'ಕಾಕ್ರೋಚ್ ಜನತಾ ಪಾರ್ಟಿ' ಸಂಸ್ಥಾಪಕನಿಗೆ ಕೊಲೆ ಬೆದರಿಕೆ; ಐಬಿ ವರದಿ ಬೆನ್ನಲ್ಲೇ ಎಕ್ಸ್ ಖಾತೆ ಬ್ಯಾನ್!

Published : May 22, 2026, 07:05 PM IST

‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ವ್ಯಂಗ್ಯ ಖಾತೆಯ ಸ್ಥಾಪಕ ಅಭಿಜಿತ್ ದೀಪ್ಕೆಗೆ ಕೊಲೆ ಬೆದರಿಕೆಗಳು ಬಂದಿವೆ. ಈ ಖಾತೆಗಳು ದೇಶದ ಭದ್ರತೆಗೆ ಅಪಾಯಕಾರಿ ಎಂದು ಗುಪ್ತಚರ ಇಲಾಖೆ ವರದಿ ನೀಡಿದ್ದು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ 'ಎಕ್ಸ್' ಖಾತೆಯನ್ನು ನಿರ್ಬಂಧಿಸಲಾಗಿದೆ.

PREV
15

ನವದೆಹಲಿ: 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವ್ಯಂಗ್ಯ ಖಾತೆಯ ಸ್ಥಾಪಕ ಅಭಿಜಿತ್ ದೀಪ್ಕೆಗೆ ಕೊಲೆ ಬೆದರಿಕೆ ಬಂದಿದೆ. ಈ ಚಟುವಟಿಕೆ ನಿಲ್ಲಿಸದಿದ್ದರೆ ಕೊಲ್ಲುವುದಾಗಿ ಬಂದಿರುವ ಬೆದರಿಕೆ ಸಂದೇಶಗಳನ್ನು ದೀಪ್ಕೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಅಕೌಂಟ್ ಬಂದ್ ಮಾಡು, ಇಲ್ಲದಿದ್ದರೆ ನಿನ್ನನ್ನು ಮುಗಿಸಿಬಿಡುತ್ತೇವೆ' ಎಂದು ಬೆದರಿಕೆ ಹಾಕಲಾಗಿದೆ.

25

ಈ ಬೆಳವಣಿಗೆಯಿಂದ ದೀಪ್ಕೆ ಅವರ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅತ್ತ, 'ಕಾಕ್ರೋಚ್ ಜನತಾ ಪಾರ್ಟಿ' ಹೆಸರಿನಲ್ಲಿ ಶುರುವಾದ ಈ ವ್ಯಂಗ್ಯ ಖಾತೆಗಳು ದೇಶದ ಭದ್ರತೆಗೆ ಅಪಾಯಕಾರಿ ಎಂದು ಗುಪ್ತಚರ ಇಲಾಖೆ (IB) ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, 'ಅರಾಜಕತೆಯಿಂದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದೆ.

35

ಕಾಕ್ರೋಚ್ ಜನತಾ ಪಾರ್ಟಿಯ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬಂದ್ ಮಾಡಿ. ನಿಮಗೆ ಹಣ ಸಿಗುತ್ತದೆ. ಬಿಜೆಪಿಗೆ ಸೇರಿಕೊಳ್ಳಿ. ಇಲ್ಲದಿದ್ದರೆ, ಅಮೆರಿಕದಲ್ಲಿ ನಿಮ್ಮನ್ನು ಕೊಲ್ಲಲಾಗುವುದು. - ಇದು ಅಭಿಜಿತ್ ದೀಪ್ಕೆ ಅವರು 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಬೆದರಿಕೆ ಸಂದೇಶಗಳಲ್ಲಿ ಒಂದು. ಈ ಪಾರ್ಟಿ ಶುರು ಮಾಡಿದಾಗಿನಿಂದ ಫೋನ್ ಕರೆಗಳು ಮತ್ತು ಸೋಶಿಯಲ್ ಮೀಡಿಯಾ ಮೂಲಕ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಎಂದು ಅಭಿಜಿತ್ ಹೇಳಿದ್ದಾರೆ. ವಿಡಿಯೋ ರೂಪದಲ್ಲಿ ಬಂದಿದ್ದ ಬೆದರಿಕೆ ಸಂದೇಶವನ್ನೂ ಅವರು ಶೇರ್ ಮಾಡಿದ್ದಾರೆ.

