90s Kids DuckTales Cartoon Nostalgia90ರ ದಶಕದ ಮಕ್ಕಳಾ ನೀವು? ಹಾಗಿದ್ರೆ ದೂರದರ್ಶನದಲ್ಲಿ ಬರ್ತಿದ್ದ ಡೊನಾಲ್ಡ್ ಡಕ್ ಕಾರ್ಟೂನ್ ನೆನಪಿದೆಯಾ? ಅಂಕಲ್ ಸ್ಕ್ರೂಜ್, ಹ್ಯೂಯಿ, ಡ್ಯೂಯಿ, ಲೂಯಿ ಎಲ್ಲ ನೆನಪಿದ್ದಾರಾ? ಬನ್ನಿ, ಆ ಕಾಮಿಡಿ ಸೀರಿಸ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ.
'ಡಕ್‌ಟೇಲ್ಸ್' ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಒಂದು ಪ್ರಸಿದ್ಧ ಆನಿಮೇಟೆಡ್ ಟಿವಿ ಸರಣಿ. 1990ರ ದಶಕದಲ್ಲಿ ಭಾರತದಲ್ಲಿ, ಅದರಲ್ಲೂ ದೂರದರ್ಶನದಲ್ಲಿ ಪ್ರಸಾರವಾದ ಈ ಸೀರಿಯಲ್, ಅಂದಿನ ಮಕ್ಕಳ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಉಳಿಸಿದೆ. ವಾಲ್ಟ್ ಡಿಸ್ನಿ ಟೆಲಿವಿಷನ್ ಆನಿಮೇಷನ್ ನಿರ್ಮಿಸಿದ ಈ ಸರಣಿ, ಕಾರ್ಟೂನ್ ಜಗತ್ತಿನಲ್ಲಿ ಒಂದು ಹೊಸ ಅಧ್ಯಾಯವನ್ನೇ ಸೃಷ್ಟಿಸಿತು.
25
ಡಕ್‌ಟೇಲ್ಸ್ ಕಥೆ ಏನು? ಅದರಲ್ಲಿನ ಪಾತ್ರಗಳು ಯಾವುವು?
ಈ ಕಥೆ ನಡೆಯೋದು ಜಗತ್ತಿನ ಅತ್ಯಂತ ಶ್ರೀಮಂತ ಬಾತುಕೋಳಿ 'ಸ್ಕ್ರೂಜ್ ಮೆಕ್‌ಡಕ್' ಮತ್ತು ಅವನ ಸೋದರಳಿಯರಾದ ಹ್ಯೂಯಿ, ಡ್ಯೂಯಿ ಮತ್ತು ಲೂಯಿ ಸುತ್ತ. ಡೊನಾಲ್ಡ್ ಡಕ್ ಸೈನ್ಯಕ್ಕೆ ಸೇರುವುದರಿಂದ, ತನ್ನ ಮೂವರು ಸೋದರಳಿಯರನ್ನು ನೋಡಿಕೊಳ್ಳಲು ಚಿಕ್ಕಪ್ಪ ಸ್ಕ್ರೂಜ್ ಬಳಿ ಬಿಟ್ಟು ಹೋಗುತ್ತಾನೆ. ಸ್ಕ್ರೂಜ್ ಮೆಕ್‌ಡಕ್ ಒಬ್ಬ ಜಿಪುಣ. ಖರ್ಚು ಮಾಡಲು ಹಿಂದೇಟು ಹಾಕುವ ಸ್ವಭಾವ ಅವನದು. ಅವನ ಬಳಿ ಅಪಾರ ಸಂಪತ್ತು ಇರುತ್ತದೆ. ದೊಡ್ಡ ಚಿನ್ನದ ನಾಣ್ಯಗಳ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜುತ್ತಿರುತ್ತಾನೆ. ಅವನು ಲೋಭಿಯಾಗಿದ್ದರೂ, ಸಾಹಸಗಳೆಂದರೆ ಪ್ರಾಣ ಕೊಡುವ ಅಜ್ಜ.
35
ಎಲ್ಲರನ್ನೂ ಆಕರ್ಷಿಸಿದ ಪಾತ್ರಗಳು ಇವು..
ಹ್ಯೂಯಿ, ಡ್ಯೂಯಿ ಮತ್ತು ಲೂಯಿ ತಮಾಷೆಯ ಪುಟ್ಟ ಪಾತ್ರಗಳು. ಕೆಂಪು, ನೀಲಿ, ಹಸಿರು ಬಣ್ಣದ ಡ್ರೆಸ್ ಹಾಕುವ ಈ ಮೂವರು ಚುರುಕಿನ ಮಕ್ಕಳು, ತಮ್ಮ ಬುದ್ಧಿವಂತಿಕೆಯಿಂದ ಪ್ರತಿ ಸಮಸ್ಯೆಯನ್ನೂ ಬಗೆಹರಿಸುತ್ತಾರೆ. ಅಂಕಲ್ ಸ್ಕ್ರೂಜ್‌ಗೆ ಬರುವ ಪ್ರತಿಯೊಂದು ಸಮಸ್ಯೆಯನ್ನು ಈ ಮಕ್ಕಳು ಪರಿಹರಿಸುತ್ತಾರೆ. ಇವರ ಜೊತೆಗೆ ಲಾಂಚ್‌ಪ್ಯಾಡ್ ಮೆಕ್‌ಕ್ವಾಕ್ ಎಂಬ ಇನ್ನೊಂದು ಪಾತ್ರವಿದೆ. ಅವನು ವಿಮಾನ ಚಲಾಯಿಸುವುದರಲ್ಲಿ ಎಕ್ಸ್‌ಪರ್ಟ್, ಆದರೆ ಪ್ರತಿ ಬಾರಿಯೂ ಕ್ರಾಶ್ ಲ್ಯಾಂಡಿಂಗ್ ಮಾಡುವ ಮುಗ್ಧ ಪೈಲಟ್ ಆಗಿ ನಗಿಸುತ್ತಾನೆ. ಅಂಕಲ್ ಸ್ಕ್ರೂಜ್ ಮನೆಯಲ್ಲಿ ಕೆಲಸ ಮಾಡುವ ಕೇರ್‌ಟೇಕರ್ ಮೊಮ್ಮಗಳು ವೆಬ್ಬಿ ವ್ಯಾಂಡರ್‌ಕ್ವಾಕ್ ಕೂಡ ಈ ಮಕ್ಕಳ ಜೊತೆ ಇರುತ್ತಾಳೆ. ಈ ಮೂವರು ಮಕ್ಕಳೊಂದಿಗೆ ಸಾಹಸಗಳಲ್ಲಿ ಭಾಗಿಯಾಗುತ್ತಾಳೆ.
