Solar Eclipse: ಆಗಸ್ಟ್ 12 ರಂದು ಸಂಭವಿಸುವ ಸೂರ್ಯಗ್ರಹಣವು ಜಗತ್ತನ್ನು ಕತ್ತಲೆಯಲ್ಲಿ ಮುಳುಗಿಸುತ್ತದೆಯೇ, ಇಂಟರ್ನೆಟ್ ಅನ್ನು ಸ್ಥಗಿತಗೊಳಿಸುತ್ತದೆಯೇ ಮತ್ತು ಭಾರತದಲ್ಲಿ ಸೂತಕದ ಅವಧಿಯನ್ನು ಉಂಟುಮಾಡುತ್ತದೆಯೇ? ಈ ಮೂರು ವೈರಲ್ ಸುದ್ದಿಗಳ ಹಿಂದಿನ ವೈಜ್ಞಾನಿಕ ಸತ್ಯ ತಿಳಿಯಿರಿ.
12 ಆಗಸ್ಟ್ 2026ರ ಸಂಪೂರ್ಣ ಸೂರ್ಯಗ್ರಹಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಭಯ ಹುಟ್ಟಿಸುವ ಹೇಳಿಕೆಗಳು ಹರಿದಾಡುತ್ತಿವೆ. ಕೆಲವೆಡೆ ಇಡೀ ಜಗತ್ತು ಹಲವು ಗಂಟೆಗಳ ಕಾಲ ಕತ್ತಲೆಯಲ್ಲಿ ಮುಳುಗಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವೆಡೆ ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳಲಿದೆ ಎಂಬ ಎಚ್ಚರಿಕೆಗಳು ಹರಿದಾಡುತ್ತಿವೆ. ಈ ಸಂದೇಶಗಳಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ವಿಶೇಷವಾಗಿ ಗರ್ಭಿಣಿಯರು ಮತ್ತು ವೃದ್ಧರನ್ನು ಕುರಿತು ಹಲವು ಆಧಾರರಹಿತ ಮಾಹಿತಿಗಳು ಹಂಚಿಕೊಳ್ಳಲಾಗುತ್ತಿವೆ. ಆದರೆ NASA ನೀಡಿರುವ ಮಾಹಿತಿ ಮತ್ತು ಲಭ್ಯವಿರುವ ವೈಜ್ಞಾನಿಕ ಅಂಶಗಳನ್ನು ಗಮನಿಸಿದರೆ, ವಾಸ್ತವ ಚಿತ್ರಣ ಸಂಪೂರ್ಣ ಭಿನ್ನವಾಗಿದೆ.
28
ಸೂರ್ಯಗ್ರಹಣದ ಕುರಿತು ಹರಿದಾಡುತ್ತಿರುವ 3 ವೈರಲ್ ಹೇಳಿಕೆಗಳೇನು?
ಹೇಳಿಕೆ 1: ಇಡೀ ಜಗತ್ತು ಕತ್ತಲಿನಿಂದ ಅವೃತವಾಗುತ್ತಾ?
ವೈರಲ್ ಸುದ್ದಿಯ ಪ್ರಕಾರ ಆಗಸ್ಟ್ 12ರಂದು ಇಡೀ ಭೂಮಿ ಹಲವು ಗಂಟೆಗಳ ಕಾಲ ಕತ್ತಲೆಯಲ್ಲಿ ಮುಳುಗಲಿದೆ. ಹಗಲಿನಲ್ಲೇ ರಾತ್ರಿಯ ವಾತಾವರಣ ನಿರ್ಮಾಣವಾಗಲಿದೆ ಮತ್ತು ಜನರು ಮನೆಗಳಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಎನ್ನುವ ಸುದ್ದಿ ವೈರಲ್ ಆಗುತ್ತಿದೆ.
38
ಸತ್ಯವೇನು?
