ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಎನ್‌ಡಿಎ ಒಕ್ಕೂಟದಲ್ಲಿ ಕ್ಷೇತ್ರ ಹಂಚಿಕೆ ಗೊಂದಲ ತೀವ್ರಗೊಂಡಿದೆ. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷವು ಗೆಲ್ಲುವ ಕ್ಷೇತ್ರಗಳಿಗೆ ಪಟ್ಟು ಹಿಡಿದಿದ್ದು, ಇದು ಜೆಡಿಯು ಮತ್ತು ಇತರ ಮಿತ್ರಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಎನ್‌ಡಿಎ ಒಕ್ಕೂಟದಲ್ಲಿ ಕ್ಷೇತ್ರ ಹಂಚಿಕೆ ಬಗ್ಗೆ ಸಾಲು ಸಾಲು ಸಭೆಗಳು ನಡೆಯುತ್ತಿದೆ. ಕೇಂದ್ರದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿರುವ ಎಲ್‌ಜೆಪಿ ನಾಯಕ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಮ್ಮತಿಸುತ್ತಿಲ್ಲ. ಎನ್‌ಡಿಎ ಒಕ್ಕೂಟದ ಪಕ್ಷಗಳೆಲ್ಲವೂ ಗೆಲ್ಲುವ ಕ್ಷೇತ್ರಗಳ ಮೇಲೆ ಕಣ್ಣಿಡುತ್ತಿವೆ. ಬಿಹಾರದ ಗೆಲುವಿಗೆ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅನಿವಾರ್ಯವಾಗಿದೆ. ಬಿಜೆಪಿಗೆ ಕ್ಷೇತ್ರ ಹಂಚಿಕೆ ಎನ್‌ಡಿಎ ಒಕ್ಕೂಟಕ್ಕೆ ಬಿಸಿತುಪ್ಪವಾಗಿದೆ.
25
ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ
ದೆಹಲಿಯ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ ಸಭೆಯೊಂದು ನಡೆದಿದೆ. ಈ ಸಭೆಯಲ್ಲಿ ಜೆಡಿಯು, ಎಚ್‌ಎಎಂ, ಆರ್‌ಎಲ್‌ಎಸ್‌ಪಿ ಮತ್ತು ಎಲ್‌ಪಿಜೆ ನಾಯಕರು ಭಾಗಿಯಾಗಿ ಕ್ಷೇತ್ರ ಹಂಚಿಕೆ ಮತ್ತು ಚುನಾವಣಾ ಸಿದ್ಧತೆ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಚಿರಾಗ್ ಪಾಸ್ವಾನ್ ಬೇಡಿಕೆಗೆ ಜೆಡಿಯು ಮತ್ತು ಮಾಂಝಿ ಪಾರ್ಟಿ ವಿರೋಧ ವ್ಯಕ್ತಪಡಿಸಿವೆ. ಇದೇ ವೇಳೆ ನಾವು ಚಿರಾಗ್ ಪಾಸ್ವಾನ್ ಜೊತೆ ಯಾವುದೇ ಸಂಧಾನಕ್ಕೆ ಒಪ್ಪಲ್ಲ. ಈ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಬೇಕು ಎಂದು ಜೆಡಿಯು ನಾಯಕರು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
35
ಮೂರು ಕ್ಷೇತ್ರ ಮತ್ತು ಜೆಡಿಯು ನಾಯಕರ ವಾದ ಏನು?
ಮಹನರ್, ಮಟಿಹಾನಿ ಮತ್ತು ಚಕಾಯಿ ಕ್ಷೇತ್ರಗಳನ್ನು ಚಿರಾಗ್ ಪಾಸ್ವಾನ್ ಅವರಿಗೆ ಬಿಟ್ಟುಕೊಡಲ್ಲ ಎಂದು ನಡ್ಡಾ ಮುಂದೆ ಜೆಡಿಯು ನಾಯಕರು ಹೇಳಿದ್ದಾರೆ. ಜೆಡಿಯು ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹ ಅವರು ಮಹನರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 2020ರಲ್ಲಿ ಮಟಿಹಾನಿಯನ್ನು ಪಾಸ್ವಾನ್ ಪಕ್ಷ ಗೆದ್ದುಕೊಂಡಿತ್ತು. ಆದರೆ ಈ ನಾಯಕ ಸದ್ಯ ಜೆಡಿಯು ಸೇರ್ಪಡೆಗೊಂಡಿದ್ದಾರೆ. ಚಕಾಯಿ ಕ್ಷೇತ್ರದ ಪಕ್ಷೇತರ ಶಾಸಕ ಸುಮಿತ್ ಸಿಂಗ್ ಜೆಡಿಯುಗೆ ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ ಮೂರು ಕ್ಷೇತ್ರಗಳು ತನ್ನಲ್ಲಿಯೇ ಉಳಿಯಬೇಕೆಂಬುವುದು ಜೆಡಿಯು ನಾಯಕರ ವಾದವಾಗಿದೆ.
ಇತ್ತ ಬಿಜೆಪಿಯು ಸಹ ಗೋವಿಂದಗಂಜ್ ಕ್ಷೇತ್ರವನ್ನು ಚಿರಾಗ್ ಪಾಸ್ವಾನ್ ಅವರಿಗೆ ಬಿಟ್ಟುಕೊಡಲು ಬಿಜೆಪಿಯೂ ಸಿದ್ಧವಿಲ್ಲ. ಇತ್ತ ಮಾಂಝಿ ಪಾರ್ಟಿ ಸಿಕಂದರ್ ಕ್ಷೇತ್ರದ ಮೇಲೆ ಬಲವಾದ ಹಿಡಿತವನ್ನು ಹೊಂದಿದೆ. ಸಿಕಂದರ್ ಕ್ಷೇತ್ರವನ್ನು ಸಹ ತಮಗೆ ನೀಡಬೇಕೆಂದು ಚಿರಾಗ್ ಕೇಳುತ್ತಿದ್ದಾರೆ. ಈ ಕಾರಣದಿಂದ ಮಾಂಝಿ ಪಾರ್ಟಿ ಸಹ ಪಾಸ್ವಾನ್ ಬೇಡಿಕೆಯನ್ನು ಖಂಡಿಸಿದೆ.
ತಮ್ಮ ಅಭ್ಯರ್ಥಿಗಳು ಯಾವ ಕ್ಷೇತ್ರದಲ್ಲಿ ಸುಲಭವಾಗಿ ಗೆಲ್ಲಬಹುದು ಎಂದು ಅರ್ಥ ಮಾಡಿಕೊಂಡಿರುವ ಚಿರಾಗ್ ಪಾಸ್ವಾನ್, ಪ್ರಬಲವಾದ ಕ್ಷೇತ್ರಗಳನ್ನು ನೀಡುವಂತೆ ಬೇಡಿಕೆ ಇರಿಸಿದ್ದಾರೆ. ಪ್ರಾದೇಶಿಕ ಪಕ್ಷಗಳ ಕ್ಷೇತ್ರ ಹಂಚಿಕೆಯನ್ನು ಎನ್‌ಡಿಎ ಹೇಗೆ ಮಾಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಸದ್ಯ ಚಿರಾಗ್ ಪಾಸ್ವಾನ್ ಮನವೊಲಿಸುವ ಕಾರ್ಯವನ್ನು ಬಿಜೆಪಿ ಮಾಡಬೇಕಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.