9 ಟೀಂ ಇಂಡಿಯಾ ಪ್ರತಿಭಾನ್ವಿತ ಕ್ರಿಕೆಟಿಗರು ಬಂದಷ್ಟೇ ಬೇಗ ಮರೆಯಾಗಿದ್ದು ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

First Published Feb 1, 2024, 5:39 PM IST

ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಧರ್ಮದಂತೆ ಆರಾಧಿಸುವ ವರ್ಗವೇ ಇದೆ. ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎನ್ನುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸಾಗಿರುತ್ತದೆ. ಹಲವು ಪ್ರತಿಭಾನ್ವಿತ ಕ್ರಿಕೆಟಿಗರು ಆರಂಭದಲ್ಲೇ ಸಿಕ್ಕ ಯಶಸ್ಸು ಸರಿಯಾಗಿ ಮ್ಯಾನೇಜ್ ಮಾಡದೇ ಬಂದಷ್ಟೇ ವೇಗದಲ್ಲಿ ಮರೆಯಾಗಿ ಹೋಗಿದ್ದಾರೆ. ನಾವಿಂದು ಅಂತಹ 10 ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
 

1. ಪ್ರವೀಣ್ ಆಮ್ರೆ:

ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಪಂದ್ಯದಲ್ಲೇ ಟೆಸ್ಟ್ ಶತಕ ಸಿಡಿಸಿದ ಬ್ಯಾಟರ್ ಪ್ರವೀಣ್ ಆಮ್ರೆ, ಭಾರತ ಟೆಸ್ಟ್ ತಂಡದಲ್ಲಿ ನೆಲೆನಿಲ್ಲಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಆಮ್ರೆ ಕೇವಲ 425 ರನ್ ಬಾರಿಸಿದ್ದಷ್ಟೇ ಆಮೇಲೆ ಪ್ರವೀಣ್ ಆಮ್ರೆ ಟೀಂ ಇಂಡಿಯಾದಲ್ಲಿ ನೆಲೆನಿಲ್ಲಲು ಸಾಧ್ಯವಾಗಲೇ ಇಲ್ಲ.
 

2. ಉನ್ಮುಕ್ತ್ ಚಾಂದ್:

ಭಾರತಕ್ಕೆ ಅಂಡರ್ 19 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಉನ್ಮುಕ್ತ್ ಚಾಂದ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಕೊಹ್ಲಿಯಂತೆ ಚಾಂದ್ ಕೂಡಾ ಟೀಂ ಇಂಡಿಯಾದಲ್ಲಿ ನೆಲೆ ನಿಲ್ಲಬಹುದು ಎಂದೇ ಊಹಿಸಲಾಗಿತ್ತು. ಆದರೆ ಆ ನಿರೀಕ್ಷೆ ಹುಸಿಯಾಯಿತು.
 

3. ಮಣೀಂದರ್ ಸಿಂಗ್:

ಸ್ಪಿನ್ ದಂತಕಥೆ ಬಿಷನ್ ಸಿಂಗ್ ಬೇಡಿಯ ಉತ್ತರಾಧಿಕಾರಿ ಎನ್ನುವಂತೆ ಬಿಂಬಿತವಾಗಿದ್ದ ಸ್ಪಿನ್ನರ್ ಮಣೀಂದರ್ ಸಿಂಗ್ ಟೀಂ ಇಂಡಿಯಾ ಪರ ನಿರೀಕ್ಷೆಯ ಭಾರ ಹೊರಲು ವಿಫಲರಾದರು. ಮಣೀಂದರ್ ಭಾರತ ಪರ 35 ಟೆಸ್ಟ್ ಹಾಗೂ 59 ಏಕದಿನ ಪಂದ್ಯಗಳನ್ನಷ್ಟೇ ಆಡಲು ಸಫಲರಾದರು.

4. ಅಮಿತ್ ಮಿಶ್ರಾ:

ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆಯ ಉತ್ತರಾಧಿಕಾರಿಯಾಗುವ ರೀತಿಯ ಪ್ರದರ್ಶನವನ್ನು ಆರಂಭಿಕ ಪಂದ್ಯಗಳಲ್ಲಿ ತೋರಿದ್ದರು. ಆದರೆ ಅಮಿತ್ ಮಿಶ್ರಾ ಟೀಂ ಇಂಡಿಯಾ ಪರ 22 ಟೆಸ್ಟ್, 36 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಷ್ಟೇ ಆಡಲು ಶಕ್ತರಾದರು.
 

