ಬಹುದಾ ಯಾತ್ರೆಯ ಬಳಿಕ ರಥಗಳು ಜಗನ್ನಾಥ ಮಂದಿರದ ಸಿಂಹದ್ವಾರದ ಬಳಿ ನೆಲೆಗೊಳ್ಳುತ್ತವೆ. ಆ ರಥಗಳಲ್ಲೇ ವಿರಾಜಮಾನರಾಗಿರುವ ಜಗನ್ನಾಥ, ಬಲಭದ್ರ, ಸುಭದ್ರೆಯರ ವಿಗ್ರಹಗಳನ್ನು ಮರುದಿನ, ಅಂದರೆ ಏಕಾದಶಿಯಂದು ಚಿನ್ನಾಭರಣಗಳಿಂದ ಅಲಂಕಾರಗೊಳಿಸಲಾಗುತ್ತದೆ. ಹಿಂದೆಲ್ಲ ಸುಮಾರು 370 ಕಿಲೋ ತೂಕದ, 135 ವಿವಿಧ ಚಿನ್ನಾಭರಣಗಳೊಂದಿಗೆ ಜಗನ್ನಾಥ, ಬಲಭದ್ರ, ಸುಭದ್ರೆಯರನ್ನು ಅಲಂಕರಿಸಲಾಗುತ್ತಿತ್ತಂತೆ. ಸುರಕ್ಷತೆ ಸೇರಿ ಅನೇಕ ಕಾರಣಗಳಿಗಾಗಿ ಈಗ ಸರಿಸುಮಾರು 208 ಕಿಲೋ ತೂಕದ ಆಭರಣಗಳನ್ನು ದೇವರಿಗೆ ತೊಡಿಸಲಾಗುತ್ತದೆ. ಸೋನಾ (ಚಿನ್ನ), ವೇಷ್ (ಅಲಂಕೃತ) ದೇವರ ದರ್ಶನ ಪಡೆಯಲೂ ಲಕ್ಷೋಪಲಕ್ಷ ಜನ ಆಗಮಿಸುತ್ತಾರೆ. ಅಂದು ರಾತ್ರಿ ವೇಳೆಯೂ ಸ್ವರ್ಣಾಲಂಕೃತ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಮರುದಿನ, ದ್ವಾದಶಿಯಂದು ದೇವರ ವಿಗ್ರಹಗಳನ್ನು ಮೂಲಮಂದಿರದ ಸ್ವಸ್ಥಾನಕ್ಕೆ ಮರಳಿಸಲಾಗುತ್ತದೆ. ಇದರೊಂದಿಗೆ ವಾರ್ಷಿಕ ರಥಯಾತ್ರೆಗೆ ವಿಧ್ಯುಕ್ತ ತೆರೆ ಬೀಳುತ್ತದೆ.