ಶನಿ ಎಂದರೆ ಹಲವರಿಗೆ ಕೈಕಾಲು ನಡುಗುತ್ತದೆ. ಆದರೆ, ತಪ್ಪಿನ ಮಾರ್ಗದಲ್ಲಿ ಹೋಗುವವರಷ್ಟೇ ಶನಿಗೆ ಅಷ್ಟೆಲ್ಲ ಹೆದರಬೇಕು. ಏಕೆಂದರೆ ಆತ ಕರ್ಮ ಫಲದಾತ. ತಪ್ಪಿದ್ದರೆ ಶಿಕ್ಷಿಸುತ್ತಾನೆ. ಶನಿ ಏನಾದರೂ ಕೋಪಗೊಂಡರೆ ಆತನ ಸಿಟ್ಟು ಬೇಗ ಶಮನವಾಗುವುದಿಲ್ಲ. ನ್ಯಾಯವಿದ್ದಲ್ಲಿ ಮೆಚ್ಚುಗೆಯನ್ನೂ ನೀಡುತ್ತಾನೆ. ಹಾಗಾಗಿಯೇ ನಾವು ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡಬೇಕು.
ಒಂದು ವೇಳೆ ಶನಿ ನಿಮ್ಮ ವಿಚಾರದಲ್ಲಿ ಸಂತೋಷವಾಗಿದ್ದಾನೆ ಎಂದರೆ, ಆತನ ಆಶೀರ್ವಾದ ನಿಮ್ಮ ಮೇಲಿದೆ ಎಂದರೆ ಆತ ಶನಿವಾರದ ದಿನ ಕೆಲವೊಂದು ಸೂಚನೆಗಳ ಮೂಲಕ ಅದನ್ನು ನಿಮಗೆ ವ್ಯಕ್ತಪಡಿಸುತ್ತಾನೆ. ಹೌದು, ನಂಬಿಕೆಗಳ ಪ್ರಕಾರ, ನೀವು ಶನಿವಾರದಂದು ಇವುಗಳಲ್ಲಿ ಯಾವುದಾದರೂ ಒಂದನ್ನು ನೋಡಿದರೆ, ಶನಿದೇವನು ನಿಮಗೆ ದಯೆ ತೋರುತ್ತಾನೆ ಮತ್ತು ನಿಮ್ಮ ಒಳ್ಳೆಯ ದಿನಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ ಎಂದು ಅರ್ಥ ಮಾಡಿಕೊಳ್ಳಿ. ಆ 5 ಚಿಹ್ನೆಗಳು ಯಾವುವು ಎಂದು ತಿಳಿಯೋಣ.
ಮುಂಜಾನೆಯೇ ಭಿಕ್ಷುಕನ ದರ್ಶನ: ಶನಿವಾರದಂದು ನೀವು ಮುಂಜಾನೆ ಭಿಕ್ಷುಕನನ್ನು ಕಂಡರೆ ಮತ್ತು ಅವನು ನಿಮ್ಮಿಂದ ಏನನ್ನಾದರೂ ಕೇಳುತ್ತಿದ್ದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆತನ ಪರೀಕ್ಷೆ ಇದು. ಆಗ ನೀವು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭಿಕ್ಷುಕನಿಗೆ ಸರಿಯಾಗಿ ಸಹಾಯ ಮಾಡಬೇಕು. ಇದರಿಂದ ಶನಿ ದೇವನು ನಿಮ್ಮ ಬಗ್ಗೆ ಸಂತಸಗೊಳ್ಳುತ್ತಾನೆ.
ಕಪ್ಪು ನಾಯಿ: ಶನಿವಾರದಂದು ಶನಿ ದೇವಸ್ಥಾನದ ಮುಂದೆ ಕಪ್ಪು ನಾಯಿ ಕಾಣಿಸಿಕೊಂಡರೆ, ಅದು ನಿಮಗೆ ಶುಭ ಸಂಕೇತವಾಗಿದೆ. ಈ ದಿನ ಆ ಕಪ್ಪು ನಾಯಿಗೆ ಆಹಾರ ತಿನ್ನಿಸಲು ಮರೆಯದಿರಿ, ಇದರಿಂದ ನೀವು ಶನಿ ದೇವರ ಆಶೀರ್ವಾದವನ್ನು ಪಡೆಯುತ್ತೀರಿ.
ಕಪ್ಪು ಹಸು: ಶನಿವಾರದಂದು ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಹೋಗುತ್ತಿರುವಾಗ ದಾರಿಯಲ್ಲಿ ಕಪ್ಪು ಹಸುವನ್ನು ಕಂಡರೆ, ಆ ಕೆಲಸ ಖಂಡಿತವಾಗಿಯೂ ಪೂರ್ಣಗೊಳ್ಳುತ್ತದೆ. ಅದಕ್ಕಾಗಿಯೇ ಶನಿವಾರದಂದು ಕಪ್ಪು ಹಸುವಿನ ಪೂಜೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ. ಅಲ್ಲದೆ, ಸಾಧ್ಯವಾದರೆ, ಈ ದಿನದಂದು ಕಪ್ಪು ಹಸುವನ್ನು ದಾನ ಮಾಡಿ, ಅದು ನಿಮ್ಮ ಜೀವನದ ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತದೆ.
ಗುಡಿಸುವವರ ಗೋಚರತೆ: ಸಾಮಾನ್ಯವಾಗಿ ಎದ್ದ ಕೂಡಲೇ ಗುಡಿಸುವುದು ಕಂಡು ಬಂದರೆ ಮತ್ತೆ ಮಲಗಿ ಎದ್ದು ದೇವರ ಮುಖ ನೋಡಿ ದಿನಾರಂಭಿಸುವವರಿದ್ದಾರೆ. ಆದರೆ, ನೀವು ಶನಿವಾರದಂದು ಎದ್ದ ಕೂಡಲೇ ಗುಡಿಸುವವರನ್ನು ನೋಡಿದರೆ, ವಿಶೇಷವಾಗಿ ಯಾರಾದರೂ ನೆಲವನ್ನು ಗುಡಿಸುವುದು ಕಂಡುಬಂದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ನಿಮ್ಮ ಮನೆಯಲ್ಲಿ ಕಸ ಗುಡಿಸುವವರು ಇದ್ದರೆ, ಶನಿವಾರದಂದು ಅವರಿಗೆ ಏನಾದರೂ ದಾನ ಮಾಡಿ. ಇದು ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಕರಿ ಕಾಗೆ: ಶನಿವಾರದಂದು ಕರಿ ಕಾಗೆ ನಿಮ್ಮ ಮನೆಯ ಅಂಗಳದಲ್ಲಿ ನೀರು ಕುಡಿಯಲು ಬಂದರೆ ಅಥವಾ ನೀವು ಮನೆಯ ಮುಂದೆ ಇಟ್ಟಿರುವ ನೀರು ಕುಡಿದರೆ ಅದನ್ನು ತುಂಬಾ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದನ್ನು ನೋಡಿದ ವ್ಯಕ್ತಿಗೆ ಶನಿದೇವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ, ಆದರೆ ಶನಿವಾರದಂದು ಕಾಗೆ ನಿಮ್ಮ ತಲೆಗೆ ಮೊಟಕಿದರೆ, ನೀವು ಜಾಗರೂಕರಾಗಿರಬೇಕು. ಇದು ಶನಿದೇವನು ನಿಮ್ಮ ಮೇಲೆ ಕೋಪಗೊಂಡಿದ್ದಾನೆ ಎಂಬುದರ ಸಂಕೇತವಾಗಿದೆ.