ಬಿಗ್‌ಬಾಸ್ ಖ್ಯಾತಿಯ ನಟ ಧ್ರುವಂತ್ ತಮ್ಮ ಬೈಕ್ ಕಳ್ಳತನವಾದ ಘಟನೆಯನ್ನು ಹಂಚಿಕೊಂಡಿದ್ದಾರೆ. ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೂ, ಒಂದು ವರ್ಷವಾದರೂ ತಮಗೆ ನ್ಯಾಯ ಸಿಗದೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ಪೊಲೀಸ್ ವ್ಯವಸ್ಥೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜನ ತಮಗಾಗಿರುವ ಅನ್ಯಾಯದ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇಂಥ ಪೋಸ್ಟ್ ಮಾಡಿದಾಗಲೆಲ್ಲಾ ಅದಕ್ಕೆ ಕಮೆಂಟ್ ಹಾಕುವವರು ತಮಗಾಗಿರುವ ಅನ್ಯಾಯದ ಬಗ್ಗೆ ಕೋಪ ವ್ಯಕ್ತಪಡಿಸುತ್ತಾರೆ. ಆದರೆ ಬಡವನ ಕೋಪ ದವಡೆಗೆ ಮೂಲ ಎನ್ನುವ ಸ್ಥಿತಿ.
26
ಕಳ್ಳ ಗೊತ್ತಿದ್ರೂ ಪೊಲೀಸರ ಮೌನ
ಅದರಲ್ಲಿಯೂ ವಾಹನ ಕಳ್ಳತನವಾದಾಗ, ಒಂದು ಪ್ರದೇಶದಲ್ಲಿ ಇಂಥವರೇ ಕಳ್ಳರು ಎನ್ನುವುದು ಆ ವ್ಯಾಪ್ತಿಯ ಪೊಲೀಸರಿಗೆ ತಿಳಿಯದೇ ಇರುವ ವಿಷ್ಯವೇ ಅಲ್ಲ. ಬೈಕ್ ಕಳ್ಳತನವಾದರಂತೂ ಅದನ್ನು ಕಳುವು ಮಾಡಿ ಅದರ ಪಾರ್ಟ್ಸ್‌ಗಳು ಇಂಥದ್ದೇ ಗ್ಯಾರೇಜ್‌ಗೆ ಹೋಗಿರುತ್ತವೆ ಎನ್ನುವ ಸಂಪೂರ್ಣ ಡಿಟೇಲ್ಸ್ ಪೊಲೀಸರಿಗೆ ಗೊತ್ತಿರುತ್ತದೆ. ಆದರೆ ಸಾಮಾನ್ಯ ಜನರು ಕಂಪ್ಲೇಂಟ್ ಕೊಟ್ಟರೆ ಮಾತ್ರ ದೂರುದಾರರ ಚಪ್ಪಲಿ ಸವೆಯಬೇಕೇ ವಿನಾ ಇಂಥವರೇ ಕಳ್ಳರು ಎಂದು ತಿಳಿದಿದ್ದರೂ, ಪೊಲೀಸರು ಮೌನವಾಗಿರುವ ಬಗ್ಗೆ ಇದಾಗಲೇ ಹಲವರು ಆಕ್ರೋಶ ವ್ಯಕ್ತಪಡಿಸುವುದು ಇದ್ದೇ ಇದೆ.
36
ದೊಡ್ಡವರ ಬಳಿ ಹೇಳಿಸಿದ್ರೆ ದಿಢೀರ್ ಸಿಗುತ್ತೆ ವಸ್ತುಗಳು!
ಎಲ್ಲಿಯಾದರೂ ಏನಾದರೂ ವಸ್ತುಗಳು ಕಳುವಾದರೂ ಇದೇ ಸ್ಥಿತಿ. ಸೆಲೆಬ್ರಿಟಿಗಳ ವಸ್ತುವಾದರೆ ಬೇಗನೇ ಸಿಕ್ಕಿಬಿಡುತ್ತದೆ ಅಥವಾ ಇನ್ನಾರಿಂದಲೋ ಫೋನ್ ಮಾಡಿಸಿದ್ರೆ ವರ್ಷವಾದರೂ ಸಿಗದ ವಸ್ತುಗಳ ಕ್ಷಣ ಮಾತ್ರದಲ್ಲಿ ಸಿಕ್ಕಿಬಿಟ್ಟಿರುವ ಉದಾಹರಣೆಗಳು ಇವೆ. ಹೀಗೆ ಹೇಳುತ್ತಾ ಹೋದರೆ ಈ ವ್ಯವಸ್ಥೆಯ ಬಗ್ಗೆ ಅಸಹ್ಯ ಮೂಡುವಷ್ಟು ಘಟನೆಗಳು ದಿನನಿತ್ಯ ನಡೆಯುತ್ತಿವೆ. ದಕ್ಷರಾಗಿದ್ದು, ಎಂಜಲು ಕಾಸಿಗೆ ಆಸೆ ಪಡದೇ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪೊಲೀಸರು ಇದ್ದರೂ, ಜನರ ಅನುಭವ ಕೇಳುತ್ತಿದ್ದರೆ ಇಂಥವರ ಸಂಖ್ಯೆ ಅತಿ ವಿರಳ ಎನ್ನಿಸುವುದು ಉಂಟು.
