ಛತ್ತೀಸ್‌ಗಢದಲ್ಲಿ, 'ನನ್ನ ಗ್ರಾಮ, ನನ್ನ ನೀರು 2.0' ಅಭಿಯಾನದಡಿ ಲಕ್ಷಾಂತರ ಜನರು ಕೇವಲ 15 ದಿನಗಳಲ್ಲಿ 3.41 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ಘಟಕಗಳನ್ನು ನಿರ್ಮಿಸಿದ್ದಾರೆ. ಹೇಗೆ ನೀರು ಉಳಿಸಿದರು? ಅನ್ನೋ ಡಿಟೈಲ್ಸ್ ಇಲ್ಲಿದೆ.
ರಾಯ್‌ಪುರ: ಬಾವಿ ಬತ್ತಿದ ಮೇಲೆಯೇ ನೀರಿನ ಬೆಲೆ ತಿಳಿಯುವುದು ಎಂಬ ಹಳೆಯ ಗಾದೆ ಮಾತಿದೆ. ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಜನರು ಬಾವಿ ಬತ್ತುವ ಮೊದಲೇ ಎಚ್ಚೆತ್ತುಕೊಂಡಿದ್ದಾರೆ. ಕೃಷಿಯನ್ನೇ ಜೀವನಾಧಾರವಾಗಿ ನಂಬಿರುವ ಈ ಜಿಲ್ಲೆಯಲ್ಲಿ ತೀವ್ರ ನೀರಿನ ಅಭಾವವನ್ನು ಎದುರಿಸಲು ಅಲ್ಲಿನ ಜನ ಸಮುದಾಯ ಒಟ್ಟಾಗಿ ನಡೆಸಿದ ಜಲ ಸಂರಕ್ಷಣಾ ಅಭಿಯಾನ ಈಗ ಇಡೀ ದೇಶಕ್ಕೆ ಮಾದರಿಯಾಗಿದೆ.
ಹೌದು, ಕೇಳಲು ಅಚ್ಚರಿಯಾದರೂ ಇದು ಸತ್ಯ. 'ನನ್ನ ಗ್ರಾಮ, ನನ್ನ ನೀರು 2.0' (My Village, My Water 2.0) ಅಭಿಯಾನದ ಅಡಿಯಲ್ಲಿ ಮಹಾಸಮುಂದ್ ಜಿಲ್ಲೆಯ 551 ಗ್ರಾಮ ಪಂಚಾಯತ್‌ಗಳು ಹಾಗೂ 1,140ಕ್ಕೂ ಹೆಚ್ಚು ಗ್ರಾಮಗಳ ಲಕ್ಷಾಂತರ ಜನರು ಸ್ವಯಂಪ್ರೇರಿತರಾಗಿ ಶ್ರಮದಾನ ಮಾಡಿದರು. ಕೇವಲ 15 ದಿನಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 3.41 ಲಕ್ಷಕ್ಕೂ ಹೆಚ್ಚು ಜಲ ಸಂರಕ್ಷಣಾ ಘಟಕಗಳನ್ನು ನಿರ್ಮಿಸಲಾಗಿದೆ.
25
31 ಕೋಟಿ ಲೀಟರ್ ನೀರು ಉಳಿತಾಯ
ಈ ಅಭಿಯಾನದ ಫಲಿತಾಂಶ ಮೊದಲ ಮಳೆಗೇ ಲಭಿಸಿದೆ. ಮೇ 14 ರಿಂದ ಮೇ 30ರ ನಡುವೆ ಗ್ರಾಮಸ್ಥರು ನಿರ್ಮಿಸಿದ ಇಂಗುಗುಂಡಿಗಳು, ಚೆಕ್ ಡ್ಯಾಂಗಳು ಮತ್ತು ಹಳ್ಳಗಳ ಮೂಲಕ ಬರೊಬ್ಬರಿ 31 ಕೋಟಿ ಲೀಟರ್ (310 ಮಿಲಿಯನ್ ಲೀಟರ್) ಮಳೆನೀರನ್ನು ಸಂಗ್ರಹಿಸಲಾಗಿದೆ. ಈ ನೀರು ವ್ಯರ್ಥವಾಗಿ ಚರಂಡಿ ಅಥವಾ ನದಿ ಸೇರುವ ಬದಲು ಈಗ ಭೂಮಿಯ ಒಡಲು ಸೇರಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತಿದೆ.
