ಮುಗಿಯಿತಾ ಈ ನಾಲ್ಕು ಟೀಂ ಇಂಡಿಯಾ ಸ್ಟಾರ್ ಆಟಗಾರರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು..?

First Published | Feb 29, 2024, 12:36 PM IST

ಮುಂಬೈ: ಬಹುನಿರೀಕ್ಷಿತ 2023-24ನೇ ಸಾಲಿನ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿ ಪ್ರಕಟವಾಗಿದ್ದು, ಅಚ್ಚರಿಯ ರೀತಿಯಲ್ಲಿ ನಾಲ್ವರು ಸ್ಟಾರ್ ಆಟಗಾರರನ್ನು ಬಿಸಿಸಿಐ ಕೈಬಿಟ್ಟಿದೆ. ಈ ಮೂಲಕ ಈ ನಾಲ್ವರ ಕ್ರಿಕೆಟಿಗರ ಅಂತಾರಾಷ್ಟ್ರೀಯ ವೃತ್ತಿಬದುಕು ಅಂತ್ಯವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಈ ಕುರಿತಾದ ಇಂಟ್ರೆಸ್ಟಿಂಗ್ ರಿಪೋರ್ಟ್ ಇಲ್ಲಿದೆ ನೋಡಿ.
 

ಫೆಬ್ರವರಿ 28ರ ಬುಧವಾರ ಬಿಸಿಸಿಐ 30 ಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದೆ. ಈ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಅಕ್ಟೋಬರ್ 01, 2023ರಿಂದ ಸೆಪ್ಟೆಂಬರ್ 10, 2024ರ ಅವಧಿಯವರೆಗೆ ಇರಲಿದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ A+ ಶ್ರೇಣಿ ಪಡೆದುಕೊಂಡಿದ್ದು, ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆದುಕೊಳ್ಳಲಿದ್ದಾರೆ.

Latest Videos


ಇನ್ನು A ದರ್ಜೆಯಲ್ಲಿ ಕೆ ಎಲ್ ರಾಹುಲ್, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ಸ್ಥಾನ ಉಳಿಸಿಕೊಂಡಿದ್ದು, ಇದರ ಜತೆಗೆ ಶುಭ್‌ಮನ್ ಗಿಲ್ ಮುಂಬಡ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.(ವಾರ್ಷಿಕ 5 ಕೋಟಿ)

ಇನ್ನು ಕಳೆದ ಬಾರಿ A ಗ್ರೇಡ್‌ನಲ್ಲಿದ್ದ ರಿಷಭ್ ಪಂತ್, ಕುಲ್ದೀಪ್ ಯಾದವ್ ಇದೀಗ B ಗ್ರೇಡ್‌ಗೆ ಜಾರಿದ್ದಾರೆ. ಬಿ ಗ್ರೇಡ್‌ನಲ್ಲಿ 11 ಆಟಗಾರರು ಸ್ಥಾನ ಪಡೆದಿದ್ದು, ಯಶಸ್ವಿ ಜೈಸ್ವಾಲ್ 'ಬಿ' ಗ್ರೇಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.(ವಾರ್ಷಿಕ 3 ಕೋಟಿ)

ಇನ್ನು ಸಿ ಗ್ರೇಡ್‌ನಲ್ಲಿ ಸಂಜು ಸ್ಯಾಮ್ಸನ್, ರಜತ್ ಪಾಟೀದಾರ್, ರಿಂಕು ಸಿಂಗ್ ಹೀಗೆ 15 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಆಟಗಾರರೆಲ್ಲಾ ವಾರ್ಷಿಕ ಒಂದು ಕೋಟಿ ರುಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ.

ಇನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚನೆಗೂ ಬೆಲೆ ಕೊಡದೆ ರಣಜಿ ಪಂದ್ಯದಲ್ಲಿ ಆಡದ್ದಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ ಹಾಗೂ ಶ್ರೇಯಸ್ ಅಯ್ಯರ್‌ಗೆ ಬೆಲೆ ತೆರುವ ಕಾಲ ಬಂದಿದೆ.

ಇದೀಗ ಟೀಂ ಇಂಡಿಯಾದ ಈ ಇಬ್ಬರು ಸ್ಟಾರ್ ಆಟಗಾರರನ್ನು 2023-24ನೇ ಸಾಲಿನ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದು, ಈ ಇಬ್ಬರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ಗೆ ಪರಿಗಣಿಸಿಲ್ಲ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.

Shreyas Iyer

ಕಳೆದ ಅಕ್ಟೋಬರ್‌ನಿಂದ ಶ್ರೇಯಸ್ ಅಯ್ಯರ್ 4 ಟೆಸ್ಟ್, 12 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದರೂ ಸಹಾ ಅವರನ್ನು ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಡಲಾಗಿದೆ. ಅಯ್ಯರ್ ಇಂಗ್ಲೆಂಡ್ ಎದುರು ಮೊದಲೆರಡು ಟೆಸ್ಟ್ ಪಂದ್ಯಗಳನ್ನಾಡಿದ್ದರು.

ಇದಾದ ಬಳಿಕ ಬೆನ್ನು ನೋವಿನ ಸಮಸ್ಯೆಯಿಂದಾಗಿ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದಾದ ಬಳಿಕ ಅವರು ಕ್ರಿಕೆಟ್ ಆಡಲು ಫಿಟ್ ಇದ್ದಾರೆ ಎಂದು ಎನ್‌ಸಿಎ ಫಿಸಿಯೋ ವರದಿ ನೀಡಿದ್ದರೂ ಬೆನ್ನು ನೋವಿನ ನೆಪ ಹೇಳಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್‌ನಿಂದ ಹೊರಗುಳಿದಿದ್ದರು.

ಇನ್ನು ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಕೂಡಾ ಕಳೆದ ಅಕ್ಟೋಬರ್‌ನಿಂದ ಟೀಂ ಇಂಡಿಯಾ ಪರ ಕೇವಲ 2 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಷ್ಟೇ ಆಡಿದ್ದರು.

ದಾದ ಬಳಿಕ ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್ ರಣಜಿ ಆಡಲು ಸೂಚನೆ ನೀಡಿದ್ದರೂ ಅದನ್ನು ಕಿಶನ್ ನಿರಾಕರಿಸಿದ್ದರು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದು ಬಿಸಿಸಿಐ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದಷ್ಟೇ ಅಲ್ಲದೇ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ಚೇತೇಶ್ವರ್ ಪೂಜಾರ ಹಾಗೂ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಕೂಡಾ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಹೊರಬಿದ್ದಿದ್ದು, ಈ ನಾಲ್ವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

click me!