IPL Auction 2022: ಆಟಗಾರರ ಹರಾಜು ಮತ್ತಷ್ಟು ತಡವಾಗುವ ಸಾಧ್ಯತೆ..!

First Published Dec 20, 2021, 11:27 AM IST

ನವದೆಹಲಿ: ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿಗೆ ಈಗಿನಿಂದಲೇ ಭರದ ಸಿದ್ದತೆಗಳು ಆರಂಭವಾಗಿದೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಈಗಿರುವ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನುಳಿದ 2 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಆಯ್ದುಕೊಳ್ಳಬಹುದಾಗಿದೆ. ಇದೆಲ್ಲದರ ನಡುವೆ ಐಪಿಎಲ್ ಮೆಗಾ ಹರಾಜು (IPL Mega Auction) ಕೊಂಚ ತಡವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

15ನೇ ಆವೃತ್ತಿಯ ಐಪಿಎಲ್‌ಗೆ ಲಖನೌ ಫ್ರಾಂಚೈಸಿಯು ಈಗಾಗಲೇ ಗೌತಮ್ ಗಂಭೀರ್ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ದಿಟ್ಟ ಹೆಜ್ಜೆಯಿಟ್ಟಿದೆ. ಇನ್ನು ಹೆಡ್‌ ಕೋಚ್ ಆಗಿ ಆ್ಯಂಡಿ ಫ್ಲವರ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.
 

2022ನೇ ಆವೃತ್ತಿಯ ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಮೊದಲು ಜನವರಿ ಮೊದಲ ವಾರ ಹರಾಜು ಪ್ರಕ್ರಿಯೆ ನಡೆಸಲು ಬಿಸಿಸಿಐ ಉದ್ದೇಶಿಸಿತ್ತು. 

ಆದರೆ ಜನವರಿ ಮೂರನೇ ವಾರಕ್ಕೂ ಮುನ್ನ 15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ನಡೆಯುವುದು ಅನುಮಾನ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಐಪಿಎಲ್‌ ಅಭಿಮಾನಿಗಳು ಹರಾಜಿಗೆ ಕೊಂಚ ಕಾಯಬೇಕಾಗಿದೆ.
 

ಐಪಿಎಲ್‌ನ ಹೊಸ ತಂಡಗಳ ಪೈಕಿ ಅಹಮದಾಬಾದ್‌ ತಂಡವನ್ನು ಖರೀದಿಸಿದ ಲಕ್ಸೆಂಬರ್ಗ್‌ ಮೂಲಕ ಸಿವಿಸಿ ಕ್ಯಾಪಿಟಲ್ಸ್‌ ಸಂಸ್ಥೆ, ಬೆಟ್ಟಿಂಗ್‌ ಕಂಪನಿಗಳ ಜೊತೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು. 

ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಬಗ್ಗೆ ತನಿಖೆಗೆ ಸ್ವತಂತ್ರ ಸಮಿತಿಯನ್ನು ರಚಿಸಿದ್ದು, ಸಮಿತಿಯು ಇನ್ನಷ್ಟೇ ಈ ಬಗ್ಗೆ ವರದಿ ಸಲ್ಲಿಸಬೇಕಿದೆ. ಹೀಗಾಗಿ ಹರಾಜು ತಡವಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
 

ಮೆಗಾ ಹರಾಜಿಗೂ ಮುನ್ನ ಈಗಾಗಲೇ ಹಾಲಿ 8 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಂಪಿಟಲ್ಸ್, ಕೋಲ್ಕತ ನೈಟ್‌ ರೈಡರ್ಸ್‌ ಫ್ರಾಂಚೈಸಿಗಳು ತಲಾ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ.

ಇನ್ನು ಬೆಂಗಳೂರು ಮೂಲದ ಆರ್‌ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಲೆಕ್ಕಾಚಾರ ಹಾಕಿಕೊಂಡಿದೆ.
(photo Source- Instagram)

click me!