35
ಮಹಾಸಮುಂದ್ ಮಾದರಿ ಯಾಕೆ ಮುಖ್ಯ?
ಮಹಾಸಮುಂದ್ ಜಿಲ್ಲೆಯಲ್ಲಿ ಭತ್ತದ ಕೃಷಿ ಅಧಿಕವಾಗಿರುವುದರಿಂದ ಅಂತರ್ಜಲದ ಮೇಲೆ ಭಾರಿ ಒತ್ತಡವಿತ್ತು. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿತ್ತು. ಈ ಪರಿಸ್ಥಿತಿಯನ್ನು ಮನಗಂಡ ಜಿಲ್ಲಾಡಳಿತ ಮತ್ತು ಸಾರ್ವಜನಿಕರು ಕೈಜೋಡಿಸಿ ಜಲ ಸಂರಕ್ಷಣೆಯನ್ನು ಒಂದು 'ಜನ ಚಳವಳಿ'ಯಾಗಿ ರೂಪಿಸಿದರು.
ಅರಂಡ್ ಗ್ರಾಮ ಪಂಚಾಯತ್ ನಿವಾಸಿ ಶಂಕರ್ ಲಾಲ್ ಯಾದವ್ ಹೇಳುವಂತೆ ಗ್ರಾಮ ಸಭೆಯಲ್ಲಿ ಚರ್ಚಿಸಿ ಪ್ರತಿ ಮನೆಯಲ್ಲೂ ಒಂದು ಇಂಗುಗುಂಡಿ (Soak pit) ನಿರ್ಮಿಸಲು ನಿರ್ಧರಿಸಲಾಗಿತ್ತು. ಇಂದು ಬಹುತೇಕ ಪ್ರತಿ ಮನೆಯಲ್ಲೂ ಮಳೆನೀರನ್ನು ಇಂಗಿಸುವ ವ್ಯವಸ್ಥೆಯಿದ್ದು, ವ್ಯರ್ಥವಾಗುತ್ತಿದ್ದ ನೀರು ಭೂಮಿಗೆ ಮರುಪೂರಣವಾಗುತ್ತಿದೆ.
55
ಗ್ರಾಮಸ್ಥರು ಹೇಳೋದೇನು?
ಮಹಾಸಮುಂದ್ ಜಿಲ್ಲಾಧಿಕಾರಿ ವಿನಯ್ ಕುಮಾರ್ ಲಾಂಗೆಹ್ ಅವರ ನೇತೃತ್ವದಲ್ಲಿ ಕೃಷಿ, ಅರಣ್ಯ ಮತ್ತು ಪಂಚಾಯತ್ ಇಲಾಖೆಗಳು ಸಮನ್ವಯದೊಂದಿಗೆ ಈ ಕಾರ್ಯವನ್ನು ಯಶಸ್ವಿಗೊಳಿಸಿವೆ. ಪ್ರಧಾನಮಂತ್ರಿಯವರ 'ಜಲ ಸಂರಕ್ಷಣೆ-ಜನಭಾಗಿದಾರಿ' ದರ್ಶನದಿಂದ ಪ್ರೇರಿತವಾದ ಈ ಅಭಿಯಾನವು, ಆಡಳಿತ ಮತ್ತು ಸಾರ್ವಜನಿಕರು ಒಂದಾದರೆ ಎಂತಹ ದೊಡ್ಡ ಗುರಿಯನ್ನೂ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸಿದೆ. ಮಹಾಸಮುಂದ್ ಜನರ ಈ ಸಾಹಸಗಾಥೆ ಇಂದು ನೀರಿಗಾಗಿ ಪರದಾಡುತ್ತಿರುವ ದೇಶದ ಇತರ ಭಾಗಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