ಆಗಸ್ಟ್ 12ರ ಸೂರ್ಯಗ್ರಹಣ ಸಂಪೂರ್ಣ ಸೂರ್ಯಗ್ರಹಣವಾಗಿದ್ದರೂ, ಇಡೀ ಜಗತ್ತಿನಲ್ಲಿ ಒಂದೇ ಸಮಯದಲ್ಲಿ ಸೂರ್ಯ ಕಾಣೆಯಾಗುತ್ತಾನೆ ಎಂದರ್ಥವಲ್ಲ. ಸಂಪೂರ್ಣ ಸೂರ್ಯಗ್ರಹಣವು ಚಂದ್ರನ ನೆರಳು ಬೀಳುವ ಕಿರಿದಾದ ಪ್ರದೇಶದಲ್ಲಿ ಮಾತ್ರ ಗೋಚರಿಸುತ್ತದೆ. NASA ಪ್ರಕಾರ, ಸಂಪೂರ್ಣ ಸೂರ್ಯಗ್ರಹಣವು ಗ್ರೀನ್‌ಲ್ಯಾಂಡ್, ಐಸ್‌ಲ್ಯಾಂಡ್, ಉತ್ತರ ರಷ್ಯಾ, ಸ್ಪೇನ್ ಮತ್ತು ಪೋರ್ಚುಗಲ್‌ನ ಕೆಲವು ಸಣ್ಣ ಭಾಗಗಳಲ್ಲಿ ಗೋಚರಿಸಲಿದೆ. ಕೆನಡಾ, ಅಮೆರಿಕದ ಉತ್ತರ ಭಾಗಗಳು, ಯುರೋಪ್ ಮತ್ತು ವಾಯವ್ಯ ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಭಾಗಶಃ ಸೂರ್ಯಗ್ರಹಣ ಕಾಣಿಸಿಕೊಳ್ಳಲಿದೆ.
ಭಾರತದಲ್ಲಿ ಈ ಗ್ರಹಣದಿಂದ ಕತ್ತಲೆ ಆವರಿಸುವುದಿಲ್ಲ. ಗ್ರಹಣದ ಪ್ರಮುಖ ಹಂತಗಳು ಭಾರತೀಯ ಕಾಲಮಾನ ಪ್ರಕಾರ ರಾತ್ರಿ ಸಮಯದಲ್ಲಿ ನಡೆಯಲಿವೆ. ಆ ಸಮಯದಲ್ಲಿ ಸೂರ್ಯ ಭಾರತದ ಕ್ಷಿತಿಜದ ಕೆಳಗಿರುತ್ತಾನೆ. ಜೊತೆಗೆ ಭಾರತವು ಈ ಗ್ರಹಣ ಗೋಚರಿಸುವ ಪ್ರದೇಶದ ವ್ಯಾಪ್ತಿಯಲ್ಲೂ ಇಲ್ಲ. ಭಾರತದಲ್ಲಿ ಸಾಮಾನ್ಯ ದಿನದಂತೆಯೇ ಸೂರ್ಯಾಸ್ತವಾಗಲಿದೆ. ಗ್ರಹಣದ ಕಾರಣದಿಂದ ಹಗಲಿನಲ್ಲಿ ಏಕಾಏಕಿ ಕತ್ತಲೆ ಆವರಿಸುವುದು ಅಥವಾ ತಾಪಮಾನದಲ್ಲಿ ದೊಡ್ಡ ಪ್ರಮಾಣದ ಕುಸಿತವಾಗುವ ಪ್ರಶ್ನೆಯೇ ಇಲ್ಲ.
58
ಹೇಳಿಕೆ 2: ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಸ್ಥಗಿತಗೊಳ್ಳಲಿದೆ
ಗ್ರಹಣದ ಸಮಯದಲ್ಲಿ ಅಪಾಯಕಾರಿ ಕಿರಣಗಳು ಅಥವಾ ಎಲೆಕ್ಟ್ರೋಮ್ಯಾಗ್ನೆಟಿಕ್ ಅಲೆಗಳು ಬಿಡುಗಡೆಯಾಗುತ್ತವೆ. ಇದರಿಂದ ಉಪಗ್ರಹಗಳು ಸ್ಥಗಿತಗೊಂಡು ಇಡೀ ಜಗತ್ತಿನ ಇಂಟರ್ನೆಟ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
68
ಈ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ
ಗ್ರಹಣದಿಂದ ಯಾವುದೇ ಹೊಸ ಅಥವಾ ರಹಸ್ಯಮಯ ವಿಕಿರಣ ಉಂಟಾಗುವುದಿಲ್ಲ. ಆದ್ದರಿಂದ ಆಪ್ಟಿಕಲ್ ಫೈಬರ್, ವೈ-ಫೈ, ಮೊಬೈಲ್ ಟವರ್‌ಗಳು ಅಥವಾ ಜಾಗತಿಕ ಉಪಗ್ರಹ ನೆಟ್‌ವರ್ಕ್‌ಗಳು ಏಕಾಏಕಿ ಸ್ಥಗಿತಗೊಳ್ಳುವ ಸಾಧ್ಯತೆ ಇಲ್ಲ.