5. ರಾಬಿನ್ ಉತ್ತಪ್ಪ:

ಕೊಡಗಿನ ಕುವರ ರಾಬಿನ್ ಉತ್ತಪ್ಪ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚಿದ್ದರು. 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಉತ್ತಪ್ಪ ಆರಂಭದಲ್ಲಿ ಸಿಕ್ಕ ಯಶಸ್ಸನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಉತ್ತಪ್ಪ 46 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನಷ್ಟೇ ಆಡಲು ಶಕ್ತರಾದರು.
 

6. ಪೃಥ್ವಿ ಶಾ:

ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದ ಮುಂಬೈ ಮೂಲದ ಪ್ರತಿಭಾನ್ವಿತ ಬ್ಯಾಟರ್ ಪೃಥ್ವಿ ಶಾ, ಭಾರತದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದರು. ಫಿಟ್ನೆಸ್ ಸಮಸ್ಯೆ ಹಾಗೂ ವೈಯುಕ್ತಿಕ ಕಾರಣಗಳಿಂದ ಟೀಂ ಇಂಡಿಯಾಗೆ ಬಂದಷ್ಟೇ ವೇಗದಲ್ಲೇ ತಂಡದಿಂದ ಹೊರಬಿದ್ದಿದ್ದಾರೆ.
 

7. ಲಕ್ಷ್ಮಣ್ ಶಿವರಾಮಕೃಷ್ಣನ್:

ಕೇವಲ 17ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಎಲ್ ಶಿವರಾಮಕೃಷ್ಣನ್ ಅವರನ್ನು ಕಂಡ ಕ್ರಿಕೆಟ್ ಪಂಡಿತರು ಈತ ಅದ್ಭುತ ಪ್ರತಿಭೆ ಎಂದು ಷರಾ ಬರೆದುಬಿಟ್ಟಿದ್ದರು. ಆದರೆ ಶಿವರಾಮಕೃಷ್ಣನ್ ಅಸ್ಥಿರ ಪ್ರದರ್ಶನದಿಂದಾಗಿ ತಮ್ಮ 22ನೇ ವಯಸ್ಸಿಗೆ ಟೀಂ ಇಂಡಿಯಾದಿಂದ ಹೊರಬಿದ್ದರು.
 

8. ಮನೋಜ್ ಪ್ರಭಾಕರ್:

ಭಾರತದ ಮತ್ತೊಬ್ಬ ಕಪಿಲ್ ದೇವ್ ಎಂದೇ ಕರೆಸಿಕೊಂಡಿದ್ದ ಮನೋಜ್ ಪ್ರಭಾಕರ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕವೇ ಹೆಚ್ಚು ಗಮನ ಸೆಳೆದಿದ್ದರು. ಆದರೆ ಮ್ಯಾಚ್‌ ಫಿಕ್ಸಿಂಗ್ ಆರೋಪ ಮನೋಜ್ ಕ್ರಿಕೆಟ್ ಬದುಕಿಗೆ ಬಲವಾದ ಪೆಟ್ಟು ನೀಡಿತು.
 

9. ವಿನೋದ್ ಕಾಂಬ್ಳಿ:

ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಸಹಪಾಠಿಯಾಗಿದ್ದ ವಿನೋದ್ ಕಾಂಬ್ಳಿ ಅಸಾಧಾರಣ ಪ್ರತಿಭಾನ್ವಿತ ಕ್ರಿಕೆಟಿಗ ಎನಿಸಿಕೊಂಡಿದ್ದರು. ಆದರೆ ಆರಂಭದಲ್ಲೇ ಸಿಕ್ಕ ಯಶಸ್ಸನ್ನು ಮ್ಯಾನೇಜ್‌ ಮಾಡಲು ಸೋತ ಕಾಂಬ್ಳಿ ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ವೇಗದಲ್ಲೇ ಮರೆಯಾಗಿ ಹೋದರು.
 

click me!