ರೋಹಿತ್ ಶರ್ಮಾ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರೆ ಟೀಂ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರು?

First Published Nov 27, 2023, 12:16 PM IST

ಬೆಂಗಳೂರು: ದಶಕದ ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿ ಜಯಿಸಲಿದೆ ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ತವರಿನಲ್ಲೇ ಇತ್ತೀಚೆಗಷ್ಟೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 6 ವಿಕೆಟ್ ಸೋಲು ಅನುಭವಿಸಿದೆ.  ಮೂಲಕ ವಿಶ್ವಕಪ್ ಗೆಲ್ಲುವ ಕನಸು ನುಚ್ಚುನೂರಾಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮುಂದಿನ ನಾಯಕ ಯಾರು ಎನ್ನುವ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡತೊಡಗಿದೆ. ಇಲ್ಲಿದೆ ನೋಡಿ ಟೀಂ ಇಂಡಿಯಾ ಭವಿಷ್ಯದ ನಾಯಕ ಪ್ರಶ್ನೆಗೆ ಮೂರು ಆಯ್ಕೆಗಳು.
 

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತವರಿನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆದರೆ ಫೈನಲ್‌ನಲ್ಲಿ ಆಸೀಸ್‌ಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿದೆ.
 

ಇನ್ನು ಮುಂದಿನ ಏಕದಿನ ವಿಶ್ವಕಪ್ ಟೂರ್ನಿಗೆ ತಂಡ ಕಟ್ಟಲು ಈಗಿನಿಂದಲೇ ಸಿದ್ದತೆ ನಡೆಸಬೇಕಿದೆ. ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಆಗ ರೋಹಿತ್ ಶರ್ಮಾ ವಯಸ್ಸು 40 ವರ್ಷಗಳಾಗಿರಲಿದೆ.

Latest Videos


ಹೀಗಾಗಿ ಮುಂದಿನ ವಿಶ್ವಕಪ್ ವರೆಗೂ ರೋಹಿತ್ ಶರ್ಮಾ ಕ್ರಿಕೆಟ್ ಆಡುವುದು ಅನುಮಾನ ಎನಿಸಿದೆ. ಹೀಗಾಗಿ ಒಂದುವೇಳೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೆ, ಭಾರತದ ನಾಯಕರಾಗುವುದು ಯಾರು ಎನ್ನುವ ಪ್ರಶ್ನೆಗೆ ಇಲ್ಲಿವೆ ನೋಡಿ ಮೂರು ಆಯ್ಕೆಗಳು.
 

1. ಕೆ ಎಲ್ ರಾಹುಲ್:

ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ ಸ್ಥಾನ ತುಂಬಬಲ್ಲ ನೆಚ್ಚಿನ ಆಟಗಾರರಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ಮೊದಲ ಸ್ಥಾನದಲ್ಲಿ ಮುನ್ನುಗ್ಗುತ್ತಿದ್ದಾರೆ. ರಾಹುಲ್ ಈಗಾಗಲೇ ಹಂಗಾಮಿಯಾಗಿ ಮೂರು ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
 

ಈಗಾಗಲೇ ಐಪಿಎಲ್‌ನಲ್ಲಿಯೂ ನಾಯಕರಾಗಿ ಮುಂದುವರೆಯುತ್ತಿರುವ ರಾಹುಲ್, ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಬಿದ್ದಾಗ ಕೆ ಎಲ್ ರಾಹುಲ್ ಭಾರತ ತಂಡದ ಉಪನಾಯಕರಾಗಿ ನೇಮಕವಾಗಿದ್ದರು.

2. ಹಾರ್ದಿಕ್ ಪಾಂಡ್ಯ:

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಭಾರತ ಏಕದಿನ ತಂಡದ ನಾಯಕರಾಗುವ ನಿಟ್ಟಿನಲ್ಲಿ ರಾಹುಲ್‌ಗೆ ಪ್ರಬಲ ಸ್ಪರ್ಧಿಯಾಗುವ ಸಾಧ್ಯತೆಯಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಂಡ್ಯ, ಟೀಂ ಇಂಡಿಯಾ ಉಪನಾಯಕರಾಗಿ ಸೈ ಎನಿಸಿಕೊಂಡಿದ್ದರು.
 

ಐಪಿಎಲ್‌ನಲ್ಲಿ ಮೊದಲ ಪ್ರಯತ್ನದಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ನಾಯಕ ಪಟ್ಟಕ್ಕೇರಿಸಿದ್ದ ಪಾಂಡ್ಯ, ಟೀಂ ಇಂಡಿಯಾದ ಭವಿಷ್ಯದ ಸೀಮಿತ ಓವರ್‌ಗಳ ತಂಡದ ನಾಯಕ ಎಂದೇ ಬಿಂಬಿಸಲಾಗುತ್ತಿದೆ. ರೋಹಿತ್ ಸ್ಥಾನಕ್ಕೆ ಪಾಂಡ್ಯ ಬಂದರೂ ಅಚ್ಚರಿಯೇನಿಲ್ಲ.
 

3. ಶುಭ್‌ಮನ್ ಗಿಲ್‌:

ಟೀಂ ಇಂಡಿಯಾದ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಹೆಸರು ನೋಡಿದ ತಕ್ಷಣ ನಿಮಗೂ ಅಚ್ಚರಿಯಾಗಬಹುದು. ಆದರೆ ಗಿಲ್ ಈಗಾಗಲೇ ಮೂರು ಮಾದರಿಯ ಕ್ರಿಕೆಟ್‌ ತಂಡದಲ್ಲೂ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದು, ಇದೀಗ ಏಕದಿನ ನಾಯಕ ಸ್ಥಾನದ ಮೇಲೆ ಕೂಡಾ ಕಣ್ಣಿಟ್ಟಿದ್ದಾರೆ.
 

ಭಾರತ 'ಎ' ತಂಡವನ್ನು ನಾಯಕನಾಗಿ ಮುನ್ನಡೆಸಿದ ಅನುಭವವಿರುವ ಗಿಲ್, ಮುಂದಿನ ನಾಲ್ಕು ವರ್ಷದಲ್ಲಿ ಬರುವ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಿದರು ಅಚ್ಚರಿಯಿಲ್ಲ.

click me!