78
ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆಯೇ?
ದೊಡ್ಡ ಪ್ರಮಾಣದಲ್ಲಿ ಸೌರಶಕ್ತಿಯನ್ನು ಬಳಸುವ ಪ್ರದೇಶಗಳಲ್ಲಿ ಮತ್ತು ಅಲ್ಲಿ ಗ್ರಹಣ ಗೋಚರಿಸುವ ಸಂದರ್ಭದಲ್ಲಿ, ಸೌರ ವಿದ್ಯುತ್ ಉತ್ಪಾದನೆ ಕೆಲ ಸಮಯ ಕಡಿಮೆಯಾಗಬಹುದು. ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ಇದು ಸಂಭವಿಸುತ್ತದೆ. ಸೌರಶಕ್ತಿಯಲ್ಲಾಗುವ ಈ ತಾತ್ಕಾಲಿಕ ಇಳಿಕೆ ಇಡೀ ಜಗತ್ತಿನ ವಿದ್ಯುತ್ ಗ್ರಿಡ್‌ನ್ನು ಸ್ಥಗಿತಗೊಳಿಸುವುದಿಲ್ಲ. ಹೀಗಾಗಿ “ಗ್ರಹಣ ಬರುತ್ತಿದ್ದಂತೆ ಇಂಟರ್ನೆಟ್ ಮತ್ತು ವಿದ್ಯುತ್ ಸ್ಥಗಿತಗೊಳ್ಳಲಿದೆ” ಎಂಬ ಹೇಳಿಕೆ ತಪ್ಪು ಮತ್ತು ಆತಂಕ ಸೃಷ್ಟಿಸುವಂತದ್ದು.
88
ಹೇಳಿಕೆ 3: ಭಾರತದಲ್ಲಿ 12 ಗಂಟೆಗಳ ಸೂತಕ ಆರಂಭ
ಸಾಮಾಜಿಕ ಜಾಲತಾಣಗಳಲ್ಲಿ ಭಾರತದಲ್ಲಿ 12 ಗಂಟೆಗಳ ಸೂತಕ ಆರಂಭವಾಗಲಿದೆ ಎಂದು ಹಲವು ಪೋಸ್ಟ್‌ಗಳು ಹರಿದಾಡುತ್ತಿವೆ. ಇದರ ಪ್ರಕಾರ ದೇವಸ್ಥಾನಗಳ ಬಾಗಿಲು ಮುಚ್ಚಿರುತ್ತವೆ ಮತ್ತು ಪೂಜೆ-ಪುನಸ್ಕಾರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇಲ್ಲಿ ಧಾರ್ಮಿಕ ನಂಬಿಕೆ ಮತ್ತು ವೈಜ್ಞಾನಿಕ ವಿಚಾರಗಳನ್ನು ಪ್ರತ್ಯೇಕವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ. ಗ್ರಹಣ ನಮ್ಮ ದೇಶದಲ್ಲಿ ಆಗುವುದಿಲ್ಲ. ಹಾಗಾಗಿ, ಅದರ ಪರಿಣಾಮ ಸೂತಕ ಇಲ್ಲಿ ಇಲ್ಲ. ಆದರೆ ಆಚರಣೆ ಮತ್ತು ದೇವಸ್ಥಾನಗಳ ಬಾಗಿಲು ಮುಚ್ಚುವ ಆಚರಣೆ ಆಯಾ ಪ್ರದೇಶಕ್ಕೆ ಬಿಟ್ಟದ್ದಾಗಿದೆ.