ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಸೋಲಿನಿಂದ ಕೋಟ್ಯಾಂತರ ಹೃದಯ ಒಡೆದಿದೆ.ಮನಸ್ಸು ಭಾರವಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗರು ಕ್ರೀಡಾಂಗಣದಲ್ಲೇ ಕಣ್ಣೀರಿಟ್ಟಿದ್ದರು. ಇತ್ತ ಅಭಿಮಾನಿಗಳ ನೋವು ಹೇಳತೀರದು.
ಹಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಭಾವನೆಗಳನ್ನು, ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಸಮಾನ್ಯವಾಗಿ ವಾರದ ರಜಾದಿನ ಭಾನುವಾರ ಕಳೆದು ಸೋಮವಾರ ಕಚೇರಿಗೆ ತೆರಳುವುದು, ಶಾಲೆಗೆ ತೆರಳುವುದು ಪ್ರಯಾಸದ ಕೆಲಸ. ಇದೀಗ ಸೋಲಿನ ನೋವು ಜೊತೆ ಸೇರಿದಂತೆ ಸೋಮವಾರ ಹಲವರಿಗೆ ಭಾರವಾಗಿದೆ.
ಇನ್ನು ವಿದ್ಯಾರ್ಥಿಗಳ ಪಾಡು ಹೇಳತೀರದು. ಹೀಗೆ ವಿದ್ಯಾರ್ಥಿಯೊಬ್ಬ ಟೀಂ ಇಂಡಿಯಾ ಸೋಲಿನ ನೋವಿನಿಂದ ಹೊರಬರಲು ಒಂದು ದಿನ ರಜೆ ಕೇಳಿ ಕಾಲೇಜಿಗೆ ಬರೆದ ಲೀವ್ ಲೆಟರ್ ಭಾರಿ ವೈರಲ್ ಆಗಿದೆ.
ಭಾರವಾದ ಮನಸ್ಸಿನಿಂದ ಈ ಪತ್ರ ಬರೆಯುತ್ತಿದ್ದೇನೆ. ವಿಶ್ವಕಪ್ ಫೈನಲ್ ಸೋಲಿನಿಂದ ಜರ್ಝರಿತನಾಗಿದ್ದೇನೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾನು ನವೆಂಬರ್ 20ರ ಸೋಮವಾರದ ಎಲ್ಲಾ ತರಗತಿಗಳನ್ನು ರದ್ದು ಮಾಡಲು ಮನವಿ ಮಾಡುತ್ತಿದ್ದೇನೆ ಎಂದು ವಿದ್ಯಾರ್ಥಿ ಇ ಮೇಲ್ ಮಾಡಿದ್ದಾನೆ.
ಮಾನಸಿಕವಾಗಿ, ಭಾವನಾತ್ಮಕವಾಗಿ, ದೈಹಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸೋಲಿನ ನೋವಿನಿಂದ ಹೊರಬರಲು ಸೋಮವಾರ ರಜೆ ಘೋಷಿಸಿ ಎಂದು ವಿದ್ಯಾರ್ಥಿ ಕಾಲೇಜು ಆಡಳಿತ ಮಂಡಳಿಗೆ ಇಮೇಲ್ ಬರೆದಿದ್ದಾನೆ.
ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಇನ್ನು ಫರೀದಾಬಾದ್‌ನ DAV ಪಬ್ಲಿಕ್ ಶಾಲೆ ನವೆಂಬರ್ 17ರ ಪರೀಕ್ಷೆಯನ್ನು ವಿಶ್ವಕಪ್ ಫೈನಲ್ ಕಾರಣ ನವೆಂಬರ್ 20ಕ್ಕೆ ಮುಂದೂಡಲಾಗಿತ್ತು.
ಆದರೆ ಭಾನುವಾರ ಭಾರತ ಸೋಲು ಅನುಭವಿಸಿದ ಕಾರಣ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಾನಸಿಕವಾಗಿ ಕಷ್ಟವಾಗಲಿದೆ ಅನ್ನೋ ಕಾರಣಕ್ಕೆ ನವಂಬರ್್ 21ಕ್ಕೆ ನಡೆಸುವುದಾಗಿ ಘೋಷಿಸಿದೆ.
ಅಹಮ್ಮದಾಬಾದ್‌ನ ಕೆಲ ಶಾಲೆಗಳು ನವೆಂಬರ್ 20 ರಂದು ರಜೆ ಘೋಷಿಸಿದೆ. ಅಷ್ಟರ ಮಟ್ಟಿಗೆ ಭಾರತದ ಸೋಲು ಅಭಿಮಾನಿಗಳನ್ನು ಕಾಡುತ್ತಿದೆ. ಹಾರ್ಡ್‌ಕೋರ್ ಅಭಿಮಾನಿಗಳಿಗೆ ಆಘಾತದಿಂದ ಹೊರಬರಲು ಕನಿಷ್ಠ ಒಂದು ವಾರ ಹಿಡಿಯಬಹುದು.