ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕೆಲವೇ ದಿನಗಳಿರುವಾಗ ದಿಢೀರ್ ಎನ್ನುವಂತೆ ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿಯುವ ತೀರ್ಮಾನ ತೆಗೆದುಕೊಂಡಿದ್ದರು.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1ರ ಹಿನ್ನೆಡೆಯಲಿದ್ದಾರೆ.
ಇಂಗ್ಲೆಂಡ್ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ವಿರಾಟ್ ಕೊಹ್ಲಿ ದಿಢೀರ್ ಎನ್ನುವಂತೆ ಮೊದಲೆರಡು ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದೇಕೆ ಎನ್ನುವ ಪ್ರಶ್ನೆಗೆ ತಕ್ಷಣಕ್ಕೆ ಉತ್ತರ ಸಿಕ್ಕಿರಲಿಲ್ಲ.
ವಿರಾಟ್ ಕೊಹ್ಲಿ ತಾಯಿ ಸರೋಜಾ ಕೊಹ್ಲಿ ಕುರಿತಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಆ ಪೋಸ್ಟ್ ಪ್ರಕಾರ ಸರೋಜಾ ಕೊಹ್ಲಿಯವರ ಆರೋಗ್ಯದಲ್ಲಿ ಏರುಪೇರು ಆಗಿದೆ ಎನ್ನಲಾಗುತ್ತಿದೆ.
ಆದರೆ ಈ ಕುರಿತಂತೆ ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ತಮ್ಮ ತಾಯಿಯ ಆರೋಗ್ಯದ ಕುರಿತಾಗಿ ವೈರಲ್ ಆಗುತ್ತಿರುವ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.
ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ನಾನು ನನ್ನ ಅಮ್ಮನ ಆರೋಗ್ಯದ ಕುರಿತಾಗಿ ಹರಿದಾಡುತ್ತಿರುವ ಪೋಸ್ಟ್‌ಗಳನ್ನು ಗಮನಿಸಿದ್ದೇನೆ. ಅದು ನಿಜವಲ್ಲ.
ಈ ಕುರಿತಾಗಿ ನಾನು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ. ನನ್ನಮ್ಮ ಆರೋಗ್ಯವಾಗಿದ್ದಾರೆ. ನಾನು ಮಾಧ್ಯಮಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ, ದಯವಿಟ್ಟು ಸ್ಪಷ್ಟ ಮಾಹಿತಿಯಿಲ್ಲದೇ ಏನೇನೋ ಪ್ರಕಟಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ, ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ವೈಯುಕ್ತಿಕ ಕಾರಣದಿಂದ ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.