ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಭಾರತ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ಐಸಿಸಿ ಪ್ರದರ್ಶನದ ಆಧಾರದ ಮೇಲೆ ವಿಶ್ವಕಪ್ ಟೂರ್ನಿಯ ವಿಶ್ವ ತಂಡ ಪ್ರಕಟಿಸಿದೆ.
2023ರ ವಿಶ್ವಕಪ್ ಟೂರ್ನಿಯಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನ ಆಧರಿಸಿ ಇದೀಗ ಐಸಿಸಿ ವಿಶ್ವ ತಂಡ ಪ್ರಕಟಿಸಿದೆ. ಈ ತಂಡಕ್ಕೆ ಟೂರ್ನಿಯಲ್ಲಿ ಅತ್ಯುತ್ತಮ ನಾಯಕತ್ವದ ಜೊತೆಗೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ಪ್ರಕಟಿಸಿದ ವಿಶ್ವ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾ ಒಟ್ಟು 6 ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಇತ್ತ ಚಾಂಪಿಯನ್ ಆಸ್ಟ್ರೇಲಿಯಾ ತಂಡದಿಂದ ಕೇವಲ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ.
6 ಮಂದಿ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.
ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾಗೆ ಚಾಂಪಿಯನ್ ಕಿರೀಟ ತೊಡಿಸಿದ ಟ್ರಾವಿಸ್ ಹೆಡ್ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆಸಿಸ್ ತಂಡದಿಂದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಆ್ಯಡಮ್ ಜಂಪಾ ಇಬ್ಬರೇ ಸ್ಥಾನ ಪಡೆದಿದ್ದಾರೆ.
ಸೆಮಿಫೈನಲ್ ಪ್ರವೇಶಿಸಿದ ಸೌತ್ ಆಫ್ರಿಕಾ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿಕಾಕ್ ಮಾತ್ರ ಸ್ಥಾನ ಪಡೆದಿದ್ದಾರೆ. ಈ ಬಾರಿ ಯೂರ್ನಿಯಲ್ಲಿ ಡಿಕಾಕ್ 594 ರನ್ ಸಿಡಿಸಿದ್ದಾರೆ.
ಸೆಮಿಫೈನಲ್ ಪ್ರವೇಶಿಸಿ ಭಾರತದ ವಿರುದ್ದ ಮುಗ್ಗರಿಸಿದ ನ್ಯೂಜಿಲೆಂಡ್ ತಂಡದಿಂದ ಬ್ಯಾಟ್ಸ್‌ಮನ್ ಡರಿಲ್ ಮಿಚೆಲ್ ವಿಶ್ವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಡರಿಲ್ 552 ರನ್ ಸಿಡಿಸಿದ್ದಾರೆ.
2023ರಲ್ಲಿ ಶ್ರೀಲಂಕಾ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ 21 ವಿಕೆಟ್ ಕಬಳಿಸಿ ಮಿಂಚಿದ ದಿಲ್ಶಾನ್ ಮದುಶಂಕಾ ಸ್ಥಾನ ಪಡೆದಿದ್ದಾರೆ. ಇನ್ನು ಪಾಕಿಸ್ತಾನ, ಇಂಗ್ಲೆಂಡ್ ಸೇರಿದಂತೆ ಇತರ ತಂಡದಿಂದ ಕ್ರಿಕೆಟಿಗರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.