ಅಕ್ಟೋಬರ್ 05ರಂದು ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 2019ರ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
ಇನ್ನು ಅತಿಥೇಯ ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 08ರಂದು 5 ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಚೆನ್ನೈನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
1. ವೇಳಾಪಟ್ಟಿ ಪ್ರಕಟಣೆ ವಿಳಂಬ!
ಸಾಮಾನ್ಯವಾಗಿ ವಿಶ್ವಕಪ್ ಆರಂಭಕ್ಕೆ ಒಂದು ವರ್ಷ ಮೊದಲು ಟೂರ್ನಿಯ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಆದರೆ ಈ ಬಾರಿ ವಿಶ್ವಕಪ್‌ಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗಲೂ ವೇಳಾಪಟ್ಟಿ ಪ್ರಕಟಗೊಂಡಿರಲಿಲ್ಲ. ಇದಕ್ಕೆ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವಿನ ತಿಕ್ಕಾಟ ಪ್ರಮುಖ ಕಾರಣ.
ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರದಿದ್ದರೆ, ವಿಶ್ವಕಪ್ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಪಾಕ್ ಪಟ್ಟು ಹಿಡಿದಿತ್ತು. ಕೊನೆಗೂ ಪಾಕಿಸ್ತಾನದ ಬೇಡಿಕೆಗೆ ಜಗ್ಗದ ಬಿಸಿಸಿಐ, ಜೂನ್‌ನಲ್ಲಿ ವೇಳಾಪಟ್ಟಿ ಪ್ರಕಟಿಸಿತು.
2. ಪಂದ್ಯ ಸಿಗದವರ ಸಿಟ್ಟು!
ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ್ದಕ್ಕೆ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ಮೇಲೆ ಸಿಟ್ಟಾದವು. ಮೊಹಾಲಿ, ರಾಜ್‌ಕೋಟ್, ರಾಂಚಿ, ಇಂದೋರ್ ಸೇರಿ ಕೆಲ ಪ್ರಮುಖ ನಗರಗಳಿಗೆ ಪಂದ್ಯಗಳು ಕೈತಪ್ಪುತ್ತಿದ್ದಂತೆ ಆಯಾ ರಾಜ್ಯ ಸಂಸ್ಥೆಗಳ ಅಧಿಕಾರಿಗಳು ಬಹಿರಂಗವಾಗಿ ಬಿಸಿಸಿಐ ಮೇಲೆ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು. ಆಕ್ರೋಶದ ಜ್ವಾಲೆಯನ್ನು ನಂದಿಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹಲವು ಅಸ್ತ್ರಗಳನ್ನು ಪ್ರಯೋಗಿಸಬೇಕಾಯಿತು.
3. ವೇಳಾಪಟ್ಟಿ ಪದೇ ಪದೇ ಬದಲು!
ಒಮ್ಮೆ ಪ್ರಕಟಗೊಂಡ ವೇಳಾಪಟ್ಟಿ ಬದಲಾಗುವುದು ಅಪರೂಪ. ಆದರೆ ಬಿಸಿಸಿಐ ಹಲವು ಬಾರಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು, ತಂಡಗಳಿಗೆ ಮಾತ್ರವಲ್ಲ ಪಂದ್ಯ ವೀಕ್ಷಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ಅಭಿಮಾನಿಗಳಿಗೂ ಸಮಸ್ಯೆ ಉಂಟು ಮಾಡಿತು. ನ.15ರಂದು ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಪಂದ್ಯ ನ.14ಕ್ಕೆ ಸೇರಿ 5 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಬದಲಿಸಿತು.
4. ಟಿಕೆಟ್ ಮಾರಾಟ ಗೊಂದಲ
ವಿಶ್ವಕಪ್ ಪಂದ್ಯಗಳ ಟಿಕೆಟ್ ಮಾರಾಟ ಗೊಂದಲದ ಗೂಡಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಅಭಿಮಾನಿಗಳು ಹಿಗ್ಗಾಮುಗ್ಗಾ ಬೈದ ಪರಿಣಾಮ, ಬಿಸಿಸಿಐ ಮತ್ತಷ್ಟು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಡುವುದಾಗಿ ತಿಳಿಸಿತು. ಕೆಲ ಮಾಜಿ ಆಟಗಾರರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಸಿಸಿಐ ಅನ್ನು ಮುಜುಗರಕ್ಕೆ ಸಿಲುಕಿಸಿತು.