ಭಾರತ ಕ್ರಿಕೆಟ್ ತಂಡವು ಟೆಸ್ಟ್ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ತೆರಳುವುದಕ್ಕಿಂತ ಮುಂಚೆಯೇ ದೊಡ್ಡ ಹಿನ್ನೆಡೆಯುಂಟಾಗಿದ್ದು, ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಹಾಗೂ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ.
ಸ್ನಾಯು ಸೆಳೆತದಿಂದ ಬಳಲುತ್ತಿರುವ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ, ಡಿಸೆಂಬರ್ 26ರಿಂದ ಆರಂಭವಾಗಲಿರುವ ಫ್ರೀಡಂ ಟ್ರೋಫಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಟೆಸ್ಟ್ ತಂಡದ ಉಪನಾಯಕರಾಗಿ ಆಯ್ಕೆಯಾಗಿದ್ದರು. ಇದೀಗ ರೋಹಿತ್ ಅನುಪಸ್ಥಿತಿಯಲ್ಲಿ ಕೆ.ಎಲ್. ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.
ಎಎನ್ಐ ವರದಿಯ ಪ್ರಕಾರ, ಕೆ.ಎಲ್. ರಾಹುಲ್ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಉಪನಾಯಕನಾಗಿ ಸಾಥ್ ನೀಡಲಿದ್ದಾರೆ. ರಾಹುಲ್ ಈಗಾಗಲೇ ಟೀಂ ಇಂಡಿಯಾ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅಜಿಂಕ್ಯ ರಹಾನೆ, ಟೀಂ ಇಂಡಿಯಾ ಟೆಸ್ಟ್ ತಂಡದ ಉಪನಾಯಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದರು. ಇದರ ಜತೆಗೆ ರಹಾನೆ ನಾಯಕರಾಗಿದ್ದಾಗ ಟೀಂ ಇಂಡಿಯಾ ಒಮ್ಮೆಯೂ ಸೋಲಿನ ಕಹಿಯುಂಡಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಫಾರ್ಮ್ ಕೊರತೆ ಅನುಭವಿಸುತ್ತಿರುವ ರಹಾನೆ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೆಸ್ಟ್ ಉಪನಾಯಕನ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.
ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರಗೆ ಉಪನಾಯಕ ಪಟ್ಟ ಕಟ್ಟಬಹುದಿತ್ತು. ಆದರೆ ಸದ್ಯ ಪೂಜಾರ ಬ್ಯಾಟಿಂಗ್ ಫಾರ್ಮ್ ಅಜಿಂಕ್ಯ ರಹಾನೆಗಿಂತ ಭಿನ್ನವಾಗಿಲ್ಲ. ಹೀಗಾಗಿ ರಾಹುಲ್‌ಗೆ ಅದೃಷ್ಟ ಖುಲಾಯಿಸಿದೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದ ಭಾರತ ಟೆಸ್ಟ್ ತಂಡ ಹೀಗಿದೆ ನೋಡಿ:
ವಿರಾಟ್ ಕೊಹ್ಲಿ(ನಾಯಕ), ಪ್ರಿಯಾಂಕ್ ಪಾಂಚಲ್, ಕೆ. ಎಲ್. ರಾಹುಲ್, ಮಯಾಂಕ್ ಅಗರ್‌ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್(ವಿಕೆಟ್ ಕೀಪರ್), ವೃದ್ದಿಮಾನ್ ಸಾಹ(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.