ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾದ ಆಫರ್ ತಿರಸ್ಕರಿಸಿದ 'ಡೂಪ್ಲಿಕೇಟ್ ಅಶ್ವಿನ್‌'..!

First Published | Oct 1, 2023, 4:27 PM IST

ಬೆಂಗಳೂರು: ಬಹುನಿರೀಕ್ಷಿತ 2023ರ ಐಸಿಸಿ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಹೊಸ ತಲೆನೋವು ಆರಂಭವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ನವೆಂಬರ್ 19ರವರೆಗೆ ಭಾರತದ ವಿವಿಧ 10 ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಪೂರ್ಣ ವಿಶ್ವಕಪ್ ಟೂರ್ನಿಗೆ ಇದೇ ಮೊದಲ ಬಾರಿಗೆ ಭಾರತ ಆತಿಥ್ಯವನ್ನು ವಹಿಸಿದೆ.
 

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ.
 

Latest Videos


ಇನ್ನು 5 ಬಾರಿಯ ವಿಶ್ವಕಪ್ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಅಕ್ಟೋಬರ್ 08ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
 

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಬಾರಿಯ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿವೆ. ಹೀಗಾಗಿ ಮೊದಲ ಪಂದ್ಯದಲ್ಲೇ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಇನ್ನು ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಭಾರತ ತಂಡದೊಳಗೆ ಹೊಸ ಬೌಲಿಂಗ್ ಅಸ್ತ್ರ ಸೇರ್ಪಡೆಯಾಗಿದೆ. ವಿಶ್ವಕಪ್ ಟೂರ್ನಿಗೆ ಕೊನೆಯ ಕ್ಷಣದಲ್ಲಿ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಮಣೆ ಹಾಕಲಾಗಿದೆ.
 

ರವಿಚಂದ್ರನ್ ಅಶ್ವಿನ್, ಆಸ್ಟ್ರೇಲಿಯಾ ಎದುರು ಎಷ್ಟು ಅಪಾಯಕಾರಿ ಬೌಲರ್ ಎನ್ನುವುದು ಈಗಾಗಲೇ ಸಾಬೀತು ಮಾಡಿ ತೋರಿಸಿದ್ದಾರೆ. ಇದೀಗ ಅಶ್ವಿನ್‌, ಟೀಂ ಇಂಡಿಯಾ ಸೇರ್ಪಡೆ, ಕಾಂಗರೂ ಪಾಳಯದಲ್ಲಿ ತಲೆನೋವು ಹೆಚ್ಚುವಂತೆ ಮಾಡಿದೆ.

ಹೀಗಾಗಿ ಆಸ್ಟ್ರೇಲಿಯಾ ತಂಡವು, ಅಶ್ವಿನ್ ಅವರಂತೆಯೇ ಬೌಲಿಂಗ್ ಮಾಡುವ ಮಹೇಶ್ ಪಿಥಿಯಾ ಅವರನ್ನು ನೆಟ್‌ ಬೌಲರ್‌ ಆಗಿ ಆಯ್ಕೆ ಮಾಡಿಕೊಳ್ಳುವ ಆಫರ್ ನೀಡಿದೆ. ಆದರೆ ಸ್ವತಃ ಡೂಪ್ಲಿಕೇಟ್ ಅಶ್ವಿನ್ ಖ್ಯಾತಿಯ ಮಹೇಶ್ ಪಿಥಿಯಾ ಈ ಆಫರ್ ನಯವಾಗಿಯೇ ತಿರಸ್ಕರಿಸಿದ್ದಾರೆ.

ಆಸ್ಟ್ರೇಲಿಯಾದ ತಂಡದಲ್ಲಿ ಸೈಡ್ ಆರ್ಮರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪ್ರಿತೇಶ್ ಜೋಶಿ ಎನ್ನುವವರು ಕರೆ ಮಾಡಿ ಬ್ಯಾಗ್ ಪಾಕ್ ಮಾಡಿಕೊಂಡು ಅಕ್ಟೋಬರ್ 04ರೊಳಗಾಗಿ ಚೆನ್ನೈಗೆ ಬಂದು ಬಿಡಿ ಎಂದು ಆಫರ್ ನೀಡಿದ್ದಾರೆ.
 

ಅಶ್ವಿನ್ ಅವರನ್ನು ಟ್ಯಾಕಲ್ ಮಾಡಲು ಆಸ್ಟ್ರೇಲಿಯಾದ ಬ್ಯಾಟರ್‌ಗಳು ಸಾಕಷ್ಟು ಪರದಾಡುತ್ತಿದ್ದಾರೆ. ಹೀಗಾಗಿ ಅಶ್ವಿನ್ ಅವರನ್ನೇ ಅನುಕರಿಸುತ್ತಿರುವ ಬರೋಡಾ ಮೂಲದ ಮಹೇಶ್ ಪಿಥಿಯಾ ಅವರ ನೆರವು ಪಡೆಯಲು ಕಾಂಗರೂ ಪಡೆ ಮುಂದಾಗಿತ್ತು.

"ಮೊದಲಿಗೆ ಈ ಆಫರ್ ಕೇಳಿ ಥ್ರಿಲ್ ಆಯಿತು. ಆದರೆ ನಾನು ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಬರೋಡ ತಂಡದ ಭಾಗವಾಗಿದ್ದೇನೆ. ಹೀಗಾಗಿ ಅದರ ಬಗ್ಗೆ ಯೋಚಿಸಿದೆ. ನಂತರ ಕೋಚ್‌ಗಳ ಜತೆ ಮಾತನಾಡಿದ ಬಳಿಕ ಆಸ್ಟ್ರೇಲಿಯಾ ಕ್ಯಾಂಪ್ ಸೇರುವ ಆಲೋಚನೆಯನ್ನು ಕೈಬಿಟ್ಟಿದ್ದಾಗಿ" ಸ್ಪೋರ್ಟ್ಸ್‌ಸ್ಟಾರ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
 

ಈ ಮೊದಲು ಭಾರತ ಎದುರಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ವೇಳೆಯಲ್ಲೂ ಈ ಮಹೇಶ್ ಪಿಥಿಯಾ ಅವರನ್ನು ನೆಟ್ ಬೌಲರ್ ಆಗಿ ಕಾಂಗರೂ ಪಡೆ ಆಯ್ಕೆ ಮಾಡಿಕೊಂಡಿತ್ತು. ಹೀಗಿದ್ದೂ ಅಶ್ವಿನ್‌, ಆ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.

ಭಾರತವು ಸಾಮಾನ್ಯವಾಗಿ ಸ್ಪಿನ್ ಸ್ನೇಹಿ ಪಿಚ್ ಆಗಿರುವುದರಿಂದ ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದಂತಹ ದೇಶಗಳಿಗೆ ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸುವುದು ಕಬ್ಬಿಣದ ಕಡಲೆಯಾಗುವ ಸಾಧ್ಯತೆಯಿದೆ.  

click me!