ಗುರುವಾರ ಬಿಡುಗಡೆ ಮಾಡಲಾದ ಅಧಿಕೃತ ಹೇಳಿಕೆಯ ಪ್ರಕಾರ, ನೈಋತ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಉಳಿದ ಭಾಗಗಳು, ಪಶ್ಚಿಮ-ಮಧ್ಯ ಮತ್ತು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಕೆಲವು ಪ್ರದೇಶಗಳು ಹಾಗೂ ಲಕ್ಷದ್ವೀಪ ದ್ವೀಪಗಳಿಗೆ ಮುಂಗಾರು ವ್ಯಾಪಿಸಿದೆ. ಇದರೊಂದಿಗೆ ಕೇರಳ, ಮಾಹೆ, ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳು, ಕೊಮೊರಿನ್ ಪ್ರದೇಶ, ಬಂಗಾಳ ಕೊಲ್ಲಿಯ ಆಗ್ನೇಯ, ನೈಋತ್ಯ, ಪಶ್ಚಿಮ-ಮಧ್ಯ, ಪೂರ್ವ-ಮಧ್ಯ ಮತ್ತು ಈಶಾನ್ಯ ಭಾಗಗಳಿಗೂ ಮಾನ್ಸೂನ್ ಮಾರುತಗಳು ಯಶಸ್ವಿಯಾಗಿ ಮುನ್ನಡೆದಿವೆ.
ಪ್ರಸ್ತುತ ಮಾನ್ಸೂನ್‌ನ ಉತ್ತರದ ಮಿತಿಯು (Northern Limit of Monsoon) ಕರ್ನಾಟಕದ ಮಂಗಳೂರು, ತಮಿಳುನಾಡಿನ ಉತಗಮಂಡಲಂ (ಊಟಿ), ಕೊಡೈಕೆನಾಲ್ ಮತ್ತು ತೂತುಕುಡಿ ಮೂಲಕ ಹಾದುಹೋಗುತ್ತಿದೆ. ಮುಂದಿನ 2 ರಿಂದ 3 ದಿನಗಳಲ್ಲಿ ಮಧ್ಯ ಅರಬ್ಬಿ ಸಮುದ್ರದ ಕೆಲವು ಭಾಗಗಳು, ಸಂಪೂರ್ಣ ಗೋವಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳು ಸೇರಿದಂತೆ ಕರ್ನಾಟಕದ ಇನ್ನು ಹಲವು ಜಿಲ್ಲೆಗಳಿಗೆ ಮುಂಗಾರು ಮತ್ತಷ್ಟು ವ್ಯಾಪಿಸಲು ಹವಾಮಾನ ಪರಿಸ್ಥಿತಿಗಳು ಅತ್ಯಂತ ಅನುಕೂಲಕರವಾಗಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.