ಸಾಮಾನ್ಯ ಜನರ ಬದುಕೇ ದುಸ್ತರ ಎನ್ನುವ ಮಾತು ಸುಳ್ಳು. ಸೆಲೆಬ್ರಿಟಿಗಳಿಗೂ ಇದೇ ರೀತಿ ಆಗುತ್ತದೆ. ಕಳ್ಳನನ್ನು ಹಿಡಿದುಕೊಟ್ಟರೂ ಪೊಲೀಸರು ಮೌನವಾಗಿರುವ ಬಗ್ಗೆ ನೋವಿನ ಘಟನೆ ತೆರೆದಿಟ್ಟಿದ್ದಾರೆ Bigg Boss ಖ್ಯಾತಿಯ ಧ್ರುವಂತ್. ಪಿಯುಸಿಯಲ್ಲಿ ಅಪ್ಪ ಕೊಡಿಸಿದ ಬೈಕ್, ತಮ್ಮ ಪ್ರೀತಿಯ, ತಮ್ಮ ಲಕ್ಕಿಯ ಬೈಕ್ ಕಳ್ಳತನದ ಪ್ರಕರಣದ ಬಗ್ಗೆ, ಅಸಹ್ಯ ಪೊಲೀಸ್ ವ್ಯವಸ್ಥೆಯ ಬಗ್ಗೆ ನೊಂದು ನುಡಿದಿದ್ದಾರೆ ಧ್ರುವಂತ್.
56
ಬಿಗ್‌ಬಾಸ್ ಧ್ರುವಂತ್ ಕಿಡಿ
ಬಾಸ್‌ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ. ಕಾರ್ಯ ನಿಮಿತ್ತ ಎಲ್ಲಿಗೋ ಹೋಗಬೇಕಾದಾಗ ತಮ್ಮ ಈ ಲಕ್ಕಿ ಬೈಕ್ ಅನ್ನು ಸ್ನೇಹಿತನ ಮನೆಯ ಎದುರು ನಿಲ್ಲಿಸಿ ಹೋಗಿದ್ದೆ. ಅಲ್ಲಿಂದ ಅದನ್ನು ಯಾರೋ ಕಳುವು ಮಾಡಿಕೊಂಡು ಹೋದ. ಅವನು ಯಾರು ಎನ್ನುವುದು ನನಗೆ ಗೊತ್ತಾಯ್ತು.
66
ಕಳ್ಳನ ಹಿಡಿದುಕೊಟ್ರೂ ಏನೂ ಆಗಿಲ್ಲ ಎಂದ ನಟ
ಈ ಬಗ್ಗೆ ಪೊಲೀಸರಲ್ಲಿ ದೂರು ಕೊಟ್ಟೆ. ಅವನನ್ನು ಕರೆಸಿ ವಿಚಾರಣೆ ಕೂಡ ಮಾಡಿದ್ರು. ಆದರೆ ಫಲಿತಾಂಶ ಮಾತ್ರ ಶೂನ್ಯ. ಒಂದು ವರ್ಷವಾದ್ರೂಇದುವರೆಗೆ ಅವನೇ ಕಳ್ಳ ಎಂದು ಹೇಳಿದರೂ ಪೊಲೀಸರು ಬೈಕ್ ನನಗೆ ಕೊಟ್ಟಿಲ್ಲ. ಇದು ನಮ್ಮ ಪೊಲೀಸ್ ವ್ಯವಸ್ಥೆ ಎಂದು ಕಿಡಿ ಕಾರಿದ್ದಾರೆ ಧ್ರುವಂತ್. ಇವರ ಈ ಮಾತಿಗೆ ಹಲವರು ಕಮೆಂಟ್ ಮಾಡಿದ್ದು, ಕಳ್ಳರ ಜೊತೆ ಪೊಲೀಸರು ಶಾಮೀಲಾಗ್ತಾರೆ, ಅವರಿಂದ ವಸೂಲಿ ಮಾಡ್ತಾರೆ ಅದಕ್ಕಾಗಿಯೇ ಹೀಗೆ ಮಾಡ್ತಾರೆ ಎಂದೆಲ್ಲಾ ಆಕ್ರೋಶ ಹೊರ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