45

ಮಗ ಅಭಿಜಿತ್ ದೀಪ್ಕೆ ಬಗ್ಗೆ ಕಳವಳ

ಮಧ್ಯಪ್ರದೇಶ ಮೂಲದವರಾದ ಅಭಿಜಿತ್ ಸದ್ಯ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಅವರ ಪೋಷಕರಾದ ಭಗವಾನ್ ಮತ್ತು ಅನಿತಾ ದೀಪ್ಕೆ ಅವರು ಮಗನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 'ಮಗನ ಈ ಕೆಲಸ ಆತನನ್ನು ಸಂಕಷ್ಟಕ್ಕೆ ಸಿಲುಕಿಸಬಹುದು, ಅವನನ್ನು ಬಂಧಿಸಬಹುದು' ಎಂದು ಪೋಷಕರು ಆತಂಕಗೊಂಡಿದ್ದಾರೆ. 

ಈ ಘಟನೆ ನಡೆದ ನಂತರ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳೊಂದಿಗೆ ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ, ಈ ಖಾತೆಗಳ ಹಿಂದೆ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನವಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಎನ್ನಲಾಗಿದೆ. ಈ ವರದಿ ಆಧರಿಸಿ 'ಕಾಕ್ರೋಚ್ ಜನತಾ ಪಾರ್ಟಿ'ಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ.

55

20 ಕೋಟಿ ಫಾಲೋವರ್ಸ್

ಗುಪ್ತಚರ ಇಲಾಖೆ ವರದಿ ಆಧರಿಸಿ, ಕೇಂದ್ರದ ಐಟಿ ಸಚಿವಾಲಯವು 'ಎಕ್ಸ್' ಸಂಸ್ಥೆಗೆ ಈ ಖಾತೆಯನ್ನು ನಿರ್ಬಂಧಿಸುವಂತೆ ಸೂಚನೆ ನೀಡಿತ್ತು. ಇನ್‌ಸ್ಟಾಗ್ರಾಂ ಖಾತೆಯನ್ನೂ ನಿರ್ಬಂಧಿಸುವ ಸಾಧ್ಯತೆ ಇದೆ. ಈ ಇನ್‌ಸ್ಟಾಗ್ರಾಂ ಖಾತೆಗೆ ಬರೋಬ್ಬರಿ 20 ಕೋಟಿ ಫಾಲೋವರ್ಸ್ ಇದ್ದಾರೆ. ನಿರ್ಬಂಧಕ್ಕೊಳಗಾದ ಎಕ್ಸ್ ಖಾತೆಯ ಬದಲು 'ಕಾಕ್ರೋಚ್ ಈಸ್ ಬ್ಯಾಕ್' ಎಂಬ ಹೊಸ ಹ್ಯಾಂಡಲ್ ಶುರು ಮಾಡಲಾಗಿದ್ದು, ಅದಕ್ಕೂ ಕೆಲವೇ ದಿನಗಳಲ್ಲಿ ಒಂದೂವರೆ ಲಕ್ಷ ಫಾಲೋವರ್ಸ್ ಆಗಿದ್ದಾರೆ. ಈ ಹೊಸ ಖಾತೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಅಭಿಯಾನವನ್ನೂ ಶುರುಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ, 'ಇದೆಲ್ಲವೂ ಒಂದು ಪೂರ್ವನಿಯೋಜಿತ ಪಿತೂರಿಯ ಭಾಗ' ಎಂದು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories