IPL 2026: ಭಾರೀ ಬೇಸಿಗೆಯ ಬಿಸಿ ಮತ್ತು ಆಟಗಾರರ ಆರೋಗ್ಯದ ದೃಷ್ಟಿಯಿಂದ, ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಿಗೆ ಸ್ಥಳಾಂತರಿಸುವ ಬಗ್ಗೆ ಬಿಸಿಸಿಐ ಗಂಭೀರವಾಗಿ ಚಿಂತನೆ ನಡೆಸಿದೆ. ಈ ಅವಧಿಯು ಜಾಹೀರಾತುದಾರರಿಗೆ 'ಗೋಲ್ಡನ್ ವಿಂಡೋ' ಆಗಲಿದೆ ಎನ್ನಲಾಗಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್‌ನಿಂದ ಮೇ ತಿಂಗಳವರೆಗೆ ಐಪಿಎಲ್ (IPL) ಟಿ20 ಕ್ರಿಕೆಟ್ ಟೂರ್ನಿ ನಡೆಯುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮೇ ತಿಂಗಳಲ್ಲಿ ಹೆಚ್ಚುತ್ತಿರುವ ತೀವ್ರ ಬಿಸಿಲು ಮತ್ತು ಶಾಖದ ಅಲೆಗಳಿಂದಾಗಿ, ಪಂದ್ಯಗಳನ್ನು ಸೆಪ್ಟೆಂಬರ್-ಅಕ್ಟೋಬರ್‌ಗೆ ಹಾಕುವ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯೋಚಿಸುತ್ತಿದೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
24
ಮೇನಲ್ಲಿ ಕ್ರಿಕೆಟ್ ಕಷ್ಟ!
ಹವಾಮಾನ ಬದಲಾವಣೆಯಿಂದಾಗಿ, ಮೇ ತಿಂಗಳಲ್ಲಿ ಪಂದ್ಯಗಳನ್ನು ಆಯೋಜಿಸುವುದು ದೊಡ್ಡ ಸವಾಲಾಗಿದೆ. ವಿಪರೀತ ಬಿಸಿಲು ಮತ್ತು ಹೆಚ್ಚಿನ ತೇವಾಂಶದಿಂದ (Humidity) ಆಟಗಾರರು ಬೇಗನೆ ಸುಸ್ತಾಗುತ್ತಾರೆ. ಜೊತೆಗೆ ಸ್ನಾಯು ಸೆಳೆತ (Cramps) ಮತ್ತು ಗಾಯಗಳಿಂದ ಬಳಲುತ್ತಾರೆ. ಅಂತರರಾಷ್ಟ್ರೀಯ ಪಂದ್ಯಗಳನ್ನು ನಿರಂತರವಾಗಿ ಆಡಿ ಬರುವ ಆಟಗಾರರಿಗೆ ಸಾಕಷ್ಟು ವಿಶ್ರಾಂತಿ ಸಿಗುವುದಿಲ್ಲ. ಹೀಗಾಗಿ, ಆಟಗಾರರ ಹಿತದೃಷ್ಟಿಯಿಂದ ಮತ್ತು ಗಾಯಗಳನ್ನು ತಪ್ಪಿಸಲು ಬಿಸಿಸಿಐ ಈ ಹೊಸ ವೇಳಾಪಟ್ಟಿಯ ಬಗ್ಗೆ ಪರಿಶೀಲಿಸುತ್ತಿದೆ.
34
ಸೆಪ್ಟೆಂಬರ್-ಅಕ್ಟೋಬರ್ ತಿಂಗಳು ಬೆಸ್ಟ್!
ಜಾಹೀರಾತುದಾರರು ಮತ್ತು ಪ್ರಸಾರಕರ ದೃಷ್ಟಿಕೋನದಿಂದ ನೋಡಿದರೆ, ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು ಬಹಳ ಅನುಕೂಲಕರ ಸಮಯ. ಏಕೆಂದರೆ, ಭಾರತದಲ್ಲಿ ಈ ಸಮಯದಲ್ಲಿ ದೀಪಾವಳಿ ಸೇರಿದಂತೆ ಹಬ್ಬಗಳ ಸೀಸನ್ ಶುರುವಾಗುತ್ತದೆ. ಹೀಗಾಗಿ, ಕಂಪನಿಗಳು ತಮ್ಮ ಜಾಹೀರಾತುಗಳಿಗಾಗಿ ಹೆಚ್ಚು ಹೂಡಿಕೆ ಮಾಡಲು ಸಿದ್ಧವಾಗಿರುತ್ತವೆ.
'ಪಂದ್ಯಗಳನ್ನು ಬೇರೆ ತಿಂಗಳಿಗೆ ಬದಲಾಯಿಸುವ ಬಗ್ಗೆ ಪ್ರಸಾರಕರೊಂದಿಗೆ ವಿವರವಾಗಿ ಚರ್ಚಿಸಬೇಕು. ಸೆಪ್ಟೆಂಬರ್-ಅಕ್ಟೋಬರ್ ವಿಂಡೋ ಜಾಹೀರಾತುದಾರರಿಗೆ ಅತ್ಯುತ್ತಮ ಸಮಯ. ಮುಂದಿನ ದ್ವಿಪಕ್ಷೀಯ ಹಕ್ಕುಗಳ ಟೆಂಡರ್ (Bilateral Tender) ಬಂದಾಗ, ನಾವು ಈ ಸಾಧ್ಯತೆಗಳನ್ನು ಪರಿಶೀಲಿಸುತ್ತೇವೆ' ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಐಪಿಎಲ್ ಆಡಳಿತ ಮಂಡಳಿಯು 2028ರಿಂದ ಪಂದ್ಯಗಳ ಸಂಖ್ಯೆಯನ್ನು ಈಗಿರುವ 74ರಿಂದ 94ಕ್ಕೆ ಹೆಚ್ಚಿಸಲು ಯೋಜಿಸುತ್ತಿದೆ. ಈಗಿನ ಎರಡು ತಿಂಗಳ ಅವಧಿಯಲ್ಲಿ ಇಷ್ಟು ಪಂದ್ಯಗಳನ್ನು ನಡೆಸುವುದು ಅಸಾಧ್ಯ. ಹೀಗಾಗಿ, ಟೂರ್ನಿಯನ್ನು ಎರಡು ಭಾಗಗಳಾಗಿ ವಿಂಗಡಿಸಿ, ಒಂದು ಭಾಗವನ್ನು ಫೆಬ್ರವರಿ-ಏಪ್ರಿಲ್‌ನಲ್ಲಿ ಮತ್ತು ಇನ್ನೊಂದು ಭಾಗವನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸುವ ಆಲೋಚನೆಯೂ ಇದೆ.
ಅಂತಿಮ ನಿರ್ಧಾರವು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ವೇಳಾಪಟ್ಟಿ ಮತ್ತು ಇತರ ದೇಶಗಳ ಕ್ರಿಕೆಟ್ ಮಂಡಳಿಗಳ ಒಪ್ಪಿಗೆಯನ್ನು ಅವಲಂಬಿಸಿರುತ್ತದೆ. ಸದ್ಯಕ್ಕೆ ಯಾವುದೇ ಆತುರವಿಲ್ಲ, ಎಲ್ಲರೊಂದಿಗೆ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಐಪಿಎಲ್ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.