ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ, ಹೊಟ್ಟೆಯ ಚೆಂಡು ಬಿದ್ದು ತೀವ್ರ ಗಾಯ ಮತ್ತು ಸ್ನಾಯು ಸೆಳೆತದ ನಡುವೆಯೂ ಆಲ್-ರೌಂಡರ್ ಕೃನಾಲ್ ಪಾಂಡ್ಯ 73 ರನ್ ಗಳಿಸಿ ಆರ್‌ಸಿಬಿಗೆ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಗಾಯ ತೋರಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ರೋಚಕ ಜಯ ತಂದುಕೊಟ್ಟ ಆಲ್-ರೌಂಡರ್ ಕೃನಾಲ್ ಪಾಂಡ್ಯ, ಪಂದ್ಯದ ನಂತರ ತಮ್ಮ ಗಾಯದ ಗುರುತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕೆಲವು ಗಾಯದ ಗುರುತುಗಳು ನಾವು ನಡೆಸಿದ ಹೋರಾಟಕ್ಕೆ ಯೋಗ್ಯವಾದ ಪುರಾವೆಗಳಾಗಿವೆ' ಎಂದು ಬರೆಯುವ ಮೂಲಕ ತಮ್ಮ ಹೋರಾಟದ ಹಾದಿಯನ್ನು ಅವರು ವಿವರಿಸಿದ್ದಾರೆ.
26
ಕ್ರುನಾಲ್ ಪಾಂಡ್ಯ ಸಾಹಸಗಾಥೆ
ಮುಂಬೈ ಇಂಡಿಯನ್ಸ್ ನೀಡಿದ್ದ 167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಒಂದು ಹಂತದಲ್ಲಿ 39 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅನುಭವೀ ಬ್ಯಾಟರ್ ವಿರಾಟ್ ಕೊಹ್ಲಿ ಸತತ ಎರಡನೇ ಬಾರಿಗೆ 'ಗೋಲ್ಡನ್ ಡಕ್' ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.
ಈ ವೇಳೆ ಕ್ರೀಸ್‌ಗೆ ಬಂದ ಕೃನಾಲ್ ಪಾಂಡ್ಯ ಅಕ್ಷರಶಃ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ತೀವ್ರವಾದ ಸ್ನಾಯು ಸೆಳೆತ (Cramps) ಮತ್ತು ನೋವಿನ ನಡುವೆಯೂ ಕೇವಲ 46 ಎಸೆತಗಳಲ್ಲಿ 73 ರನ್ ಚಚ್ಚಿದರು. ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳಿದ್ದವು. ಅವರ ಈ ಸಾಹಸಮಯ ಇನ್ನಿಂಗ್ಸ್ ಆರ್‌ಸಿಬಿಗೆ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
36
ಮೈದಾನದಲ್ಲೇ ಕುಸಿದ ಕೃನಾಲ್ ಪಾಂಡ್ಯ
ದೀಪಕ್ ಚಹರ್ ಎಸೆದ ಚೆಂಡು ಹೊಟ್ಟೆಗೆ ಬಡಿದು ಅವಾಂತರ! ಮುಂಬೈ: ಐಪಿಎಲ್ ಪಂದ್ಯವೊಂದರ ವೇಳೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಕೃನಾಲ್ ಪಾಂಡ್ಯ ಮೈದಾನದಲ್ಲೇ ನೋವಿನಿಂದ ಕುಸಿದು ಬಿದ್ದ ಘಟನೆ ನಡೆದಿದೆ. ದೀಪಕ್ ಚಹರ್ ಎಸೆದ ವೇಗದ ಚೆಂಡು ನೇರವಾಗಿ ಕೃನಾಲ್ ಅವರ ಹೊಟ್ಟೆಯ ಭಾಗಕ್ಕೆ ಬಡಿದಿದ್ದೇ ಈ ಅವಾಂತರಕ್ಕೆ ಕಾರಣವಾಯಿತು.
ಘಟನೆಯ ವಿವರ: ಪಂದ್ಯದ 17ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ದೀಪಕ್ ಚಹರ್ ಎಸೆದ 16.1ನೇ ಎಸೆತವು ತುಸು ನಿಧಾನಗತಿಯಿಂದ ಕೂಡಿತ್ತು (Slower Ball). ಶಾರ್ಟ್ ಲೆಂತ್‌ನಲ್ಲಿ ಬಂದ ಈ ಚೆಂಡನ್ನು ಕೃನಾಲ್ ಪಾಂಡ್ಯ ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡಿನ ವೇಗವನ್ನು ಅಂದಾಜಿಸುವಲ್ಲಿ ಕೃನಾಲ್ ವಿಫಲರಾದರು. ಬ್ಯಾಟಿಗೆ ಸಿಗದ ಚೆಂಡು ನೇರವಾಗಿ ಅವರ ಹೊಟ್ಟೆಯ ಭಾಗಕ್ಕೆ (Abdomen) ಬಡಿಯಿತು.
