ಈಗಿನ ಮಕ್ಕಳಿಗೆ ಮೊಬೈಲ್ ಸಿಕ್ಕರೆ ಸಾಕು, ಊಟ ಮಾಡಲು ಸ್ಮಾರ್ಟ್‌ಫೋನ್ ಬೇಕು. ಸಂಬಂಧ, ಪ್ರೀತಿ, ಮಾತುಕತೆ, ಗಳೆತನ ಯಾವುದರ ಮಹತ್ವವೇ ಗೊತ್ತಿಲ್ಲ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ. ಈಗ ಎಲ್ಲವೂ ಡಿಜಿಟಲ್, ಸ್ಮಾರ್ಟ್‌ಫೋನ್ ಅನಿವಾರ್ಯವಾಗಿದೆ. ಉದ್ಯೋಗ, ವಿದ್ಯಾಭ್ಯಾ, ಉದ್ಯಮ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿದ್ದರೂ ಸ್ಮಾರ್ಟ್‌ಫೋನ್ ಅತ್ಯವಶ್ಯಕವಾಗಿದೆ. ಆದರೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ ಜಗತ್ತನ್ನೇ ಮತ್ತೆ ಚಿಂತಿಸುವಂತೆ ಮಾಡುತ್ತಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯ ಮಹತ್ವದ ಅಧ್ಯಯನ ನಡೆಸಿದೆ ಸ್ಮಾರ್ಟ್‌ಫೋನ್ ಬಳಕೆ, ಸೋಶಿಯಲ್ ಮೀಡಿಯಾ , ಯೂಟ್ಯೂಬ್ ಸೇರಿದಂತೆ ಜನರು ಸ್ಮಾರ್ಟ್‌ಫೋನ್ ಸ್ಕ್ರೀನ್ ಮೇಲೆ ಹೆಚ್ಚು ನೋಡುತ್ತಾ ಕಾಲಕಳೆಯುವ ಕುರಿತು ಈ ಅಧ್ಯಯನ ನಡೆಸಲಾಗಿದೆ. ಇದರಿಂದ ಮಕ್ಕಳು, ಅಪ್ರಾಪ್ತರು, ಯುವ ಸಮೂಹದ ಮೇಲೆ ಆಗುತ್ತಿರುವ ಪರಿಣಾಮ ಜೊತೆಗೆ ಮತ್ತೊಂದು ಮುಖ್ಯ ವಿಚಾರ ಅಂದರೆ ಬದಲಾಗುತ್ತಿರುವ ಟ್ರೆಂಡ್ ಕುರಿತು ಅಧ್ಯಯನ ನಡೆಸಿದೆ.
ಹೆಚ್ಚಾಗಿ ಸ್ಮಾರ್ಟ್‌ಫೋನ್ ಬಳಕೆ ಮಾಡುವುದರಿಂದ ಮಕ್ಕಳ ಆರೋಗ್ಯದ ಮೇಲಾಗುತ್ತಿರುವ ಪರಿಣಾಮ, ಯುವ ಸಮೂಹದ ಆರೋಗ್ಯ ಸ್ಥಿತಿಗತಿ, 30 ರಿಂದ 45ರ ವಯೋಮಾನದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಅಧ್ಯಯನ ವರದಿ ಹೇಳುತ್ತಿದೆ. ಆದರೆ ಮತ್ತೊಂದು ಪ್ರಮುಖ ವಿಚಾರದ ಮೇಲೂ ಬೆಳಕು ಚೆಲ್ಲಿದೆ. ಇದು ಯುವ ಸಮೂಹದ ಬದಲಾಗುತ್ತಿರುವ ಟ್ರೆಂಡ್.
