ವಿಶ್ವಕಪ್‌ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ ಹೊಸ ಅಸ್ತ್ರ ಸೇರ್ಪಡೆ..! BCCI ಮಾಸ್ಟರ್ ಪ್ಲಾನ್‌ಗೆ ಆಸೀಸ್ ಪಾಳಯದಲ್ಲಿ ನಡುಕ

First Published Sep 19, 2023, 9:25 AM IST

ಬೆಂಗಳೂರು: ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಟೀಂ ಇಂಡಿಯಾ, ವಿಶ್ವಕಪ್ ಟೂರ್ನಿಗೆ ಕೊನೆಯ ಹಂತದ ಕಸರತ್ತು ಆರಂಭಿಸಿದೆ. ಇದರ ಭಾಗವಾಗಿ ಭಾರತ ತಂಡಕ್ಕೆ ಕೊನೆಯ ಕ್ಷಣದಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದು ಆಸ್ಟ್ರೇಲಿಯಾ ಪಾಳಯದಲ್ಲಿ ನಡುಕು ಹುಟ್ಟಿಸಿದೆ. ಅಷ್ಟಕ್ಕೂ ಯಾವುದದು ಅಸ್ತ್ರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 16ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾವನ್ನು 10 ವಿಕೆಟ್‌ಗಳಿಂದ ಅನಾಯಾಸವಾಗಿ ಮಣಿಸಿ ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
 

ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿದ್ದ ಟೀಂ ಇಂಡಿಯಾ, ಫೈನಲ್‌ನಲ್ಲಿ ಅಮೋಘ ಪ್ರದರ್ಶನ ತೋರಿತು. ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಲಂಕಾ ಬಳಿ ಉತ್ತರವೇ ಇರಲಿಲ್ಲ.
 

ಏಷ್ಯಾಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ, ತವರಿನಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಕೊನೆಯ ಹಂತದಲ್ಲಿ ಆಸ್ಟ್ರೇಲಿಯಾ ಎದುರು ಮೂರು ಪಂದ್ಯಗಳನ್ನಾಡಲು ಸಜ್ಜಾಗಿದೆ.

ಹೌದು, ಇದೇ ಸೆಪ್ಟೆಂಬರ್ 22, 24 ಹಾಗೂ 27ರಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿವೆ. ಈ ಸರಣಿಗೆ ಇದೀಗ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ.

ಮೊದಲೆರಡು ಏಕದಿನ ಪಂದ್ಯಗಳಿಗೆ ಕೆ ಎಲ್ ರಾಹುಲ್‌ಗೆ ನಾಯಕ ಪಟ್ಟ ಕಟ್ಟಲಾಗಿದ್ದು, ರವೀಂದ್ರ ಜಡೇಜಾ ಉಪನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಕೊನೆಯ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲೆರಡು ಪಂದ್ಯಗಳಿಗೆ ಹಾಲಿ ನಾಯಕ ರೋಹಿತ್ ಶರ್ಮಾ, ರನ್ ಮಷೀನ್ ವಿರಾಟ್ ಕೊಹ್ಲಿ, ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಮಾಂತ್ರಿಕ ಸ್ಪಿನ್ನರ್ ಕುಲ್ದೀಪ್‌ ಯಾದವ್‌ಗೆ ವಿಶ್ರಾಂತಿ ನೀಡಲಾಗಿದ್ದು, ಕೆಲ ಯುವ ಆಟಗಾರರಿಗೆ ಮಣೆಹಾಕಲಾಗಿದೆ.
 

ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಇಲ್ಲಿಯವರೆಗೆ ಏಕದಿನ ಸರಣಿಯಿಂದ ಹೊರಗುಳಿದಿದ್ದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್‌ಗೆ ಮೂರು ಪಂದ್ಯಗಳಿಗೂ ತಂಡದಲ್ಲಿ ಸ್ಥಾನ ನೀಡಿರುವುದು ಬಿಸಿಸಿಐ ಮಾಸ್ಟರ್ ಪ್ಲಾನ್ ಎನಿಸಿಕೊಂಡಿದೆ.
 

ಅದರಲ್ಲೂ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಲೇ ಬಂದಿದ್ದಾರೆ. ಇತ್ತೀಚೆಗೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಅಶ್ವಿನ್ ಆಲ್ರೌಂಡ್ ಆಟದ ಮೂಲಕ ಜಡೇಜಾ ಜತೆ ಜಂಟಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

ಭಾರತದ ಪಿಚ್‌ನಲ್ಲಿ ತಾವೆಷ್ಟು ಅಪಾಯಕಾರಿ ಸ್ಪಿನ್ ಬೌಲರ್ ಎನ್ನುವುದನ್ನು ರವಿಚಂದ್ರನ್ ಅಶ್ವಿನ್ ಈಗಾಗಲೇ ಸಾಬೀತು ಮಾಡಿ ತೋರಿಸಿದ್ದಾರೆ. ಇದರ ಜತೆಗೆ ಬ್ಯಾಟಿಂಗ್‌ನಲ್ಲೂ ಕೆಳ ಕ್ರಮಾಂಕದಲ್ಲಿ ಅಶ್ವಿನ್ ಉಪಯುಕ್ತ ರನ್ ಕಾಣಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
 

ಹೀಗಾಗಿ ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ರವಿಚಂದ್ರನ್ ಅಶ್ವಿನ್, ಎದುರಾಳಿ ಪಡೆಗಳಿಗೆ ಅಪಾಯಕಾರಿ ಬೌಲರ್ ಎನಿಸುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಅಶ್ವಿನ್ ಅವರನ್ನು ಏಕದಿನ ವಿಶ್ವಕಪ್ ಟೂರ್ನಿಯ 15ರ ಬಳಗದಲ್ಲಿ ಕಣಕ್ಕಿಳಿಸುವ ಉದ್ದೇಶದಿಂದಲೇ ಆಸೀಸ್ ಎದುರಿನ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಒಂದು ವೇಳೆ ರವಿಚಂದ್ರನ್ ಅಶ್ವಿನ್, ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದೇ ಆದಲ್ಲಿ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಏಷ್ಯಾಕಪ್ ಟೂರ್ನಿಯ ವೇಳೆ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ರವಿಚಂದ್ರನ್ ಅಶ್ವಿನ್ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಮಿಂಚುತ್ತಾರಾ? ಬಿಸಿಸಿಐ ಮಾಸ್ಟರ್ ಪ್ಲಾನ್ ಕೈಹಿಡಿಯುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

click me!