ಚೆಂಡು ಬಡಿದ ತಕ್ಷಣ ಕೃನಾಲ್ ಪಾಂಡ್ಯ ಮೈದಾನದಲ್ಲೇ ಮಲಗಿ ನೋವಿನಿಂದ ವಿಲವಿಲನೆ ಒದ್ದಾಡಿದರು. ಇದನ್ನು ಕಂಡು ತಕ್ಷಣವೇ ಫಿಸಿಯೋ ಮೈದಾನಕ್ಕೆ ಓಡಿ ಬಂದರು. ಕೃನಾಲ್ ಅವರ ಸ್ಥಿತಿ ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕ್ಷಣಕಾಲ ಆತಂಕಕ್ಕೊಳಗಾಗಿದ್ದರು.
ಟಾಸ್ ಗೆದ್ದ ಆರ್‌ಸಿಬಿ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಭುವನೇಶ್ವರ್ ಕುಮಾರ್ (4/23) ಅವರ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 28 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಆದರೆ ನಮನ್ ಧೀರ್ (47) ಮತ್ತು ತಿಲಕ್ ವರ್ಮಾ (57) ಅವರ ಜವಾಬ್ದಾರಿಯುತ ಆಟದಿಂದ ಮುಂಬೈ ತಂಡ 20 ಓವರ್‌ಗಳಲ್ಲಿ 166 ರನ್ ಗಳಿಸಿತು.
ಆರ್‌ಸಿಬಿ ಪರ ರನ್ ಬೆನ್ನಟ್ಟುವಾಗ ಅಗ್ರ ಕ್ರಮಾಂಕ ವೈಫಲ್ಯ ಕಂಡರೂ, ಕ್ರುನಾಲ್ ಪಾಂಡ್ಯ ಮತ್ತು ಜಾಕೋಬ್ ಬೆಥೆಲ್ (26) ಜೋಡಿ 55 ರನ್‌ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಕೊನೆಯಲ್ಲಿ ಜಿತೇಶ್ ಶರ್ಮಾ (18) ನೆರವು ನೀಡಿದರು. ಕೊನೆಯ ಓವರ್‌ನಲ್ಲಿ 12 ರನ್ ಬೇಕಿದ್ದಾಗ, ಭುವನೇಶ್ವರ್ ಕುಮಾರ್ ಬಾರಿಸಿದ ಒಂದು ಸಿಕ್ಸರ್ ಮತ್ತು ರಾಸಿಖ್ ಸಲಾಮ್ ದಾರ್ ಅವರ ಸಮಯೋಚಿತ ಆಟದಿಂದ ಆರ್‌ಸಿಬಿ ಪಂದ್ಯವನ್ನು ಗೆದ್ದುಕೊಂಡಿತು.
56
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ:
ಈ ಅದ್ಭುತ ಗೆಲುವಿನೊಂದಿಗೆ ಆರ್‌ಸಿಬಿ ತಂಡ ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆಡಿದ 11 ಪಂದ್ಯಗಳಲ್ಲಿ 7 ಗೆಲುವು ಮತ್ತು 4 ಸೋಲುಗಳೊಂದಿಗೆ ಪ್ಲೇ ಆಫ್ ಹಂತಕ್ಕೆ ತನ್ನ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದೆ. ಇತ್ತ ಸೋಲು ಕಂಡ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಅಧಿಕೃತವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿವೆ.
66
150ರ ಸ್ಟ್ರೈಕ್ ರೇಟ್
ಕೃನಾಲ್ ಪಾಂಡ್ಯ ಈ ಋತುವಿನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದು, 6 ಇನ್ನಿಂಗ್ಸ್‌ಗಳಲ್ಲಿ 141 ರನ್ ಗಳಿಸಿದ್ದಾರೆ. 150ರ ಸ್ಟ್ರೈಕ್ ರೇಟ್ ಮತ್ತು 35.50ರ ಸರಾಸರಿಯಲ್ಲಿ ಬ್ಯಾಟ್ ಮಾಡುತ್ತಿರುವ ಅವರು, ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿದ್ದಾರೆ. ಅವರ ಹೋರಾಟದ ಗುಣವು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು 'ಯಾರೀ ಈ ಕಲಿ' ಎಂದು ಶ್ಲಾಘಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.