ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್, ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.
ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಆಯ್ಕೆ ಮಾಡಿದ ರಜತ್ ಪಾಟೀದಾರ್
ಸತತ 17 ಸೀಸನ್‌ನಿಂದಲೂ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟೀದಾರ್ ನಾಯಕರಾಗುತ್ತಿದ್ದಂತೆಯೇ ಸತತ ಎರಡು ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇದೆಲ್ಲದರ ನಡುವೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ 11 ಆಟಗಾರರನ್ನೊಳಗೊಂಡ ಬಲಿಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಪಾಟೀದಾರ್ ಆಯ್ಕೆ ಮಾಡಿದ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.
26
ಆರಂಭಿಕರಾಗಿ ಗೇಲ್-ಕೊಹ್ಲಿ
ರಜತ್ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡದಲ್ಲಿ ಆರಂಭಿಕರನ್ನಾಗಿ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಕೊಹ್ಲಿ ಆರ್‌ಸಿಬಿಯ ರನ್ ಮಷೀನ್ ಆಗಿ ಗುರುತಿಸಿಕೊಂಡಿದ್ದು, ಟೂರ್ನಿಯ ಇತಿಹಾಸದಲ್ಲೇ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದಾರೆ. ಇನ್ನು ಯೂನಿವರ್ಸಲ್ ಬಾಸ್ ಖ್ಯಾತಿಯ ಗೇಲ್ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಏಕಾಂಗಿಯಾಗಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂದಿಗೂ ಐಪಿಎಲ್‌ನ ವೈಯುಕ್ತಿಕ ಗರಿಷ್ಠ ಸ್ಕೋರ್ ಗೇಲ್ ಹೆಸರಿನಲ್ಲಿದೆ.
36
ಸಾಕಷ್ಟು ಬಲಿಷ್ಠವಾಗಿದೆ ಮಧ್ಯಮ ಕ್ರಮಾಂಕ:
ಪಾಟೀದಾರ್ ಮಧ್ಯಮ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್‌ಗೆ ಮೂರನೇ ಸ್ಥಾನ ನೀಡಿದ್ದರೇ, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾಗೆ ನಾಲ್ಕನೇ ಹಾಗೂ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರಿಗೆ ಐದನೇ ಸ್ಥಾನ ನೀಡಿದ್ದಾರೆ. ಈ ಮೂವರು ಬ್ಯಾಟರ್‌ಗಳು ದಶಕಗಳ ಕಾಲ ಐಪಿಎಲ್ ಆಳಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಇನ್ನು ಆಲ್ರೌಂಡರ್ ಹಾಗೂ ಮ್ಯಾಚ್ ಫಿನಿಶರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದರೇ, ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಜತ್ ಪಾಟೀದಾರ್ ಆಯ್ಕೆ ಮಾಡಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಏಳು ಬಲಿಷ್ಠ ಬ್ಯಾಟರ್‌ಗಳನ್ನೊಳಗೊಂಡ ತಂಡವನ್ನು ಆರ್‌ಸಿಬಿ ನಾಯಕ ಆಯ್ಕೆ ಮಾಡಿದ್ದಾರೆ.
56
2 ವೇಗಿಗಳು, ಎರಡು ಸ್ಪಿನ್ನರ್‌ಗಳನ್ನೊಳಗೊಂಡ ಬೌಲಿಂಗ್ ಪಡೆ:
ಇನ್ನುಳಿದಂತೆ ಆರ್‌ಸಿಬಿ ಮಾಜಿ ವೇಗಿ ಡೇಲ್ ಸ್ಟೇನ್ ಹಾಗೂ ಮುಂಬೈ ಇಂಡಿಯನ್ಸ್ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ತಜ್ಞ ವೇಗಿಗಳ ರೂಪದಲ್ಲಿ ಸ್ಥಾನ ಪಡೆದುಕೊಂಡರೆ, ಆರ್‌ಸಿಬಿ ಮಾಜಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಕೆಕೆಆರ್ ಮಾಂತ್ರಿಕ ಸ್ಪಿನ್ನರ್ ಸುನಿಲ್ ನರೇನ್ ಕೂಡಾ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
66
ರಜತ್ ಪಾಟೀದಾರ್ ಆಯ್ಕೆ ಮಾಡಿದ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡ ಹೀಗಿದೆ:
ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂ ಎಸ್ ಧೋನಿ(ವಿಕೆಟ್ ಕೀಪರ್), ಸುನಿಲ್ ನರೈನ್, ಡೇಲ್ ಸ್ಟೇನ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.