ನಂಬರ್ ಸೇರಿದಂತೆ ಮಹತ್ವದ ಮಾಹಿತಿ ಸುಳಿವು ನೀಡಿತು.

ಪೊಲೀಸರು ಬ್ಯಾಂಕ್ ಖಾತೆಗಳ ವಿಶ್ಲೇಷಣೆ ನಡೆಸಿದಾಗ, ಒಬೆರಾಯ್ ಎಂಬ ಹೆಸರಿನಲ್ಲಿ ಹಣ ಬಂದಿಲ್ಲ ಎಂಬುದು ಬೆಳಕಿಗೆ ಬಂತು. ನಮ್ಮ ತನಿಖೆಯ ಬಳಿಕ ಶಂಕಿತ ಆಸ್ಟ್ರೇಲಿಯಾದ ಪರ್ಥ್‌ನಲ್ಲಿ ಇದ್ದಾರೆ ಮತ್ತು ಅವರ ನಿಜ ಹೆಸರು ಅಭಿಷೇಕ್ ಶುಕ್ಲಾ ಎಂದು ತಿಳಿದುಬಂದಿದೆ. ಅವರು ಮೂಲತಃ ಲಕ್ನೋವಿನವರು. ಈ ಮಾಹಿತಿ ಪಡೆದ ನಂತರ, ನಾವು LOC ಹೊರಡಿಸಿದ್ದು, ಅದು ಬಂಧನಕ್ಕೆ ಕಾರಣವಾಯಿತು ಎಂದು ದೇಶಮುಖ್ ವಿವರಿಸಿದರು. ಶುಕ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Read more Photos on
click me!

Recommended Stories