ಶುಕ್ರವಾರ ಸಂಜೆ, ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ನಿಲ್ದಾಣದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಯಶವಂತಪುರ - ಹೌರಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿದ ಬಳಿಕ ಆ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ನಂತರ ಅದು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ದುರಂತದಲ್ಲಿ ಸುಮಾರು 280 ಜನರು ಮೃತಪಟ್ಟಿದ್ದು, 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಹಿನ್ನೆಲೆ, ಅಪಘಾತ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಭೇಟಿ ನೀಡಿದ್ದು, ಘಟನೆ ಬಗ್ಗೆ ಹೆಚ್ಚಿನ ವಿವರ ಪಡೆದುಕೊಂಡಿದ್ದಾರೆ.
ಇನ್ನು, ಪ್ರಧಾನಿ ಮೋದಿ ಸಹ ಒಡಿಶಾಗೆ ತೆರಳಲಿದ್ದು, ಮೊದಲು ಬಾಲಸೋರ್‌ನಲ್ಲಿ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ನಂತರ ಕಟಕ್‌ನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ರೈಲು ಅಪಘಾತವಾಗಿರುವ ಕಾರಣ ಅನೇಕ ರೈಲುಗಳನ್ನು ರದ್ದುಗೊಳಿಸಲಾಗಿದ್ದು, ಹಾಗೂ ಹಲವು ರೈಲುಗಳ ಮಾರ್ಗಗಳನ್ನು ಬೇರೆ ಮಾರ್ಗಕ್ಕೆ ಬಲಾಯಿಸಲಾಗಿದೆ. ಒಡಿಶಾದಲ್ಲಿ ಸಂಭವಿಸಿದ ಭಾರೀ ದುರಂತದ ನಂತರ, ರೈಲ್ವೆ ಅಧಿಕಾರಿಗಳು ಶನಿವಾರ 48 ರೈಲುಗಳನ್ನು ರದ್ದುಗೊಳಿಸಿದ್ದಾರೆ ಮತ್ತು 39 ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಿದ್ದಾರೆ.
ಮತ್ತು ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಅಪಘಾತದ ನಂತರ 10 ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಶನಿವಾರ ತಿಳಿಸಿದೆ. ಈ ಹಿನ್ನೆಲೆ ನೀವು ಈ ಯಾವುದಾದರೂ ರೈಲುಗಳಲ್ಲಿ ಸಂಚರಿಸುತ್ತಿದ್ದರೆ ಅಥವಾ ಈ ಮಾರ್ಗದಲ್ಲಿ ರೈಲಿನಲ್ಲಿ ಸಂಚರಿಸುವ ಪ್ಲ್ಯಾನ್ ಮಾಡಿದ್ದರೆ ಸರಿಯಾದ ಮಾಹಿತಿ ಪಡೆದುಕೊಂಡು ಟ್ರಾವೆಲ್ ಮಾಡಿ.
ಈ ಪೈಕಿ ಬೆಂಗಳೂರು-ಗುವಾಹಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12509), ತಿರುವನಂತಪುರಂ - ಕೋಲ್ಕತ್ತಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22641), ಮತ್ತು ಹೌರಾ-ತಿರುಪತಿ ಹಮ್ ಸಫರ್ ಎಕ್ಸ್‌ಪ್ರೆಸ್ (20889) ರೈಲುಗಳು ರದ್ದಾಗಿದೆ.
ಜತೆಗೆ, ಹೌರಾ-ಮೈಸೂರು ಎಕ್ಸ್‌ಪ್ರೆಸ್ (22817), ಕನ್ಯಾಕುಮಾರಿ - ದಿಬ್ರುಗಢ್ ವಿವೇಕ್ ಎಕ್ಸ್‌ಪ್ರೆಸ್ (22503) ಟ್ರೈನ್‌ಗಳು ಮಾರ್ಗ ಬದಲಿಸಿದ ರೈಲುಗಳಲ್ಲಿ ಸೇರಿವೆ ಎಂದು ತಿಳಿದುಬಂದಿದೆ.