ಅಯ್ಯರ್, ಕಿಶನ್ ಮಾತ್ರವಲ್ಲ; ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರಿವರು..!

First Published | Feb 29, 2024, 4:44 PM IST

ಬೆಂಗಳೂರು: 2023-24ನೇ ಸಾಲಿನ ಬಿಸಿಸಿಐ ಕೇಂದ್ರ ಗುತ್ತಿಗೆ ಪ್ರಕಟಗೊಂಡಿದ್ದು, 30 ಆಟಗಾರರು ಕೇಂದ್ರ ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಕೆಲವು ಪ್ರಮುಖ ಆಟಗಾರರು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆಯಲು ವಿಫಲವಾಗಿದ್ದಾರೆ. ನಾವಿಂದು ಯಾವೆಲ್ಲಾ ಆಟಗಾರರು ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆಯಲು ವಿಫಲವಾಗಿದ್ದಾರೆ ಎನ್ನುವುದನ್ನು ನೋಡೋಣ ಬನ್ನಿ.
 

1. ಇಶಾನ್ ಕಿಶನ್:

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ 2023ರ ಡಿಸೆಂಬರ್‌ನಿಂದೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಇದೀಗ ಬಿಸಿಸಿಐ ಕಿಶನ್‌ರನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಟ್ಟಿದೆ.
 

2. ಶ್ರೇಯಸ್ ಅಯ್ಯರ್:

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್‌ ಅಯ್ಯರ್ ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಕೊನೆಯ 3 ಟೆಸ್ಟ್‌ ಪಂದ್ಯಗಳಿಂದ ಕೈಬಿಡಲಾಗಿತ್ತು. ಇದೀಗ ಬಿಸಿಸಿಐ ಕೇಂದ್ರ ಗುತ್ತಿಗೆಯಿಂದಲೂ ಕೈಬಿಡಲಾಗಿದೆ.

Latest Videos


ಬಿಸಿಸಿಐ ಈ ಮೊದಲು ಈ ಇಬ್ಬರು ಆಟಗಾರರಿಗೂ, ರಾಷ್ಟ್ರೀಯ ತಂಡದಲ್ಲಿ ಆಡದೇ ಇದ್ದಾಗ ಡೊಮೆಸ್ಟಿಕ್ ಕ್ರಿಕೆಟ್ ಟೂರ್ನಿಯಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಿ ಎನ್ನುವ ಸಲಹೆ ನೀಡಿತ್ತು. ಆದರೆ ಬಿಸಿಸಿಐ ಸಲಹೆಗೆ ಈ ಇಬ್ಬರೂ ಆಟಗಾರರು ಸೊಪ್ಪು ಹಾಕಿರಲಿಲ್ಲ.

ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಸಲಹೆಯನ್ನೂ ತಿರಸ್ಕರಿಸಿದ್ದಕ್ಕೆ ಇದೀಗ ಈ ಇಬ್ಬರು ಆಟಗಾರರಿಗೆ ಬೆಲೆ ತೆರುವ ಕಾಲ ಬಂದಿದೆ. ಈ ಇಬ್ಬರು ಆಟಗಾರರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದಲೇ ಇಬ್ಬರನ್ನೂ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಡಲಾಗಿದೆ.

3. ಚೇತೇಶ್ವರ್ ಪೂಜಾರ:

ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್ ಪೂಜಾರ, ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಸಿಸಿಐ ಸೌರಾಷ್ಟ್ರ ಮೂಲದ ಆಟಗಾರನಿಗೆ ಶಾಕ್ ನೀಡಿದ್ದು, ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ ಕೈಬಿಟ್ಟಿದೆ.
 

4. ಶಿಖರ್ ಧವನ್:

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಕಳೆದ ಡಿಸೆಂಬರ್ 2022ರಿಂದಲೂ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಧವನ್ ಅವರನ್ನು ಬಿಸಿಸಿಐ ಕೇಂದ್ರ ಗುತ್ತಿಗೆಗೆ ಪರಿಗಣಿಸದೇ ಇರುವುದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
 

5. ಯುಜುವೇಂದ್ರ ಚಹಲ್:

ಟೀಂ ಇಂಡಿಯಾ ಸ್ಟಾರ್ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ಮತ್ತೊಮ್ಮೆ ನಿರಾಸೆ ಎದುರಾಗಿದೆ. 2023ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದ ಚಹಲ್, ಇದೀಗ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲೂ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
 

6. ಉಮೇಶ್ ಯಾದವ್:

ಟೀಂ ಇಂಡಿಯಾ ಪ್ರಮುಖ ವೇಗಿ ಉಮೇಶ್ ಯಾದವ್ ಕೂಡಾ ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಡೆಯಲು ವಿಫಲವಾಗಿದ್ದಾರೆ. ಉಮೇಶ್ ಯಾದವ್ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
 

click me!