ಮೊದಲ ಮದುವೆಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ ವಿಚಾರದಲ್ಲಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಗಂಡನಿಗೆ ಹೆಂಡತಿ ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಮಾಡಿ ಪರಾರಿ ಆಗಿದ್ದನು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರು (ಸೆ.11): ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಹಿಂದೆ ಗಂಡನೇ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಅಮೀನಾ (35) ಎಂಬ ಮಹಿಳೆಯನ್ನು ಆಕೆಯ ಗಂಡನೇ ಮರದ ಪಟ್ಟಿಯಿಂದ ಹೊಡೆದು ಕೊಲೆ ಮಾಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
25
ಮೊದಲ ಮದುವೆ ಮುಚ್ಚಿಟ್ಟಿದ್ದ ಗಂಡ
ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆರೋಪಿ ಮೊದಲ ಮದುವೆಯ ವಿಷಯವನ್ನು ಮುಚ್ಚಿಟ್ಟು ಅಮೀನಾಳನ್ನು ಮದುವೆಯಾಗಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು. ಜಗಳ ತಾರಕಕ್ಕೇರಿದಾಗ, ಆರೋಪಿ ಮರದ ರಿಪೀಸ್ ಪಟ್ಟಿಯಿಂದ ಅಮೀನಾಳ ತಲೆಗೆ ಮತ್ತು ದೇಹಕ್ಕೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
35
ಕೂಲಿ ಕೆಲಸಕ್ಕೆ ಬಂದು ಮಸಣ ಸೇರಿದಳು
ಪೊಲೀಸ್ ಮೂಲಗಳ ಪ್ರಕಾರ, ಕೊಲೆಯಾದ ಅಮೀನಾ ಮತ್ತು ಆರೋಪಿ ಇಬ್ಬರೂ ಪಶ್ಚಿಮ ಬಂಗಾಳ ಮೂಲದವರು. ಸುಮಾರು ಒಂದೂವರೆ ತಿಂಗಳ ಹಿಂದೆ ಕೂಲಿ ಕೆಲಸ ಮಾಡುವ ಸಲುವಾಗಿ ಬೆಂಗಳೂರಿಗೆ ಬಂದು ಯಲಹಂಕದಲ್ಲಿ ಬಾಡಿಗೆ ಮನೆ ಪಡೆದಿದ್ದರು. ಆರೋಪಿಯು ತನ್ನ ಮೊದಲ ಮದುವೆಯ ವಿಷಯ ಬಹಿರಂಗವಾದ ನಂತರ, ಅದನ್ನು ಒಪ್ಪಿಕೊಳ್ಳುವಂತೆ ಅಮೀನಾಳನ್ನು ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ನಂತರ ಆರೋಪಿ ತಕ್ಷಣವೇ ರಾಜಮಂಡ್ರಿಗೆ ಪರಾರಿಯಾಗಿದ್ದ. ಈಶಾನ್ಯ ವಿಭಾಗದ ಪೊಲೀಸರು ತಂತ್ರಜ್ಞಾನ ಮತ್ತು ಮಾಹಿತಿ ಸಂಗ್ರಹದ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
55
ಆರೋಪಿ ನ್ಯಾಯಾಂಗ ಬಂಧನ
ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಈ ಘಟನೆ ಯಲಹಂಕ ಉಪನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.