2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇದೀಗ ಗ್ರೂಪ್ ಹಂತದಲ್ಲಿ ಸತತ ಎರಡು ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.
ಗ್ರೂಪ್ ಹಂತದ ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಸುಲಭ ಗೆಲುವು ದಾಖಲಿಸಿದ್ದ ಭಾರತ, ಇದಾದ ಬಳಿಕ ಬದ್ದ ಎದುರಾಳಿ ಪಾಕಿಸ್ತಾನ ಎದುರು 120 ರನ್ ಗಳಿಸಿಯೂ 6 ರನ್ ರೋಚಕ ಗೆಲುವು ಸಾಧಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು.
ಇನ್ನೊಂದು ಗೆಲುವು ಟೀಂ ಇಂಡಿಯಾದ ಸೂಪರ್ 8 ಹಾದಿಯನ್ನು ಖಚಿತಪಡಿಸಲಿದ್ದು, ಜೂನ್ 12ರಂದು ಟೀಂ ಇಂಡಿಯಾ, ಆತಿಥೇಯ ಯುಎಸ್‌ಎ ತಂಡವನ್ನು ಎದುರಿಸಲಿದೆ. ಯುಎಸ್‌ಎ ತಂಡ ಕೂಡಾ ಸತತ ಎರಡು ಗೆಲುವು ದಾಖಲಿಸಿದೆ.
ಈಗಾಗಲೇ ಪಾಕಿಸ್ತಾನವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಯುಎಸ್‌ಎ ತಂಡಕ್ಕೆ ಭಾರತದಿಂದ ಕಠಿಣ ಪೈಪೋಟಿ ಎದುರಾಗಲಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ಹೌದು, ಟೀಂ ಇಂಡಿಯಾ ನೀಳಕಾಯದ ಬ್ಯಾಟರ್ ಶಿವಂ ದುಬೆ, ಕಳೆದೆರಡು ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದಾರೆ. ಅದರಲ್ಲೂ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಉತ್ತಮ ಇನಿಂಗ್ಸ್ ಕಟ್ಟುವ ಅವಕಾಶವನ್ನು ಕೆಟ್ಟ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದ್ದರು.
ಐಪಿಎಲ್‌ನ ಮೊದಲಾರ್ಧದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅಬ್ಬರಿಸಿದ್ದ ದುಬೆ, ದ್ವಿತಿಯಾರ್ಧದಿಂದ ಬ್ಯಾಟಿಂಗ್‌ನಲ್ಲಿ ಮಂಕಾಗಿದ್ದರು. ಇನ್ನು ಭಾರತ ಪರ ಮೊದಲೆರಡು ಪಂದ್ಯಗಳಲ್ಲಿ ದುಬೆ ಬೌಲಿಂಗ್ ಕೂಡಾ ಮಾಡಿಲ್ಲ. ಹೀಗಾಗಿ ದುಬೆಗೆ ಯುಎಸ್‌ಗೆ ಎದುರಿನ ಪಂದ್ಯಕ್ಕೆ ರೆಸ್ಟ್ ನೀಡುವ ಸಾದ್ಯತೆಯಿದೆ.
ಒಂದು ವೇಳೆ ದುಬೆ ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದರೆ, ಅವರ ಸ್ಥಾನಕ್ಕೆ ಎಂಟ್ರಿ ಕೊಡಲು ರಾಜಸ್ಥಾನ ರಾಯಲ್ಸ್ ತಂಡದ ಇಬ್ಬರು ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ನಡುವೆ ದೊಡ್ಡ ಪೈಪೋಟಿ ಇದೆ.
ಹೌದು, ಎಡಗೈ ಆರಂಭಿಕ ಸ್ಪೋಟಕ ಬ್ಯಾಟರ್ ಆಗಿರುವ ಯಶಸ್ವಿ ಜೈಸ್ವಾಲ್ ಅವರಿಗೆ ಭಾರತ ತಂಡದೊಳಗೆ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮೊದಲೆರಡು ಪಂದ್ಯದಲ್ಲಿ ಜೈಸ್ವಾಲ್‌ಗೆ ತಂಡದೊಳಗೆ ಅವಕಾಶ ಸಿಕ್ಕಿರಲಿಲ್ಲ.
ಯಾಕೆಂದರೆ ಆರಂಭಿಕನಾಗಿ ವಿರಾಟ್ ಕೊಹ್ಲಿ ಮೊದಲೆರಡು ಪಂದ್ಯಗಳಲ್ಲಿ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ಜೈಸ್ವಾಲ್ ಆರಂಭಿಕನಾಗಿ ಹಾಗೂ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲು ಟೀಂ ಮ್ಯಾನೇಜ್‌ಮೆಂಟ್ ಆಲೋಚಿಸುತ್ತಿದೆ.
ಇನ್ನು ಸಂಜು ಸ್ಯಾಮ್ಸನ್, ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದು, ಯಾವುದೇ ಕ್ರಮಾಂಕದಲ್ಲಿ, ಯಾವುದೇ ಪರಿಸ್ಥಿತಿಯಲ್ಲೂ ಜವಾಬ್ದಾರಿಯುತ ಆಟವಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ದುಬೆ ಬದಲಿಗೆ ಸಂಜುಗೆ ಮೊದಲ ಆಯ್ಕೆಯ ರೀತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನುಳಿದಂತೆ ಮೇಲ್ನೋಟಕ್ಕೆ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಕಾಣಿಸಿಕೊಂಡಿದ್ದು, ಚಹಲ್, ಕುಲ್ದೀಪ್ ಮತ್ತಷ್ಟು ಸಮಯ ಬೆಂಚ್ ಕಾಯಿಸಬೇಕಾಗುವ ಸಾಧ್ಯತೆ ಹೆಚ್ಚು.