ಅಬ್ಬಬ್ಬಾ ಉರಿ ಬಿಸಿಲು..ಮಳೆ ಬರುವ ಸೂಚನೆಗಳು ಕಾಣುತ್ತಿಲ್ಲ. ಹೊರ ಹೋಗುವುದಿರಲಿ, ಮನೆಯೊಳಗೇ ಕುಳಿತ್ರೂ ಸೆಖೆ, ಬಾಯಾರಿಕೆ, ಸುಸ್ತು.. ತಾಪದ ಹೊಡೆತಗಳು ಆರೋಗ್ಯಕ್ಕೆ ಸಾಕಷ್ಟು ಅಪಾಯಗಳನ್ನು ಉಂಟು ಮಾಡುತ್ತವೆ.
ಸನ್ ಸ್ಟ್ರೋಕ್ ಕೂಡಾ ಉಂಟಾಗಬಹುದು. ಶಾಖ-ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ನಿರ್ಣಾಯಕವಾಗುತ್ತದೆ.
ಹೀಟ್ ಸ್ಟ್ರೋಕ್ ತಡೆಯಲು ಜಿಲ್ಲಾಮಟ್ಟದ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ 5 ಬೆಡ್ ಮೀಸಲಿರಿಸಲಾಗಿದೆ. ಅದರ ಜೊತೆಗೆ ಚಿಕಿತ್ಸೆಗೆ ಬೇಕಾದ ಎಲ್ಲಾ ಔಷಧಿಗಳ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಆದ್ರೆ ಇದುವರೆಗೂ ಹೀಟ್ ಸ್ಟ್ರೋಕ್ ಒಳಗಾಗಿ ಅಡ್ಮಿಟ್ ಆಗಿಲ್ಲ. ಜನ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ವಾಪಸ್ಸಾಗ್ತಿದ್ದಾರೆ ಎಂದು ತಿಳಿಸಿದ್ದಾರೆ ಕೆಸಿ ಜನರಲ್ ಆಸ್ಪತ್ರೆ ವೈದ್ಯ ಡಾ. ಮೋಹನ್.
ಈ ಉಷ್ಣಾಂಶ ವಯೋವೃದ್ದರು ಹಾಗೂ ಚಿಕ್ಕ ಮಕ್ಕಳಲ್ಲಿ ಬೇಗ ಪರಿಣಾಮ ಬೀಳುತ್ತೆ ಎನ್ನುವ ವೈದ್ಯರು ಹೀಟ್ ಸ್ಟ್ರೋಕ್‌ನಿಂದ ದೂರವಿರಲು ಕೆಲ ಸಲಹೆಗಳನ್ನು ನೀಡಿದ್ದಾರೆ.
ಈ ಬಿಸಿಲಿನ ಝಳದಲ್ಲಿ ವಯೋವೃದ್ದರು ಸೇರಿದಂತೆ ಪ್ರತಿಯೊಬ್ಬರೂ ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು. ಸುಮ್ಮನೆ ಬಿಸಿಲಲ್ಲಿ ಅಲೆಯಬಾರದು.
ನೇರ ಬಿಸಿಲಿನ ಝಳಕ್ಕೆ ಒಳಗಾಗಬಾರದು. ಹಾಗಾಗಿ, ಹೊರ ಹೋಗಲೇ ಬೇಕಿದ್ದಾಗ ಕೊಡೆ ಹಿಡಿಯೋದು ಉತ್ತಮ. ಟೋಪಿಯನ್ನೂ ಧರಿಸಬಹುದು.
ಈ ಸಮಯದಲ್ಲಿ ಹೆಚ್ಚು ಪಾನೀಯಗಳನ್ನು ಸೇವಿಸಬೇಕು. ಸಾಕಷ್ಟು ನೀರು ಕುಡಿಯಬೇಕು. ಆಗಾಗ ಮಜ್ಜಿಗೆ, ಎಳನೀರು, ಹಣ್ಣಿನ ರಸ ಸೇವನೆ ಉತ್ತಮ.
ನೀರಿನಂಶ ಹೆಚ್ಚಿರುವ ಹಣ್ಣುಗಳ ಸೇವನೆ ಹೆಚ್ಚಿಸಿ, ಜೊತೆಗೆ ಉತ್ತಮವಾದ ಹೆಚ್ಚು ಕ್ಯಾಲೋರಿಗಳಿಲ್ಲದ ಆಹಾರ ಸೇವನೆ ಮಾಡಿ. ಬೇಸಿಗೆಯಲ್ಲಿ ಹೆಚ್ಚು ಕ್ಯಾಲೋರಿಯ ಆಹಾರ ಜೀರ್ಣವಾಗುವುದೂ ಕಷ್ಟ.
ಆದಷ್ಟು ಹತ್ತಿಯ ಬಟ್ಟೆಗಳನ್ನೇ ಧರಿಸುವುದು ಕೊಂಚ ಆರಾಮದಾಯಕವಾಗಿಸುತ್ತದೆ. ಅವು ಹೆಚ್ಚು ಲೂಸ್ ಫಿಟ್ಟಿಂಗ್ ಇದ್ದಷ್ಟೂ ಒಳಿತು.
ಮನೆಯ ಹೊರಗೆ ಅಪರಿಚಿತ ದಾರಿಹೋಕರಿಗೆ, ಪ್ರಾಣಿ ಪಕ್ಷಿಗಳಿಗಾಗಿ ಕುಡಿಯುವ ನೀರನ್ನಿರಿಸಿ. ಹೊರ ಹೋಗುವಾಗ ನೀರಿನ ಬಾಟಲ್ ಕೊಂಡೊಯ್ಯಲು ಮರೆಯಬೇಡಿ.
ಮನೆಯ ಕೋಣೆಗಳಲ್ಲಿ ಫ್ಯಾನ್ ಬಳಸಿ. ಇದರಿಂದ ಗಾಳಿ ಎಲ್ಲೆಡೆ ಚೆನ್ನಾಗಿ ಸುತ್ತುತ್ತದೆ. ಮನೆಯ ಟೆರೇಸ್, ಬಾಲ್ಕನಿ, ಅಂಗಳ, ಹಿತ್ತಲಲ್ಲಿ ಸಾಧ್ಯವಾದಷ್ಟು ಹಸಿರು ಬೆಳೆಸುವತ್ತ ಗಮನ ಹರಿಸಿ.