ಡಕ್‌ಟೇಲ್ಸ್ ಮೊದಲ ಬಾರಿಗೆ ಸೆಪ್ಟೆಂಬರ್ 18, 1987ರಂದು ಅಮೆರಿಕದಲ್ಲಿ ಬಿಡುಗಡೆಯಾಯಿತು. ಒಟ್ಟು 100 ಎಪಿಸೋಡ್‌ಗಳೊಂದಿಗೆ ನಾಲ್ಕು ಸೀಸನ್‌ಗಳ ಕಾಲ ಯಶಸ್ವಿಯಾಗಿ ಪ್ರಸಾರವಾಯಿತು. ನವೆಂಬರ್ 28, 1990ರಂದು ಈ ಸರಣಿ ಮುಗಿಯಿತು. ನಂತರ 1990ರಲ್ಲಿ "ಡಕ್‌ಟೇಲ್ಸ್ ದಿ ಮೂವೀ: ಟ್ರೆಷರ್ ಆಫ್ ದಿ ಲಾಸ್ಟ್ ಲ್ಯಾಂಪ್" ಹೆಸರಿನಲ್ಲಿ ಒಂದು ಪೂರ್ಣ ಪ್ರಮಾಣದ ಸಿನಿಮಾ ಕೂಡ ಬಿಡುಗಡೆಯಾಯಿತು. 1990ರ ದಶಕದಲ್ಲಿ ಭಾರತದಲ್ಲಿ ದೂರದರ್ಶನದ 'ಡಿಸ್ನಿ ಕ್ಲಬ್' ಕಾರ್ಯಕ್ರಮದ ಮೂಲಕ ಈ ಸರಣಿ ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಯಿತು. "ಜಿಂದಗೀ ತೂಫಾನೀ ಹೈ" (ಹಿಂದಿ) ಟೈಟಲ್ ಟ್ರ್ಯಾಕ್ ಆಗಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಮೊಳಗುತ್ತಿತ್ತು.
55
ಹಲವು ವಿಶೇಷತೆಗಳು..
ಈ ಸರಣಿಯ ಪ್ರತಿ ಎಪಿಸೋಡ್ ಒಂದು ಹೊಸ ಸಾಹಸ, ನಿಧಿ ಹುಡುಕಾಟ ಮತ್ತು ಜ್ಞಾನವನ್ನು ನೀಡುವಂತಿತ್ತು. ಬ್ಯೂರೋಕ್ರಾಟ್ ಬಾಂಬರ್ಸ್, ಮ್ಯಾಜಿಕ್ ದ ಸ್ಪೆಲ್‌ನಂತಹ ಖಳನಾಯಕರಿಂದ ತಮ್ಮ ಆಸ್ತಿ ಮತ್ತು ಚಿನ್ನದ ನಾಣ್ಯಗಳನ್ನು ಕಾಪಾಡಿಕೊಳ್ಳಲು ಸ್ಕ್ರೂಜ್ ಜೊತೆಗೆ ಮಕ್ಕಳು ಮಾಡುವ ಹೋರಾಟಗಳು ಪ್ರೇಕ್ಷಕರನ್ನು ಬಹಳವಾಗಿ ಆಕರ್ಷಿಸುತ್ತಿದ್ದವು. ಕಾರ್ಟೂನ್ ನೆಟ್‌ವರ್ಕ್, ಡಿಸ್ನಿ ಚಾನೆಲ್‌ಗಳು ಬರುವ ಮೊದಲೇ ಅಂದಿನ ಮಕ್ಕಳಿಗೆ ಅತ್ಯುತ್ತಮ ಮನರಂಜನೆ ನೀಡಿದ ಹೆಗ್ಗಳಿಕೆ ಡಕ್‌ಟೇಲ್ಸ್‌ನದ್ದು. 2017ರಲ್ಲಿ ಡಿಸ್ನಿ ಸಂಸ್ಥೆ ಈ ಸರಣಿಯನ್ನು ಹೊಸ ಆನಿಮೇಷನ್‌ನೊಂದಿಗೆ ರೀಬೂಟ್ ಮಾಡಿ ಮತ್ತೆ ನಿರ್ಮಿಸಿದರೂ, 1980 ಮತ್ತು 90ರ ದಶಕದ ಮೂಲ ಡಕ್‌ಟೇಲ್ಸ್ ನೀಡಿದ ಅನುಭವ ಮತ್ತು ಆನಂದ ಇಂದಿಗೂ ವಿಶೇಷ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.