ಹಾರ್ವರ್ಡ್ ಅಧ್ಯಯನದ ಪ್ರಕಾರ ಯುವ ಸಮೂಹ ಇದೀಗ ಸ್ಮಾರ್ಟ್‌ಫೋನ್ ಬಳಕೆಯಿಂದ ಮುಕ್ತಿ ಬಯಸುತ್ತಿದ್ದಾರೆ ಎನ್ನುತ್ತಿದೆ. ಹಲವರು ಈಗಾಗಗಲೇ ಸ್ಮಾರ್ಟ್‌ಫೋನ್ ಬಿಟ್ಟು ಕೀಪ್ಯಾಡ್ ಫೋನ್ ಖರೀದಿಸಿ ಬಳಕೆ ಮಾಡುತ್ತಿದ್ದಾರೆ. ಪ್ರಮುಖವಾಗಿ ಪುಟಾಣಿ ಮಕ್ಕಳಿರುವ ಪೋಷಕರು ಇದೀಗ ಸ್ಮಾರ್ಟ್‌ಫೋನ್‌ನಿಂದ ದೂರವಾಗಿ ಕೀಪ್ಯಾಡ್ ಫೋನ್ ಬಳಕೆ ಮಾಡುತ್ತಿದ್ದಾರೆ ಎಂದು ಅಧಯ್ಯನ ವರದಿ ಹೇಳುತ್ತಿದೆ.
ಲಿಝಿ ಬ್ರೌಟನ್ ಅನ್ನೋ ಮಹಿಳೆಗೆ 5 ವರ್ಷದ ಮಗುವಿದೆ. ಸ್ಮಾರ್ಟ್‌ಫೋನ್‌ನಿಂದ ನನಗೂ ಸಮಯ ಸಿಗುತ್ತಿರಲಿಲ್ಲ. ಮಗು ಕೂಡ ಸ್ಮಾರ್ಟ್‌ಫೋನ್ ಮೇಲೆ ಅವಲಂಬಿತವಾಗುವ ಆತಂಕವೂ ಕಾಡಿತ್ತು. ಆಹಾ ಸೇವಿಸಲು, ಅಳು ನಿಲ್ಲಿಸಲು ಸೇರಿದಂತೆ ಹಲವು ಮಗುವಿನ ವಿಚಾರಕ್ಕೆ ಸ್ಮಾರ್ಟ್‌ಫೋನ್ ಅಸ್ತ್ರವಾಗಿತ್ತು. ಇದು ಆರೋಗ್ಯದ ಮೇಲೂ ಪರಿಣಾಮ ಬೀರಿತ್ತು. ಹೀಗಾಗಿ ಕೀಪ್ಯಾಡ್ ಫೋನ್ ಖರೀದಿಸಿದ್ದೇನೆ.ಇದರಿಂದ ನೆಮ್ಮದಿ ಇದೆ. ಮಗು, ಕುಟುಂಬದ ಜೊತೆ ಹೆಚ್ಚಿನ ಸಮಯ ಸಿಗುತ್ತಿದೆ ಎಂದಿದ್ದಾರೆ.
ಉತ್ತರ ಅಮೆರಿಕದಲ್ಲಿ ಉದ್ದಿಮೆದಾರರು, ಸೇರಿದಂತೆ ಹಲವರು ಕೀಪ್ಯಾಡ್ ಫೋನ್‌ನತ್ತ ಮುಖಮಾಡುತ್ತಿದ್ದಾರೆ ಎಂದು ವರದಿ ಹೇಳುತ್ತಿದೆ. ಕಾರಣ ಕೀಪ್ಯಾಡ್ ಫೋನ್‌ನಿಂದ ಹೆಚ್ಚಿನ ಸಮಯ ಸಿಗುತ್ತಿದೆ. ಉದ್ಯಮದಲ್ಲಿ ಗಮನಕೇಂದ್ರೀಕರಿಸಲು ಸಾಧ್ಯವಾಗುತ್ತಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ ಕೆಲ ಮಕ್ಕಳ ಪೋಷಕರು ತಾವು ಅನಿವಾರ್ಯವಾಗಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಕಾರಣ ಮಕ್ಕಳ ಶಾಲೆಯಲ್ಲಿ ಕೆಲ ಆ್ಯಪ್ ಬಳಸಬೇಕಿದೆ. ಹೀಗಾಗಿ ಬಳಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ.