ಅಲ್ಲಾ ಮೊಹಮ್ಮದ್ ಘಜನ್‌ಫರ್, ಆಫ್ಘಾನಿಸ್ತಾನ
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಐಪಿಎಲ್ 2025 ಮೆಗಾ ಹರಾಜಿನ ಎರಡನೇ ದಿನದಂದು, ಆಫ್ಘಾನಿಸ್ತಾನದ ಯುವ ಸ್ಪಿನ್ ಬೌಲರ್ ಅಲ್ಲಾ ಮೊಹಮ್ಮದ್ ಘಜನ್‌ಫರ್‌ರರನ್ನು ಮುಂಬೈ ಇಂಡಿಯನ್ಸ್ 4.80 ಕೋಟಿಗೆ ಖರೀದಿಸಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಅಲ್ಲಾ ಮೊಹಮ್ಮದ್ ಘಜನ್‌ಫರ್ ಯಾರು?
ಮಾರ್ಚ್ 20, 2006 ರಂದು ಆಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ ಜನಿಸಿದ ಅಲ್ಲಾ ಮೊಹಮ್ಮದ್ ಘಜನ್‌ಫರ್, ಕ್ರಿಕೆಟ್ ಜಗತ್ತಿನಲ್ಲಿ ವೇಗವಾಗಿ ಹೆಸರು ಗಳಿಸುತ್ತಿದ್ದಾರೆ. ಮಿಸ್ಟ್ರಿ ಸ್ಪಿನ್ನರ್ ಆಗಿರುವ ಘಜನ್‌ಫರ್ ಮೇಲೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಟ್ಟು ಹಿಡಿದು ಖರೀದಿಸುವಲ್ಲಿ ಯಶಸ್ವಿಯಾಗಿದೆ.
ಆರು ಒಡಹುಟ್ಟಿದವರ ಕುಟುಂಬದಿಂದ ಬಂದ ಘಜನ್‌ಫರ್, ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಇದೀಗ ಘಜನ್‌ಫರ್, ಜಗತ್ತಿನ ಶ್ರೀಮಂತ ಟಿ20 ಲೀಗ್ ಎಂದೇ ಗುರುತಿಸಿಕೊಂಡಿರುವ ಐಪಿಎಲ್ ಟೂರ್ನಿಯಲ್ಲಿ ಮಾಂತ್ರಿಕ ಬೌಲಿಂಗ್ ಮೂಲಕ ಮಿಂಚು ಹರಿಸಲು ಸಜ್ಜಾಗಿದ್ದಾರೆ.
ಆಫ್ಘಾನ್ ಸ್ಪಗೀಜಾ ಕ್ರಿಕೆಟ್ ಲೀಗ್‌ನಲ್ಲಿ ಮಿಸ್ ಐನಕ್ ನೈಟ್ಸ್ ತಂಡಕ್ಕಾಗಿ ಘಜನ್‌ಫರ್‌ರ ದೇಶೀಯ ಕ್ರಿಕೆಟ್ ವೃತ್ತಿ ಜೀವನ ಆರಂಭವಾಯಿತು. ಅಗಿನಿಂದಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಈ ಆಟಗಾರನ ಮೇಲೆ ಕಣ್ಣಿಟ್ಟಿತ್ತು.
ಮಾರ್ಚ್ 2024 ರ ಐಪಿಎಲ್ ಟೂರ್ನಿಯಲ್ಲಿ, ಗಾಯಗೊಂಡ ಮುಜೀಬ್ ಉರ್ ರೆಹಮಾನ್‌ಗೆ ಬದಲಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು ಘಜನ್‌ಫರ್‌ರನ್ನು ಒಪ್ಪಂದ ಮಾಡಿಕೊಂಡು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆ ಬಳಿಕ ತಂಡದಿಂದ ರಿಲೀಸ್ ಮಾಡಿತ್ತು.
ಘಜನ್‌ಫರ್ ಅವರ ಅತ್ಯುತ್ತಮ ಆಟದಿಂದಾಗಿ, 2024ರ 19 ವರ್ಷದೊಳದವರ ಕ್ರಿಕೆಟ್ ವಿಶ್ವಕಪ್‌ನ ಆಫ್ಘಾನಿಸ್ತಾನ ತಂಡದಲ್ಲಿ ಸ್ಥಾನ ಪಡೆದರು. ಮುಂಬೈ ತಂಡದ ಸ್ಪಿನ್ ಬೌಲಿಂಗ್ ವಿಭಾಗ ಗಟ್ಟಿಗೊಳಿಸಲು ಫ್ರಾಂಚೈಸಿ ಈ ಆಫ್‌ಸ್ಪಿನ್ನರ್‌ಗೆ ಮಣೆ ಹಾಕಿದೆ
ಘಜನ್‌ಫರ್
ಇದೀಗ 2025ರಲ್ಲಿ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಘಜನ್‌ಫರ್ ರಂಗಪುರ್ ರೈಡರ್ಸ್ ತಂಡಕ್ಕಾಗಿ ಆಡಲಿದ್ದಾರೆ. 18 ವರ್ಷದ ಬಲಗೈ ಆಫ್‌ಸ್ಪಿನ್ನರ್, ಮುಂಬೈ ತಂಡದ ಪರ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