ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂಗ್ಲೆಂಡ್ ಆಟಗಾರರು ದೊಡ್ಡ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ 52 ಇಂಗ್ಲೆಂಡ್ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಇಂಗ್ಲೆಂಡ್ ತಂಡದ ಟಿ20 ಸ್ಪೆಷಲಿಸ್ಟ್ ಆಟಗಾರರಾದ ಫಿಲ್ ಸಾಲ್ಟ್, ಜೋಸ್ ಬಟ್ಲರ್ ಅವರಿಂದ ಹಿಡಿದು 42 ವರ್ಷದ ಮಾಜಿ ವೇಗಿ ಜೇಮ್ಸ್ ಆಂಡರ್‌ಸನ್ ಕೂಡಾ ಇದೀಗ ಹರಾಜಿಗೆ ಹೆಸರು ನೋಂದಾಯಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್‌ನ ಬಹುಬೇಡಿಕೆಯ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
1. ಜೋಸ್ ಬಟ್ಲರ್:
ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಪೋಟಕ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಜೋಸ್ ಬಟ್ಲರ್, ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವಂತ ಅಟಗಾರನಾಗಿದ್ದು, ಈ ಬಾರಿಯ ಹರಾಜಿನಲ್ಲಿ ಬಟ್ಲರ್ ದೊಡ್ಡ ಮೊತ್ತಕ್ಕೆ ಹರಾಜಾಗಬಲ್ಲ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
2. ಫಿಲ್ ಸಾಲ್ಟ್:
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗುವಲ್ಲಿ ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟರ್ ಫಿಲ್ ಸಾಲ್ಟ್ ಪ್ರಮುಖ ಪಾತ್ರ ವಹಿಸಿದ್ದರು. ಸಾಲ್ಟ್ ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
3. ಜೋಫ್ರಾ ಆರ್ಚರ್:
ಗಾಯದ ಸಮಸ್ಯೆಯಿಂದಾಗಿ ಮಾರಕ ವೇಗಿ ಜೋಫ್ರಾ ಆರ್ಚರ್ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಜೋಫ್ರಾ ಆರ್ಚರ್ ಸಂಪೂರ್ಣ ಫಿಟ್ ಆಗಿದ್ದು, ಇಂಗ್ಲೆಂಡ್ ಪರ ಮಿಂಚುತ್ತಿದ್ದಾರೆ. ಆರ್ಚರ್ ಲಯದಲ್ಲಿದ್ದರೇ ಎಂತಹ ಅಪಾಯಕಾರಿ ಬೌಲರ್ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
4. ಸ್ಯಾಮ್ ಕರ್ರನ್:
ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಇಂಗ್ಲೆಂಡ್ ಆಟಗಾರ ಎನಿಸಿಕೊಂಡಿರುವ ಸ್ಯಾಮ್ ಕರ್ರನ್ ಅವರನ್ನು ಪಂಜಾಬ್ ಫ್ರಾಂಚೈಸಿ ರಿಲೀಸ್ ಮಾಡಿದೆ. ಹೀಗಾಗಿ ಸ್ಯಾಮ್ ಕರ್ರನ್ ಮತ್ತೊಮ್ಮೆ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸ್ಯಾಮ್ ಕರ್ರನ್ ಅವರು ಕೂಡಾ ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
5. ಲಿಯಾಮ್ ಲಿವಿಂಗ್‌ಸ್ಟೋನ್:
ಕಳೆದೆರಡು ಐಪಿಎಲ್ ಟೂರ್ನಿಯಲ್ಲಿ ಕೊಂಚ ಮಂಕಾಗಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ. ಹೀಗಾಗಿ ಲಿವಿಂಗ್‌ಸ್ಟೋನ್ ಮೇಲೂ ಐಪಿಎಲ್ ಫ್ರಾಂಚೈಸಿಗಳು ಹದ್ದಿನಗಣ್ಣಿಟ್ಟಿವೆ.