ಒಂದೇ ಲಿಂಗದ ಇಬ್ಬರು ಮದುವೆಯಾಗುವುದನ್ನು ನಮ್ಮ ಕಾನೂನು, ಸಮಾಜ ಮತ್ತು ಮೌಲ್ಯಗಳು ಒಪ್ಪಲ್ಲ ಎಂದು ಕೇಂದ್ರ ಸರ್ಕಾರದ ಹಿರಿಯ ವಕೀಲರೊಬ್ಬರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಭಾರತದಲ್ಲಿ ಹಿಂದೂ ವಿವಾಹ ಕಾಯ್ದೆ 1956ರ ಅಡಿಯಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿದ ಮನವಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಾಟೀಲ್ ಮತ್ತು ನ್ಯಾ. ಪ್ರತೀಕ್ ಜಲನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸ್ಯಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.
ನ್ಯಾಯಾಲಯವೇ ಮಧ್ಯ ಪ್ರವೇಶ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ, ಇದು ಅಸಾಧ್ಯ, ಜತೆಗೆ ಇಂಥ ಕಾನೂನು ತಿದ್ದುಪಡಿಗೆ ಹಲವು ತೊಡಕುಗಳು ಎದುರಾಗಲಿದ್ದು ಸಮಸ್ಯೆ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ ಎಂದರು.
ಹಿಂದೂ ವಿವಾಹ ಕಾಯ್ದೆ ಗಂಡ ಮತ್ತು ಹೆಂಡತಿ ಎಂದು ಉಲ್ಲೇಖ ಮಾಡುತ್ತದೆ. ಒಂದೇ ಲಿಂಗದವರು ಇದ್ದಲ್ಲಿ ಹೇಗೆ ಎಂದು ಪ್ರಶ್ನೆ ಮಾಡಿದರು.
ಸಲಿಂಗ ವಿವಾಹದ ನೋಂದಣಿಯಾಗದ ಕಾರಣ ಸಮಸ್ಯೆಗೆ ಸಿಲುಕಿದವರು ಹಾಗೂ ಅಂಥ ನಿದರ್ಶನಗಳು ಇದ್ದಲ್ಲಿ ಅದನ್ನು ನ್ಯಾಯಾಲಯದ ಮುಂದೆ ತೆಗೆದುಕೊಂಡು ಬನ್ನಿ ಎಂದು ಕೋರ್ಟ್ ತಿಳಿಸಿದೆ.