ಭಾರತ ಎದುರು ಸೋಲಿನ ಬೆನ್ನಲ್ಲೇ ಪಾಕ್ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಗ್ಯಾರಿ ಕರ್ಸ್ಟನ್‌..!

First Published Jun 11, 2024, 3:42 PM IST

ನ್ಯೂಯಾರ್ಕ್‌: ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಪಂದ್ಯದಲ್ಲಿ 120 ರನ್ ಗುರಿ ಬೆನ್ನತ್ತಲಾಗದ ಬಾಬರ್ ಅಜಂ ಪಡೆಯ ಮೇಲೆ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್‌ ಗರಂ ಆಗಿದ್ದು, ಪಾಕ್ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಗ್ರೂಪ್ ಹಂತದಲ್ಲಿ ಸತತ ಎರಡನೇ ಸೋಲು ಕಂಡಿದೆ. ಅದರಲ್ಲೂ ಭಾರತ ಎದುರಿನ 6 ರನ್ ಅಂತರದ ರೋಚಕ ಸೋಲು ಪಾಕ್ ತಂಡದ ಸೂಪರ್ 8 ಹಾದಿಯನ್ನು ಮತ್ತಷ್ಟು ಕಠಿಣ ಗೊಳಿಸಿದೆ.

ಬಲಿಷ್ಠ ಭಾರತ ತಂಡದ ಬ್ಯಾಟರ್‌ ಎದುರು ಪಾಕಿಸ್ತಾನಿ ಬೌಲರ್‌ಗಳು ಮಾರಕ ದಾಳಿ ನಡೆಸಿ ಕೇವಲ 119 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಪಾಕ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು.

Latest Videos


ಇನ್ನು ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಗೆಲುವಿನತ್ತ ಒಂದೊಂದೆ ಹೆಜ್ಜೆಹಾಕುತ್ತಿತ್ತು. ಆದರೆ ಕೊನೆಯ 8 ಓವರ್‌ಗಳಲ್ಲಿ ಟೀಂ ಇಂಡಿಯಾ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಆರ್ಶದೀಪ್ ಸಿಂಗ್ ಹಾಗೂ ಮೊಹಮ್ಮದ್ ಸಿರಾಜ್ ಸಂಘಟಿತ ದಾಳಿ ನಡೆಸಿ ಪಾಕ್ ಕೈಯಲ್ಲಿದ್ದ ಗೆಲುವು ಕಸಿಯುವಲ್ಲಿ ಯಶಸ್ವಿಯಾದರು.

ಇದೀಗ ಭಾರತ ಎದುರು ಪಾಕಿಸ್ತಾನ ತಂಡವು ಸೋಲು ಕಾಣುತ್ತಿದ್ದಂತೆಯೇ ತಂಡದ ಹೆಡ್‌ಕೋಚ್ ಗ್ಯಾರಿ ಕರ್ಸ್ಟನ್, ತಮ್ಮ ತಂಡದ ಆಟಗಾರರ ಮೇಲೆ ಅಸಮಾಧಾನ ಹೊರಹಾಕಿದ್ದಷ್ಟೇ ಅಲ್ಲದೇ ಖಡಕ್ ವಾರ್ನಿಂಗ್ ಸಹ ನೀಡಿದ್ದಾರೆ.

"ನಮ್ಮ ಆಟಗಾರರು ಸುಖಾಸುಮ್ಮನೇ ಒತ್ತಡವನ್ನು ಮೈಮೇಲೆ ಎಳೆದುಕೊಂಡರು. ಇವರೆಲ್ಲರೂ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು. ಇವರಿಗೆಲ್ಲಾ ಒತ್ತಡದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿರಬೇಕು" ಎಂದ ಕರ್ಸ್ಟನ್ ಹೇಳಿದ್ದಾರೆ.

ತಂಡದಲ್ಲಿರುವ ಹಲವು ಆಟಗಾರರು ಈಗಾಗಲೇ ಸಾಕಷ್ಟು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಅನುಭವ ಹೊಂದಿದ್ದಾರೆ. ಸಾಕಷ್ಟು ವರ್ಷಗಳಿಂದ ತಂಡದ ಜತೆಗಿರುವ ಅವರಿಗೆ ತಂಡವನ್ನು ಗೆಲುವಿನತ್ತ ಹೇಗೆ ಕೊಂಡೊಯ್ಯಬೇಕು ಎನ್ನುವುದರ ಅರಿವಿರಬೇಕು ಎಂದು ಗ್ಯಾರಿ ಹೇಳಿದ್ದಾರೆ

Pakistan Cricket Team

"ಈ ರೀತಿಯ ತಪ್ಪು ಮಾಡುತ್ತೀರಾ ಎಂದಾದರೇ ಅದಕ್ಕೆ ನೀವು ಬೆಲೆ ತೆರಲೇಬೇಕಾಗುತ್ತದೆ. ನನ್ನ ಪ್ರಕಾರ ಪಂದ್ಯದ ಮಹತ್ವದ ಘಟ್ಟದಲ್ಲಿ ನಾವು ದೊಡ್ಡ ತಪ್ಪುಗಳನ್ನೇ ಮಾಡಿದೆವು. ರಿಜ್ವಾನ್ ಚೆನ್ನಾಗಿ ಆಡುತ್ತಾರೆ ಅಂದುಕೊಂಡಿದ್ದೆವು, ಆದರೆ ಗೆಲುವಿನ ಹೊಸ್ತಿಲಿಗೆ ಬಂದು ಎಡವಿದೆವು ಎಂದು 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಹೆಡ್‌ಕೋಚ್ ಗ್ಯಾರಿ ಕರ್ಸ್ಟನ್ ಹೇಳಿದ್ದಾರೆ.

ನಾವು ಗುರಿ ಬೆನ್ನತ್ತುವಾಗ 15 ಓವರ್ ಚೆನ್ನಾಗಿಯೇ ಆಡಿದೆವು, ಆದರೆ ಕೊನೆಯಲ್ಲಿ ಎಡವಿದೆವು. ಆಟಗಾರರು ತಮ್ಮ ಮುಂದೆ ಅವಕಾಶಗಳು ಸಿಕ್ಕಾಗ ಅದನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು ಎಂದು ಗ್ಯಾರಿ ಕರ್ಸ್ಟನ್‌ ಪಾಕ್ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.

click me!